೩. ಮೆದುಳಿನ ಪ್ರಮುಖ ಭಾಗಗಳು
ಮೆದುಳಿನ ಅವತಾರ ಎರೆಹುಳು ಅಥವಾ ಮಣ್ಣುಹುಳು, ಕಂಬಳಿಹುಳು, ಜಂತುಹುಳು ಮುಂತಾದ ಹುಳುಗಳಲ್ಲಿ ಬೆನ್ನುಮೂಳೆಯು ಇರುವುದಿಲ್ಲ. ಎಲುಬಿನ ಚಿಪ್ಪಿನಿಂದ ರಕ್ಷಿತವಾದ ತಲೆಯೂ ಇರುವುದಿಲ್ಲ. ಇವು ಜೀವಿಗಳು ಜಂಗಮ ಅಥವಾ ಸಂಚರಿಸುವ ಪ್ರಾಣಿಗಳು, ಇವುಗಳ ದೇಹದಲ್ಲಿ ಹಲವಾರು ಅಂಗಗಳು ಇರುತ್ತವೆ. ಅವುಗಳ ಕಾರ್ಯಗಳನ್ನು ಸಮನ್ವಯಗೊಳಿಸಿ, ಸುಸೂತ್ರವಾಗಿ ನಡೆಸಲು ಒಂದು ವ್ಯವಸ್ಥೆಯು ಇರಬೇಕು. ಅವುಗಳ ಬೆನ್ನಿನ ಭಾಗದ ಕೆಳಗೆ ತಲೆಯಿಂದ ಬಾಲದ ತನಕ ನರಗಳ ಸಮೂಹವೊಂದು ಉದ್ದಕ್ಕೂ ಹರಡಿದೆ. ಅದೇ ಸಮನ್ವಯ ವ್ಯವಸ್ಥೆ.
ಪ್ರಕೃತಿಯ ಪ್ರಗತಿಯಲ್ಲಿ, ಇದು ಸ್ಪೆನಲ್ ಕಾರ್ಡ್‌ಆಯಿತು. ಅದು ಮುಖ್ಯವಾದ ಅಂಗವಾದ್ದರಿಂದ,ಎಲುಬಿನ ರಕ್ಷಾ ಪಂಜರವನ್ನು ಪ್ರಕೃತಿಯು ರಚಿಸಿತು. ಪ್ರಗತಿಯು ಮುನ್ನಡೆದಾಗ, ಸ್ಪೆನಲ್ ಕಾರ್ಡ್ ಕೂಡ ಅಭಿವೃದ್ಧಿಯನ್ನು ತಲೆಯ ಕಡೆ ಸಾಧಿಸಿಕೊಂಡಿತು. ಆಗ ಮೆದುಳಿನ ಬುಡವು ಅವತರಿಸಿತು. ಇಲ್ಲಿ ಬಾಳಿಗೆ ಅಗತ್ಯವಾದ ಭಾವನಾ ಕೇಂದ್ರಗಳು ವ್ಯವಸ್ಥಿತವಾದವು. ಕೋಪವು ಉಕ್ಕಿದರೆ ತಾನೇ ವೈರಿಯನ್ನು ಸದೆಬಡಿಯಲು ಸಾಧ್ಯ. ಆಗ ವೀರರಂತೆ ಕಾದಾಡಬಹುದು. ಭಯಾನಕವಾಗಿ ಘರ್ಜಿಸಿ ಚದರಿಸಬಹುದು. ನಿದ್ರೆಯನ್ನು ವ್ಯವಸ್ಥೆಗೊಳಿಸುವ ಕೇಂದ್ರಗಳು ಮೆದುಳ ಬುಡದಲ್ಲಿವೆ, ಕಾಮೋದ್ರೇಕಿಸುವ, ನರಕೇಂದ್ರಗಳು ಆ ಮೆದುಳ ಬುಡದ ಬಳಿಯಲ್ಲಿವೆ. ಈ ಕೇಂದ್ರಗಳು ಕೆರಳಿದಾಗ ಹುಟ್ಟುಭಯವು ಇರದಾಗುತ್ತದೆ. ಕಾಮೋದ್ರೇಕಿತವಾದ ಕೋಣನು, ಅಡ್ಡಬಂದ ಚಿರತೆಯನ್ನು ಬಡಿದು ಕೊಲ್ಲಲು ತೊಡಗುತ್ತದೆ. ಕಾಮೋದ್ರೇಕವಿರದ ಸ್ಥಿತಿಯಲ್ಲಿ ಕೋಣನು ಓಡಿಹೋಗತೊಡಗುತ್ತದೆ. ಆದರೆ ಬೆದೆಗೆ ಬಂದ ಎಮ್ಮೆಯನ್ನು ಒಲಿಸಿಕೊಳ್ಳ ತೊಡಗಿದಾಗ, ಚಿರತೆಯು ಬಂದರೂ, ಅವರೊಡನೆ ಕಾದಾಡುತ್ತದೆ. ಪ್ರಾಣ ಭಯವೂ ಆಗ ಕೋಣನನ್ನು ತಡೆಯುವುದಿಲ್ಲ. ಇಂತಹ ಹಲವಾರು ಭಾವನಾ ಕೇಂದ್ರಗಳು, ಪ್ರಾಣಿಗಳಲ್ಲಿಯೂ ಇವೆ. ಮನುಷ್ಯ ಪ್ರಾಣಿಯಲ್ಲಿಯೂ ಇದೆ.