೧೩
ತಾಯ್ತಂದೆಯರ, ಅಕ್ಕತಂಗಿಯರ, ಅಣ್ಣತಮ್ಮಂದಿರ ಆರೋಗ್ಯವನ್ನೂ ಜಾಯಮಾನವನ್ನೂ ವಿಚಾರಿಸಿದೆ. ಬಾಲ್ಯದಿಂದಲೂ ಇದ್ದ ರೋಗಿಯ ಸ್ವಭಾವ, ಅನುಭವಿಸಿದ್ದ ಬೇನೆಗಳು ಎಲ್ಲವನ್ನೂ ಗುರುತಿಸಿಕೊಂಡೆ. ದೇಹದ ವಿವಿಧ ಅಂಗಗಳ ವಿವರ ಪರೀಕ್ಷೆಯನ್ನೂ ಶಾಸ್ರೋಕ್ತವಾಗಿ ಮಾಡಿ ಮುಗಿಸಿದೆ. ಶ್ವಾಸಕೋಶಗಳಲ್ಲಿ ಆತಂಕವು ಮನೆಮಾಡಿಕೊಂಡಿತ್ತಾದ್ದರಿಂದ, ಜಾಗರೂಕತೆಯಿಂದ ಅದನ್ನು ಪರೀಕ್ಷಿಸಿದೆ. ಮೂಗು ಕಿವಿ ಗಂಟಲುಗಳ ಪರೀಕ್ಷೆಯೂ ಆಯಿತು. ನನ್ನ ವಿಚಾರದಲ್ಲಿ ವೈದ್ಯರಿಗೆ ಎಷ್ಟು ಶ್ರದ್ಧೆ ಎಂದು ರೋಗಿಗೆ ಖಂಡಿತವಾಗಿರಲೇಬೇಕು. ದೇಹದಲ್ಲಿ ಯಾವ ಖಾಯಿಲೆಯು ಇರುವ ಸೂಚನೆಯೂ ನನಗೆ ದೊರಕಲಿಲ್ಲ. ಮೊದಲೇ ಊಹಿಸಿದ್ದಂತೆ, ಇದು ಆತಂಕದ ಮಾನಸಿಕ ಬೇನೆ ಎನ್ನುವುದು ಖಂಡಿತವಾಯಿತು.
ರೋಗಿಯ ಪೌಗಂಡ ವಯಸ್ಸಿನಲ್ಲಿ ಕಣ್ಣಿಗೆ ಕಂಡ ಸೆರಗೆಲ್ಲವೂ, ಅಪ್ಸರೆಯದೇ ಎನ್ನುವ ಭ್ರಾಂತಿಯು ಮೂಡುವುದು ಸ್ವಾಭಾವಿಕ. ಉದಾತ್ತ ಧ್ಯೇಯಗಳೂ ಅದೇ ವಯಸ್ಸಿನಲ್ಲಿ ತೀವ್ರವೂ ಆಗಿರುತ್ತವೆ. ಆ ಕಾರಣದಿಂದ ಮನಸ್ಸಿನಲ್ಲಿ ಮೂಡಿದ ಆ ತೆರನ ಭ್ರಾಂತಿಗಳನ್ನು ಅವ ಹಠದಿಂದ ಮೆಟ್ಟುತ್ತಾನೆ. ತೋರ ಮನಸ್ಸಿನಿಂದಾಚೆಗೆ ಅಂತಹ ಯೋಚನೆಗಳನ್ನು ದಬ್ಬಲು ಯತ್ನಿಸುತ್ತಾನೆ. ಆಗ ಅಂತಹ ಭ್ರಾಂತಿ ರೂಪಿನ ಯೋಚನೆಗಳು ಆಳ ಮನಸ್ಸಿನ ಹಗೇವುಗಳಲ್ಲಿ ಶೇಖರವಾಗುತ್ತವೆ. ತೋರಮನಸ್ಸು ನಿರ್ಮಲವೇನೋ ಆಗುತ್ತದೆ. ಯುವಕನಿಗೆ ನೆಮ್ಮದಿಯೂ ತಾತ್ಕಾಲಿಕವಾಗಿ ದೊರಕುತ್ತದೆ.
ಕೊಠಡಿಯನ್ನು ಗುಡಿಸಿ, ಕಸವನ್ನೆಲ್ಲಾ ಹಾಸಿದ ಜಮಖಾನದ ತಳಕ್ಕೆ, ಜವಾನನು ದಬ್ಬತ್ತಾನೆ. ಕೊಠಡಿಯು ಸ್ವಚ್ಛವಾಗಿದೆ ಎಂದು ಮನೆಯೊಡತಿಯು ಹಿಗ್ಗುತ್ತಾಳೆ. ಅದೇ ರೀತಿಯಲ್ಲಿ ಪೌಗಂಡ ವಯಸ್ಸಿನವರ ಸಹಜ ಭ್ರಾಂತಿಯ ಯೋಚನೆಗಳು, ಜಮಖಾನದ ಕೆಳಗಿನ ಕಸದಂತೆ, ಆಳ ಮನಸ್ಸಿನ ಹಗೇವುಗಳಲ್ಲಿ ಭ್ರಾಂತಿಯ ಯೋಚನೆಗಳು ತುಂಬಲ್ಪಡುತ್ತವೆ.
ಜಮಖಾನದ ಕೆಳಗೆ ದೂಡಲ್ಪಟ್ಟ ಕಸವು, ಎಂದಾದರೊಮ್ಮೆ ಒಡತಿಯ ಗಮನಕ್ಕೆ ಬರಬಹುದು. ಆದರೆ ಆಳ ಮನಸ್ಸಿನಲ್ಲಿ ಅದುಮಲ್ಪಟ್ಟ ಭ್ರಾಂತಿಯ ಕಸವು, ಚಿತ್ರವಿಚಿತ್ರ ವೇಷಗಳನ್ನು ಧರಿಸಿ, ದೆವ್ವಗಳಂತೆ ರೋಗಿಯನ್ನು ಬೆದರಿಸುತ್ತಲೇ ಇರುತ್ತವೆ. ಈ ಒಂದು ಕಾರಣದಿಂದಲೂ ಆತಂಕವೂ ಕಾತರವೂ ಹುಟ್ಟಿಕೊಳ್ಳುತ್ತದೆ. ತನ್ನ ಆತಂಕದ ಮೂಲ ಕಾರಣವು ರೋಗಿಗೆ ನಿಜವಾಗಲೂ ತಿಳಿದಿರುವುದೇ ಇಲ್ಲ. ಈ ತೆರನ ಯೋಚನೆಗಳು ಮನಸ್ಸಿನ ನೆಮ್ಮದಿಯನ್ನು ಕದಡುತ್ತವೆ ಎಂದಲ್ಲವೇ