ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೧೪

ಮನಮಂಥನ

ಕಿಟ್ಟು ಹೋಗಿ ಬಂದ. 'ರಾಮಯ್ಯನವರು ಭತ್ತ ತರುಕ್ಕೆ ಅಂತ ಮೂರುದಿನಗಳ ಹಿಂದೆ ಹಳ್ಳಿಗೆ ಹೋದರು, ಇನ್ನೊಂದು ವಾರದ ನಂತರ ಭತ್ತವನ್ನು ತೆಗೆದುಕೊಂಡು ಹಿಂತಿರುಗುವ ನಿರೀಕ್ಷೆಯಿದೆಯಂತೆ' ಎಂದು ವರದಿ ಒಪ್ಪಿಸಿದ.

ಜವರನ ಮನಸ್ಸು ಕೆಲಸ ಮಾಡುತ್ತಿತ್ತು. ರಾಮಯ್ಯನವರು, ಅವರಿರುವ ಮನೆ, ಇವೆರಡರ ಸ್ಮರಣೆಯು ಲಕ್ಷಣವಾಗಿತ್ತು. ಯಜಮಾನರು, ಹೇಳಿದ ಮಾತುಗಳೂ ಕೇಳಿಸಿತ್ತು, ತಿಳಿದಿತ್ತು. ರಾಮಯ್ಯನವರ ಮನೆಗೆ ಹೋದ. ಇದಾರೆಯೇ ಅಂತ ಕೇಳಿದ. ಇಲ್ಲ ಎಂದು ಉತ್ತರ ಬಂತು. ಹಿಂತಿರುಗಿದ.

ಕಿಟ್ಟುವಿಗೆ ಎಂಟೇ ವರ್ಷ ವಯಸ್ಸು ಜವರನಿಗಿಂತ ಮೂವತ್ತು ವರ್ಷ ಚಿಕ್ಕವನು. ಅವನ ಮನಸೂ ಕೆಲಸಮಾಡುತ್ತಿತ್ತು. ರಾಮಯ್ಯನವರು, ಅವರ ಮನೆ ಎರಡರ ಸ್ಮರಣೆಯು ಅವನಿಗೂ ಇತ್ತು. ತಂದೆಯು ಹೇಳಿದುದು ಅವನಿಗೂ ಕೇಳಿಸಿತ್ತು. ಅರ್ಥವೂ ಆಗಿತ್ತು. ರಾಮಯ್ಯನವರು ಮನೆಯಲ್ಲಿಲ್ಲ ಎಂದು ಮನೆಯವರು ಹೇಳಿದಾಗ ಅವನ ಮನಸ್ಸಿನಲ್ಲಿ ತುಸು ಕುತೂಹಲವು ಕೆರಳಿತು. ಎಲ್ಲಿಗೆ ಹೋಗಿದ್ದಾರೆ, ಊರಿನಲ್ಲಿದ್ದಾರೆಯೇ ? ಇಲ್ಲದಿದ್ದರೆ ಯಾವಾಗ ಬರುತ್ತಾರೆ, ಇವೆಲ್ಲ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದಿದ್ದ. ರಾಮಯ್ಯನವರನ್ನು ಅಪ್ಪ ಕಾಣಬೇಕು. ಯಾವುದೋ ಮಾತನಾಡಬೇಕು, ಇಲ್ಲದೆ ಇದ್ದರೆ ಅವರಿದಾರೆಯೇ ನೋಡಿ ಕೊಂಡು ಬಾ ಎಂದು ಕಳುಹಿಸುತ್ತಿರಲಿಲ್ಲ. ಇಷ್ಟೆಲ್ಲಾ ಯೋಚನೆಗಳನ್ನು ಕಿಟ್ಟು ಮಾಡಿ ವಿವರವಾದ ಉತ್ತರವನ್ನು ಪಡೆದಿದ್ದ.

ಯೋಚಿಸುವ ಶಕ್ತಿಯು, ವಯಸ್ಸಿಗೆ ಅನುಗುಣವಾಗಿ ಬೆಳೆಯುವುದಿಲ್ಲ. ಜವರನಿಗೆ ಎಷ್ಟೇ ಹೇಳಿಕೊಟ್ಟರೂ ಸ್ವಂತವಾಗಿ ಆಲೋಚಿಸುವ ಯೋಗ್ಯತೆಯು ಬರುವುದೇ ಇಲ್ಲ. ಜವರನಿಗೆ ಕಲಿಸಹೋಗುವುದು ಗೋರ್ಕಲ್ಲಮೇಲೆ ಮಳೆಯು ಸುರಿದಂತೆ. ಹುಟ್ಟುವಾಗ, ತಾಯ್ತಂದೆಯರಿಂದ ವಂಶಾನುಗತವಾಗಿ ಬಂದಿರುವ ಒಂದು ಅಂಶವು ಯೋಚಿಸುವ ಪ್ರವೃತ್ತಿಗೆ ಮುಖ್ಯ ಕಾರಣವಾಗುತ್ತದೆ. ಈ ಅಂಶವನ್ನು ಅಭಿವೃದ್ಧಿಸುವುದು ವಿದ್ಯಾಭ್ಯಾಸದ ಧೈಯ. ವಿದ್ಯಾಭ್ಯಾಸದ, ಅಥವಾ ಕಲಿಯುವಿಕೆಯ ಅವಕಾಶವು ಇರದಿದ್ದರೆ, ಈ ಅಂಶವು ಬೂದಿ ಮುಚ್ಚಿದ ಕೆಂಡದಂತೆ, ನಶಿಸುತ್ತಾ ಹೋಗಬಹುದು.

ಈ ಶತಮಾನದಲ್ಲಿ ಐನ್‌ಸ್ಟೈನ್ ಮಹಾಶಯನು ಪ್ರಪಂಚದ ಅತ್ಯುನ್ನತ ಕುಶಾಗ್ರಮತಿಯೆಂದು ಹೇಳಬಹುದು. ಇಡೀ ಮಾನವನ ಜ್ಞಾನ ಭಂಡಾರಕ್ಕೆ ಆತನು ಅರ್ಪಿಸಿದ ಕಾಣಿಕೆಯು ಅತ್ಯಮೂಲ್ಯವಾದುದು. ಪ್ರಚಂಡ ಬುದ್ಧಿಯಿಂದಾಗಿ ಆತ ಸಿದ್ಧಾಂತವನ್ನು ಪ್ರಕಟಿಸಿದ. ಭೌತಶಾಸ್ತ್ರದ ಇಂದಿನ ಪ್ರಗಲ್ಪವಾದ ಪ್ರಗತಿಗೆ