ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೦೮

ಮನಮಂಥನ

ತುಂಬಾ ಹೆಚ್ಚಾಗಿದೆ. ಗಂಡಸರ ಮೈ ತೂಕವು ಹೆಂಗಸರ ಮೈ ತೂಕಕ್ಕಿಂತ, ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಗಂಡಸಿನ ಮೆದುಳಿನ ತೂಕವು ಹೆಂಗಸರ ಮೆದುಳಿಗಿಂತ ತುಸು ಹೆಚ್ಚು ತೂಕವಿರುತ್ತದೆ. ಆದರೆ ತೂಕವೊಂದೇ ಮನಸ್ಸಿನ ಚುರುಕಿಗೆ ಕಾರಣವಲ್ಲ. ಮೆದುಳಿನ ಮೇಲ್ಮನ ವಿಸ್ತಾರವು, ತೂಕಕ್ಕಿಂತ ಹೆಚ್ಚು ಪ್ರಾಮುಖ್ಯವಾದುದು. ಈ ದೃಷ್ಟಿಯಿಂದಲೂ ಹೆಂಗಸಿನ ಮೆದುಳಿನ ಮೇಲ್ ಮೈಯಿನ ವಿಸ್ತಾರವು ಗಂಡಸಿಗಿಂತ ಕಡಿಮೆ. ಆದುದರಿಂದಲೇ ಏನೋ ಗಂಡಸರು ಹೆಚ್ಚು ವಿಚಾರಪ್ರಿಯರು, ಹೆಂಗಸರು ಭಾವನಾಪ್ರಿಯರು ಎಂದು ಸಾಮಾನ್ಯವಾಗಿ ಹೇಳುವುದು, ಹೆಂಗರುಳು ಎನ್ನುವುದು ಹೆಂಗಸಿನ ಭಾವನಾಧಿಕ್ಯವನ್ನು ಸೂಚಿಸುತ್ತದೆ.

ಮಾನವರಲ್ಲಿ ಗಂಡು ಹೆಣ್ಣು ಎಂಬ ಭಿನ್ನತೆಯು ಸಾಕಷ್ಟು ಸ್ಪಷ್ಟವಾಗಿ ಕಂಡರೂ ಹೆಂಗಸಿನ ಸ್ವಭಾವವು ಗಂಡಸಿನಲ್ಲೂ ಸ್ವಲ್ಪಮಟ್ಟಿಗೆ ಕಾಣಬರುತ್ತದೆ. ಅದೇ ರೀತಿಯಲ್ಲಿ ಗಂಡಸಿನ ಸ್ವಭಾವವು ಹೆಂಗಸರಲ್ಲಿಯೂ ಸ್ವಲ್ಪಮಟ್ಟಿಗೆ ಇದ್ದೇ ಇರುತ್ತದೆ. ದೇಹದ ರಚನೆಯಲ್ಲೂ ಈ ಅಂಶವು ಕಾಣಿಸುತ್ತದೆ. 'ಸ್ವಲ್ಪಮಟ್ಟಿಗೆ' ಎಂದೆವಲ್ಲ ; ಅದು ಹೆಚ್ಚು ಕಡಿಮೆಯಾಗಬಹುದು. ಆದುದರಿಂದ ಹೆಣ್ಣಕ್ಸ್ ಎಂದು ಮೂದಲಿಸಲ್ಪಡುವ ಗಂಡಸರು ಇರುತ್ತಾರೆ. ಗಂಡುಬೀರಿಗಳು ಎಂದು ಮೆರೆಯುವ ಹೆಂಗಸರೂ ಇರುತ್ತಾರೆ. ಈ ವಿಷಯವನ್ನು ಸಮರ್ಥಿಸಲು ನಿದರ್ಶನಗಳು ಅಗತ್ಯ. ಮಾನವನ ಮನಸ್ಸನ್ನು ವಿಶ್ಲೇಷಿಸುವಾಗ, ಉಭಯ ಮಿಶ್ರವಾದ ಈ ಅಂಶವನ್ನು ಗಮನಿಸಬೇಕು. ಮನಸ್ಸಿನ ಚಟುವಟಿಕೆಗಳು ಮನುಷ್ಯನ ನಡವಳಿಕೆಗಳನ್ನು ನಿರ್ಧರಿಸುತ್ತವೆ. ಅಂದಮೇಲೆ ಅವನು ಹೀಗೇಕೆ ನಡೆದುಕೊಳ್ಳುತ್ತಾನೆ ! ಇವಳು ಹೀಗೇಕೆ ಪರದಾಡುತ್ತಾಳೆ, ಎನ್ನುವುದನ್ನು ಅರ್ಥಮಾಡಿಕೊಳ್ಳುವಾಗ, ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದೂ ಉಪಯುಕ್ತ. ಗಂಡು ಮತ್ತು ಹೆಣ್ಣಿನ ಮಿಶ್ರ ಸ್ವಭಾವದ ಮನಸ್ಸು ನಮ್ಮಲ್ಲೂ ಇದ್ದೇ ಇದೆಯಲ್ಲ, ಯಾವ ಪ್ರಮಾಣದಲ್ಲಿ ಮಿಶ್ರವಾಗಿದೆ ಎಂಬುದನ್ನು ಅರಿಯಬೇಕು.