ಮನಮಂಥನ
ಹೊತ್ತು ನಡೆಯುವಾಗ ಆರು ಹರಿದಾರಿ ನಡೆದಂತೆ ದಣಿವಾಗುತ್ತದೆ. ಅರ್ಧದಾರಿ ನಡೆದಿದ್ದೆ. ಅಲ್ಲೊಂದು ಅಶ್ವತ್ಥ ಕಟ್ಟೆ ಇದೆ. ಅದನ್ನು ಕಂಡಾಗ ಸ್ವಲ್ಪ ಹೊತ್ತು ಕುಳಿತುಕೊಂಡು ವಿಶ್ರಮಿಸಿಕೊಳ್ಳೋಣ ಎನಿಸಿತು; ಕುದುರೆಯನ್ನು ಕಂಡು ಕಾಲು ನೋವು ಕಾಣಿಸಿಕೊಳ್ಳುವಂತೆ. ಸಾಮಾನಿನ ಗಂಟನ್ನಿಳಿಸಿ, ಕಟ್ಟೆಯ ಮೇಲಿಟ್ಟು, ಷರಟಿನ ಗುಂಡಿಯನ್ನು ಬಿಚ್ಚಿ, ಹಾಯಂತ, ನಾಗರಕಲ್ಲನ್ನು ಒರಗಿಕೊಂಡು ಕುಳಿತೆ. ಹಗೂರು ಗಾಳಿಯು ಬೀಸುತ್ತಿತ್ತು. ಅಶ್ವತ್ಥಮರದ ಎಲೆಗಳು ನನಗೆ ಚಾಮರಸೇವೆಯನ್ನು ಮಾಡಿದವು. ದಣಿವು ಕಡಿಮೆಯಾಯಿತು. ತಲೆಯೆತ್ತಿ ಮರವನ್ನು ನೋಡಿದೆ. ಅದನ್ನು ಕಂಡು ಸ್ವಲ್ಪ ಹೊಟ್ಟೆಕಿಚ್ಚಾಯಿತು, ಆಗಂದುಕೊಂಡೆ:
'ಲೋ ಮರವೇ ! ನೀನೇ ಪುಣ್ಯವಂತ. ನೀನು ರಾಜಾ. ಇದ್ದಲ್ಲೇ ಇದ್ದು ಮೆರೆಯುತ್ತಿ, ಅಗತ್ಯವಾದ ಆಹಾರವೆಲ್ಲವೂ ನಿನ್ನ ಬಳಿಗೆ ಹರಿದುಬರುತ್ತದೆ. ಹಾಗೂ ಬೀಸಿ ಬರುತ್ತದೆ. ನಿಂತ ನೆಲದಿಂದ ಆಹಾರವನ್ನು ಮತ್ತು ನೀರನ್ನು ದೌಲತ್ತಿನಿಂದ ಹೀರಿಕೊಳ್ಳುತ್ತಿ. ಬೀಸುವ ಗಾಳಿಯಿಂದ ಅಗತ್ಯವಾದುದನ್ನು ಸೆಳೆದುಕೊಳ್ಳುತ್ತಿ. ನಿನ್ನ ಕಂಡರೆ ಮಾತ್ಸಯ್ಯ' ನನಗೆ.
“ನನ್ನ ಪಾಡು ನೋಡು, ಹೆಂಡತಿ ಮಕ್ಕಳ ಕಾಟಕ್ಕೋಸ್ಕರ, ಮತ್ತು ಹೊಟ್ಟೆ ಪಾಡಿಗಾಗಿ ದಿನ ಮೂಡಿದರೆ ನಾಯಿಯಂತೆ ಅಂಡಲೆಯಬೇಕು. ಸಂಪಾದಿಸಿ ರೇಷನ್ ಅಂಗಡಿಗೆ ಹೋಗಿ, ಹಣ ಕೊಟ್ಟರೂ ಭಿಕ್ಷೆ ಬೇಡುವಂತೆ, ಕೈಚಾಚಬೇಕು, ಭಾರದ ಗಂಟನ್ನು ಕತ್ತೆಯಂತೆ ಹೊತ್ತು ಮನೆಗೆ ಹೋಗಬೇಕು. ಅಲ್ಲಿ 'ಇಷ್ಟೇನೇ ತಂದಿದ್ದು' ಎಂಬ ಮೂದಲಿಸುವ ಮಾತುಗಳನ್ನು ಕೇಳಬೇಕು. ರೇಗಿ ಉತ್ತರ ಕೊಡಬೇಕು. ಮಾತಿಗೆ ಮಾತು ಬೆಳೆದು ಎಲ್ಲರ ಮನಸೂ ಕಸಿವಿಸಿಯಾಗುತ್ತದೆ. ನೀನೋ ಮಹಾತ್ಮ ಮೌನಿ, ಯಾರನ್ನೂ ನೀನನ್ನುವುದಿಲ್ಲ. ನಿನ್ನನ್ನು ಕುರಿತು ಯಾರು ಅಂದುಕೊಂಡರೂ ನಿನಗೆ ಕೇಳಿಸುವುದೇ ಇಲ್ಲ. ಆದುದರಿಂದಲೇ ಏನೋ ಮೌನಿಯಾಗಿದ್ದ. ನಮ್ಮಂತಹವರನ್ನು ಕಂಡರೆ ಬಿಸುಸುಯ್ಯುತ್ತೀ. ನಿನ್ನ ಅನುಕಂಪವೆಲ್ಲಾ ಅಷ್ಟರಲ್ಲೇ ತೀರಿತು. ನಿಜವಾಗಲೂ ಮಹಾತ್ಮ ನೀನು.'
ಹೀಗೆಂದು ಗಟ್ಟಿಯಾಗಿ ಹೇಳಲಿಲ್ಲ. ಆಜೂಬಾಜೂ ಯಾರೂ ಇಲ್ಲದ್ದರಿಂದ ಗಟ್ಟಿಯಾಗಿ ಹೇಳಿದ್ದರೂ ಅಸೆಂಬ್ಲಿಗಳ ಭಾಷಣದಂತೆ, ಯಾರ ಕಿವಿಗೂ ಬೀಳುತ್ತಿರಲಿಲ್ಲ. ಕೇವಲ ಅರಣ್ಯರೋದನವಾಗುತ್ತಿತ್ತು, ಸ್ವಲ್ಪ ಹೊತ್ತಿನ ಮೇಲೆ ಮನೆಗೆ ಹಿಂತಿರುಗಿದೆ. ಹೆಂಡತಿಯೊಡನೆ ಯಥಾಪ್ರಕಾರ ಗೊಣಗಾಡುತ್ತ ಊಟ ಮಾಡಿದೆ.