ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬಾಲ್ಯ, ಆಗಿನ ಮನಸ್ಸು

೩೧೯

ವ್ಯತ್ಯಾಸವಿರುತ್ತದೆ, ಭಾವನಾಪ್ರದರ್ಶನದಲ್ಲಿ, ಅದನ್ನು ವಿವರವಾಗಿ ಮುಂದೆ ತಿಳಿಯೋಣ.

ಏಳೆಂಟು ತಿಂಗಳುಗಳಾದ ಮೇಲೆ ಮಗುವು ತೆವಳಲು ಹಾಗೂ ಅಂಬೆಗಾಲಿಟ್ಟು ನಡೆಯಲು ಕಲಿಯುತ್ತದೆ. ಈ ತನಕ ಒಂದು ರೀತಿಯಲ್ಲಿ 'ಸ್ಥಾವರ'ವಾಗಿದ್ದ ಮಗುವು ಈಗ 'ಜಂಗಮ' ವಾಗತೊಡಗುತ್ತದೆ. ಚಲಿಸಲು, ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದನ್ನು ಕಲಿಯುತ್ತದೆ. ಈ ಕಲಿಕೆಗೆ ಅನುಗುಣವಾಗಿ ಮಗುವಿನ ಮೆದುಳು ಬೆಳೆಯತೊಡಗುತ್ತದೆ. ಅಡಿಗೆಯ ಮನೆಯಲ್ಲಿ ಒಂದು ಕಡೆ ದಟ್ಟದ ಮೇಲೆ ಮಲಗಿ ನಿದ್ರಿಸುತ್ತಿದ್ದ ಮಗುವಿಗೆ ಎಚ್ಚರವಾಗುತ್ತದೆ. ಕಣ್ಣು ಬಿಟ್ಟು ನೋಡುತ್ತದೆ. ತಾಯಿಯು ಒಲೆಯ ಮುಂದೆ ಕುಳಿತಿರುವುದನ್ನು ಕಾಣುತ್ತದೆ. ಆಕೆಯ ಬಳಿಗೆ ತೆವಳಿಕೊಂಡು ಹೋಗುತ್ತದೆ. ತಾಯಿ ಎನ್ನುವ ಕಲ್ಪನೆಯು ಮಗುವಿಗೆ ಇರದಿದ್ದರೂ, ಪರಿಚಿತ ಮುಖ, ಹಾಲೂಡಿಸುವ ವ್ಯಕ್ತಿ ಎಂಬುದು, ಸ್ಮರಣೆಯಲ್ಲಿ ಅಚ್ಚಾಗಿರುತ್ತದೆ. ಎಂದರೆ ಮಗುವಿನ ಮೆದುಳಿನಲ್ಲಿ ಸಮರಣಾ ಕೇಂದ್ರಗಳು ಪ್ರಚೋದಿತವಾಗಿವೆ ; ಕೆಲಸ ಮಾಡಲು ಆರಂಭಿಸಿವೆ ಎಂದು ನಿರ್ಧರಿಸಬಹುದು.

ಸರ್ಪದಂತೆ ತೆವಳುವುದನ್ನು ನೋಡಿದಾಗ, ಚತುಷ್ಪಾದಿಯಂತೆ ಅಂಬೆಗಾಲಿಟ್ಟು ಮುಂದುವರೆಯುವಾಗ, ಈ ತೆರನ ಚಲನವನ್ನು ಆಗಮಾಡಿಕೊಡುವ ಮೆದುಳಿನ ಕಾರ್ಟೆಕ್ಸ್ ವಿಭಾಗವು, ವೃದ್ಧಿಯಾಗುತ್ತಿದೆ ಎನ್ನುವುದು ಸ್ಪಷ್ಟ ಅಂತೆಯೇ ಪರಿಚಿತವಾದ ತಾಯಿಯ ಬಳಿಗೆ ಹೋಗಬೇಕು ಎಂದು ಆಲೋಚನೆಯೂ ಮಗುವಿನ ಮನಸ್ಸಿನಲ್ಲಿ ನಡೆದಿದೆ, ಎಂಬುದೂ ಸ್ಪಷ್ಟವಾಗಿದೆ. ಆದರೆ ಹುಟ್ಟಿದ ಒಂದು ವರ್ಷದಲ್ಲಿ ಮನಸ್ಸಿನ ಮೂರೂ ಪ್ರಮುಖವಾದ ಚಟುವಟಿಕೆಗಳನ್ನು ಗುರುತಿಸಬಹುದು.

ಎಳೆಯ ಮಗುವು ಬೆಳೆಯುತ್ತಾ ಬೆಳೆಯುತ್ತಾ, ಹನ್ನೆರಡು ಹದಿನಾಲ್ಕು ತಿಂಗಳ ವಯಸ್ಸಿನಲ್ಲಿ ಎರಡು ಕಾಲುಗಳ ಮೇಲೆ ನಿಂತು, ತಾರಾಡುತ್ತ ತೂರಾಡುತ್ತ ನಡೆಯಲಾರಂಭಿಸುತ್ತದೆ. ಇನ್ನು ಕೆಲವು ತಿಂಗಳುಗಳಲ್ಲಿ ಸಾಕಷ್ಟು ಲಕ್ಷಣವಾಗಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತ, ಅಡ್ಡ ಕಂಡ ಹೊಸಿಲನ್ನು ದಾಟುತ್ತದೆ. ಅಂದರೆ ಮೆದುಳಿನ ಸೆರಿಬೆಲ್ಲಂ ಭಾಗವೂ ಸುಸೂತ್ರವಾಗಿ ಅಭಿವೃದ್ಧಿಯಾಗಿದೆ, ಆಗುತ್ತಿದೆ ಎಂದು ನಿರ್ಧರಿಸಬಹುದು.

ಈ ವೇಳೆಗಾಗಲೇ, ಅಮ್ಮ ಅಪ್ಪ ಎಂಬ ಮಾತುಗಳನ್ನಾಡಲೂ ತೊಡಗುತ್ತದೆ. ಮನೆಯಲ್ಲಿರುವ ಹಿರಿಯರು ಮಾತನಾಡುವುದನ್ನು ಕಂಡು, ಅನುಕರಿಸತೊಡಗುತ್ತದೆ.