ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮನಸ್ಸಿನ ಸ್ವರೂಪ

೨೯೩

ಬಿಗಿಯಲ್ಪಟ್ಟ ಯುವಕನು ಈ ಪಿಶಾಚಿಯನ್ನು ಕಾಣುತ್ತಾನಂತೆ. ಅದನ್ನು ಕಂಡು ಬೆಬ್ಬರಗಾಗುತ್ತಾನಂತೆ. ಆಗ ಮೋಹಿನಿಯೇ ಗೆಜ್ಜೆಗಳನ್ನು ಕುಣಿಸುತ್ತಾ, ಹೆಜ್ಜೆಗಳನ್ನು ಮುಂದುಮುಂದಕ್ಕೆ ಹಾಕಿ, ಚೆಂದೊಳ್ಳಿ ಯುವಕನನ್ನು ಅಪ್ಪಿಕೊಳ್ಳುತ್ತದಂತೆ. ಅಪ್ಪಿಕೊಂಡು, ಅವನ ಸತ್ವವನ್ನೇ ಹೀರಿಬಿಡುತ್ತದಂತೆ. ಅನಂತರ ವಾಸ್ತವಿಕ ಪ್ರಪಂಚದಲ್ಲಿ, ಅವನ ಮಾನ ಮರ್ಯಾದೆಗಳು ಸುರಕ್ಷಿತವಾಗಿರುತ್ತದಂತೆ. ಆದರೆ ಅವನ ದೇಹವು, ಕ್ಷೀಣವಾಗಿ, ಸತ್ವವು ಕರಗುತ್ತಾ ನೀರಾಗುತ್ತದಂತೆ. ಮೋಹಿನೀ ಪಿಶಾಚಿಯು ಹಿಡಿದು ಅದುಮಿಕೊಂಡರೆ ಯವ್ವನದ ಯುವಕನು ಕ್ಷಯಿಸುವನಂತೆ.

ಅಸುರರಿಗೆ, ಪುರಾಣದ ಕತೆಗಳಲ್ಲಿ, ಮೋಹಿನಿಯು ಮೋಸಗೊಳಿಸುವುದನ್ನು ಇಲ್ಲಿ ನೆನಪು ಮಾಡಿಕೊಂಡು, ಪುರಾಣದ ಕತೆಗಳೂ, ಜನರಲ್ಲಿ ರೂಢಿತವಾದ ಪಿಶಾಚಿಗಳ ನಂಬಿಕೆಗಳಿಗೂ, ಇಂದಿನ ಮಾನವ ಮನಸ್ಸಿನ ಅರಿವನ್ನು ಪಡೆಯಲು ಶ್ರದ್ಧೆಯಿಂದ ಶ್ರಮಿಸಿದ ಮನೋವಿಜ್ಞಾನಿಗಳ, ತಾತ್ಕಾಲಿಕ ನಿರ್ಧಾರಕ್ಕೂ, ನಂಟು ಮತ್ತು ಗಂಟು ಇರುವುದನ್ನು ಸ್ಪಷ್ಟವಾಗಿ ಕಾಣಬಹುದು.

ದೆವ್ವ ಹಿಡಿದಿದೆ, ಪಿಶಾಚಿಯು ಮೆಟ್ಟಿಕೊಂಡಿದೆ, ಎಂದು ಕರೆಯಲ್ಪಡುವ ರೋಗಿಗಳು, ನಡವಳಿಕೆಯಲ್ಲಿ ವಿಪರೀತವಾದ ಹಾಗೂ ಅಭಾಸವಾದ ವರ್ತನೆಯನ್ನು ಕಾಣಿಸುತ್ತಾರೆ. ಕೆಲವರು ಬಕಾಸುರನಂತೆ ಮೇಲಿಂದ ಮೇಲೆ ತಿನ್ನುತ್ತಲೇ ಇರುತ್ತಾರೆ. ಧಾಂಡಿಗರಂತೆ ಹೊರವಾಗಿ ಬೆಳೆಯುತ್ತಾರೆ. ಯಾವ ನಿರ್ದಿಷ್ಟ ಕೆಲಸವನ್ನೂ ಮಾಡುವುದಿಲ್ಲ, ಹುಚ್ಚುನಾಯಿಯಂತೆ ಅಲೆದಾಡುತ್ತಾರೆ. ಅವರ ಆ ಕ್ಷಣದ ಇಷ್ಟಕ್ಕೆ ವಿರುದ್ಧವಾಗಿ ಯಾರಾದರೂ ತಡೆ ಹಾಕಿದರೆ, ಹುಚ್ಚಾಪಟ್ಟೆ ರೇಗುತ್ತಾರೆ, ಅಥವಾ ಬೆಪ್ಪು ಬಡಿದವರಂತೆ ಮೂಲೆ ಹಿಡಿಯುತ್ತಾರೆ, ಅಥವಾ ಹಾಸಿಗೆಯಲ್ಲಿ ಉರುಟಿಕೊಂಡಿರುತ್ತಾರೆ. ಮತ್ತೆ ಕೆಲವು ಪಿಶಾಚಿ ಮೆಟ್ಟಿದವರು, ಆಹಾರದ ಮೇಲೆ ನಿರ್ಲಕ್ಷ್ಯವನ್ನು ತೋರಿಸುತ್ತಾರೆ, ಕೃಶರಾಗುತ್ತಾರೆ.

ಪಿಶಾಚಿಗಳು, ದೆವ್ವಗಳು, ಭೂತಗಳು ಇವು ಅಮರಿಕೊಂಡಿವೆ ಎಂದು ಜನರು ಹೇಳುವುದು, ಮಾನಸಿಕ ಪಲ್ಲಟವಾದವರನ್ನು ಕುರಿತು. ದೆವ್ವವು ಹಿಡಿದಿದೆ ಎಂದಾಗ ನಮ್ಮ ಹತೋಟಿಯಲ್ಲಿರದೆ ಇತರ ಯಾವುದೋ ಅಗೋಚರವಾದ ದುಷ್ಟಶಕ್ತಿಯು, ಹೊರಗಿನಿಂದ ಬಂದು ರೋಗಿಯನ್ನು ಕಾಡಿ ನಡೆಸುತ್ತದೆ ಎಂದು ಭಾವಿಸುತ್ತೇವೆ. ರೋಗಿಯ ತಪ್ಪು ಇದರಲ್ಲೇನೂ ಇಲ್ಲ. ಆದರೆ ಮಾನಸಿಕ ರೋಗವು ಬಡಿದಿದೆ ಎಂದಾಗ, ಅಂತಹ ರೋಗಿಯ ಮನಸ್ಸು ಸಧೃಡವಾಗಿಲ್ಲ, ಆದಕಾರಣ ಪಲ್ಲಟವಾಯಿತು ಎಂಬ ಅರ್ಥವು ಬರುತ್ತದೆ. ರೋಗಿಯ ಸ್ವಂತ ಲೋಪದೋಷಗಳಿಂದ ಹೀಗಾಯಿತು ಎಂದರೆ ರೋಗಿಗೆ