ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೧೮

ಮನಮಂಥನ

ಹೊಟ್ಟೆ ತುಂಬಿತು, ಮಗುವು ಮಂದಸ್ಮಿತ ಬಾಲಕೃಷ್ಣ, ಅದರ ಮನಸ್ಸು ಪ್ರತಿಕ್ರಿಯೆಯನ್ನು ಹೂಡುವುದು, ಎರಡೇ ಮಾರ್ಗಗಳಲ್ಲಿ. ಒಂದು ಅಳು ಮತ್ತು ರಂಪ. ಇನ್ನೊಂದು ನಗು ಮತ್ತು ಬಾಲಲೀಲೆ. ಇವೆರಡನ್ನು ಬಿಟ್ಟು ಸ್ವಯಂಪ್ರೇರಿತವಾಗಿ ಮತ್ತೇನನ್ನೂ ಮಾಡಲೂ ತಿಳಿಯದು.

ಎಳೆಯ ಮಗುವಿನ ಮನಸ್ಸು ಹೇಗಿರುತ್ತದೆ ಎಂಬುದನ್ನು ಅದರ ನಡವಳಿಕೆಯಿಂದ ನಾವು ಊಹಿಸಬೇಕೇ ವಿನಹಾ, ಯಾವ ಮಗುವೂ ತಾನೇ ಹೇಳುವುದಿಲ್ಲ. ಹಲವಾರು ಎಳೆಯ ಮಕ್ಕಳ ನಡವಳಿಕೆಯನ್ನು ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿ, ಅಭ್ಯಾಸವನ್ನು ಅಥವಾ ಅಧ್ಯಯನವನ್ನು ಮಾಡಿ ; ಹಲ ಕೆಲವು ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಿ, ಅನಂತರ ಮನೋವಿಜ್ಞಾನಿಗಳು ಊಹಿಸಿ ನಿರ್ಧರಿಸಬೇಕು. ಊಹೆಯಿಂದ ನಿರ್ಧರಿಸುವಾಗ, ಇದೇ ಸತ್ಯವಾದುದು ಎಂದು ಖಡಾಖಂಡಿತವಾಗಿ ಹೇಳಬರುವುದಿಲ್ಲ. ಆದರೂ ಬಹಳ ಪಾಲು ಸರಿಯಾದುದು ಎಂದು ಒಪ್ಪಿಕೊಳ್ಳಬೇಕು. ಈ ಕುಂದುಗಳನ್ನು ಗಮನದಲ್ಲಿಟ್ಟುಕೊಂಡು ಎಳೆಯ ಮಗುವಿನ ಮನಸ್ಸು ಹೇಗಿರುತ್ತದೆ ? ಯಾವ ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ ಎಂಬುದನ್ನು ತಿಳಿಯೋಣ.

ಎಳೆಯ ಮಗುವಿನಲ್ಲಿ ಅಳು ಮತ್ತು ನಗು ಇವೆರಡನ್ನು ಮಾತ್ರ ಕಾಣುತ್ತೇವೆ. ಎಳೆಯ ಮಗು ಎಂದಾಗ ಸುಮಾರು ಆರೇಳು ತಿಂಗಳೊಳಗಿನ ಮಗು ಎಂದು ಸ್ಕೂಲವಾಗಿ ಹೇಳಬಹುದು. ಅಳುವು, ಮಗುವು ಹುಟ್ಟುವಾಗ ಪ್ರಾರಂಭವಾಗುತ್ತದೆ. ತಾಯ ಗರ್ಭದಲ್ಲಿದ್ದಾಗ ಮಗುವಿನ ಶ್ವಾಸಕೋಶಗಳು ಯಾವ ಉಸಿರಾಟವನ್ನೂ ಮಾಡಬೇಕಾಗಿಲ್ಲ. ಜನನವಾದ ಮೇಲೆ ಉಸಿರಾಡಬೇಕು. ಸುಪ್ತವಾಗಿದ್ದ ಮೊಗ್ಗಿನಂತೆ ಮುದುಡಿಕೊಂಡಿದ್ದ ಶ್ವಾಸಕೋಶಗಳನ್ನು ಅರಳಿಸಬೇಕು. ಅನಂತರ ಬದುಕಿಗೆ ಅತ್ಯಗತ್ಯವಾದ ಉಸಿರಾಡುವಿಕೆಯನ್ನು ನಡೆಸಲು ಸಾಧ್ಯ. ಹುಟ್ಟಿದ ಕೂಡಲೇ ಮಗುವು ಅಳುವುದು, ಶ್ವಾಸಕೋಶಗಳನ್ನು ಅರಳಿಸುವ, ಪ್ರಯತ್ನ. ಆನಂತರ ಆಳುವಿನ ಮೂಲಕವೇ ಮಗುವು, ತನ್ನ ಹಸಿವನ್ನಾಗಲೀ, ಇತರ ಬಾಧೆಗಳನ್ನಾಗಲೀ, ತಾಯಂದಿರಿಗೆ ತಿಳಿಸುವ ಭಾಷೆಯಾಗಿರುತ್ತದೆ. ಸುಮಾರು ಮೂರು ತಿಂಗಳು ಬೆಳೆದ ಬಳಿಕ ಎಳೆಯ ಮಗುವು ನಗಲಾರಂಭಿಸುತ್ತದೆ. ಮನ ಮೋಹಕವಾದ ನಗೆ, ಬಂಜೆಯನ್ನು ಕೂಡ ಬರಸೆಳೆವ ಮಾದಕ ನಗೆ

ಅಳು ಮತ್ತು ನಗು, ಎರಡೂ ಭಾವನಾ ಪ್ರದರ್ಶನಗಳು. ಇವೆರಡರ ಕೇಂದ್ರಗಳು ಮೆದುಳಿನ ಬುಡದಲ್ಲಿ ಇರುತ್ತವೆ. ದೊಡ್ಡವರಲ್ಲಿಯೂ ಇದೇ ವ್ಯವಸ್ಥೆ ಇರುತ್ತದೆ. ಆದರೆ ಮೆದುಳು ಅಭಿವೃದ್ಧಿ ಹೊಂದಿದ ದೊಡ್ಡವರಲ್ಲಿ ಬಹಳಷ್ಟು