ಮನಮಂಥನ
ವಿದ್ಯುತ್ ಕಾರ್ಯಕ್ರಮವೂ ಕೂಡ. ಅಂದರೆ ಮೆದುಳಿನ ಸೆಲ್ ಆಗಲೀ ಬ್ಯಾಟರಿಯ ಸೆಲ್ ಆಗಲಿ, ವಿದ್ಯುತ್ ಪ್ರವಾಹಕ್ಕೆ ಎಷ್ಟುಮುಖ್ಯವೋ, ಸೆಲೆಗಳಲ್ಲಿರುವ ದ್ರವವೂ ಅಷ್ಟೇ ಮುಖ್ಯ.
ಈ ದ್ರವದಲ್ಲಿ ತುಂಬಾ ವ್ಯತ್ಯಾಸವಾದರೆ ಕಾರ್ ಬ್ಯಾಟರಿಯ ಆಯಸ್ಸು ಮುಗಿಯಿತು. ಬೇರೆ ಬ್ಯಾಟರಿಯನ್ನು ಬಳಸಬೇಕು. ಮೆದುಳಿನ ಸೆಲ್ಲುಗಳ ದ್ರವದಲ್ಲಿಯೂ ಹಾಗೆಯೇ. ಕೆಲವು ಬೇನೆಗಳಲ್ಲಿ ಥೈರಾಯ್ಡ್ ಗ್ರಂಥಿಗಳು ಸಾಕಷ್ಟು ಹಾರ್ಮೋನನ್ನು ಉತ್ಪಾದಿಸಲಾಗುವುದಿಲ್ಲ, ಮೆದುಳಿನ ಸೆಲ್ಲುಗಳ ಒಳಗೆ ಹಾಗೂ ಹೊರಗೆ ಇರುವ ದ್ರವದಲ್ಲಿ ಥೈರಾಯ್ಡ್ ಹಾರ್ಮೋನು ತುಂಬಾ ಕಡಿಮೆ ಪ್ರಮಾಣದಲ್ಲಿರುತ್ತದೆ. ಅಂತಹವರ ಮನಸ್ಸು ಅತಿಮಂದವಾಗಿ ಕಾರ್ಯಮಾಡುತ್ತದೆ. ಮಂಕರಂತೆಯೇ ಇವರ ಮನಸ್ಸಿನ ಕೆಲಸ, ಈ ಬೇನೆಯವರನ್ನು ಕ್ರೆಟೆನ್ಸ್ ಎಂದು ಕರೆಯುತ್ತಾರೆ.
ಮೆದುಳಿನ ಸೆಲ್ಲುಗಳ ರಚನೆಯು ಲಕ್ಷಣವಾಗಿರಬೇಕು. ಅವುಗಳಲ್ಲಿರುವ ದ್ರವಗಳು ಸರಿಯಾಗಿರಬೇಕು, ಸೆಲ್ಲುಗಳನ್ನು ತೋಯಿಸುವ ದ್ರವವೂ ಅಣಿಯಾಗಿರಬೇಕು. ಆಗ ಮನಸ್ಸು ಲಕ್ಷಣವಾಗಿ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಏಕೆಂದರೆ ಮೆದುಳು ಆಗ ಸ್ವಾಸ್ಥ್ಯದಿಂದಿರುತ್ತದೆ.
ಮೆದುಳಿನ ಕಾರ್ಯಕ್ರಮವನ್ನು ತಿಳಿದಾಯಿತು. ಆದರೆ ಅದರ ಘನಪ್ರಮಾಣವನ್ನು ಮನಸ್ಸಿನ ಕಾರ್ಯಕ್ರಮಗಳಿಗೆ ಅನ್ವಯಿಸಬಹುದೇ ? ದಡೂತಿ ಮೆದುಳಿದ್ದವರ ಮನಸ್ಸು ಅತಿ ಚುರುಕಾಗಿ ಕೆಲಸವನ್ನು ಮಾಡುತ್ತದೆಯೇ? ದಪ್ಪ ತಲೆಯಿರುವವರನ್ನು ಪ್ರಚಂಡರು ಅನ್ನಬಹುದೇ? ಕಿರುತಲೆಯವರನ್ನು ಮತಿಹೀನರು ಎನ್ನುವುದೇ? ಸ್ವಾರಸ್ಯವಾದ ಪ್ರಶ್ನೆಗಳು.
ಮಾನವನ ಭವಿಷ್ಯವನ್ನು ಕುರಿತು ಲೇವಡಿ ಮಾಡುವ ವ್ಯಂಗ್ಯ ಚಿತ್ರಕಾರರು ರೇಖಿಸುವ ಚಿತ್ರಗಳನ್ನು ನೋಡಿ, ದೇಹವು ತುಂಬಾ ಸೆಣಕಲಾಗಿದ್ದು ಭಾರೀ ಕುಂಬಳಕಾಯನಂತಹ ತಲೆಯನ್ನು ಹೊತ್ತ ರೇಖಾಚಿತ್ರವನ್ನು ಬರೆದು ಹತ್ತು ಸಹಸ್ರ ವರ್ಷಗಳಾದ ಮೇಲೆ, ಪ್ರಗತಿ ಹೊಂದಿದ ಮಾನವನು ಹೀಗಿರುತ್ತಾನೆ ಎಂದು ಸೂಚಿಸುತ್ತಾರೆ. ಮನಸ್ಸಿನ ಪ್ರಚಂಡ ಪ್ರಗತಿಯಿಂದ, ದೇಹದ ಅಗತ್ಯವು ಬಹಳಷ್ಟು ಕಡಿಮೆಯಾಗುತ್ತದೆ ಎಂದು ಅವರು ಭವಿಷ್ಯವನ್ನು ಊಹಿಸಿದ್ದಾರೆ.
ಮಿದುಳಿನ ಪ್ರಮಾಣಕ್ಕೂ, ಅಂದರೆ ಅಳತೆ ಮತ್ತು ತೂಕಕ್ಕೂ, ಮನಸ್ಸಿನ ಹಿರಿಮೆಯ ಚೂಟಿಗೂ ಇವರು ಗಂಟು ಹಾಕುತ್ತಾರೆ. ವ್ಯಂಗ್ಯವೆಂದು ಕಾಣಿಸಿದರೂ, ಇದರಲ್ಲಿ ತುಸು ಸತ್ಯಾಂಶವಿದೆ.