ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೨೬

ಮನಮಂಥನ

ಬಲಿತಿರುವ ಸಮಾಜದ ಗೃಧಗಳು ಅವಕಾಶವನ್ನು ಕೊಡುವುದಿಲ್ಲ ; ಎಂದು ಹುಷಾರು ಕೊಡುತ್ತಾ ಹೀಯಾಳಿಸುತ್ತದೆ. EGO ಈಗ ಉಳಿಯಬೇಕಾದರೆ ತಿರುಗಿಬೀಳಲೇ ಬೇಕು. ಬಂಡಾಯವೇಳಲೇಬೇಕು. ಯುವಕರ ಬಂಡಾಯವೇಳುವ ಪ್ರವೃತ್ತಿಯು ಈ ರೀತಿಯಲ್ಲಿ ಆರಂಭಿಸುತ್ತದೆ.

ಯುವಕನು ಈ ವೇಳೆಗೆ ಶಾಲೆಗಳಲ್ಲಿ ಹಲವಾರು ವರ್ಷಗಳು ವ್ಯಾಸಂಗವನ್ನು ಮಾಡಿರುತ್ತಾನೆ, ಹೈಸ್ಕೂಲಿನ ಹೊರ ಹೊಸಿಲನ್ನು ದಾಟುವಂತಾಗುತ್ತಿದ್ದಾನೆ. ಮೃಗಗಳನ್ನೂ, ಪಕ್ಷಿಗಳನ್ನೂ ಸಿನಿಮಾಗಳನ್ನೂ ನೋಡಿ, ಕೂತೂಹಲದಿಂದ ಬಾಳಿನ ಪಾಠಗಳನ್ನು ಅಲ್ಪ ಸ್ವಲ್ಪ ಅರಿತಿರುತ್ತಾನೆ. ಅಂದರೆ ಅವನ ಕಾವ್ಯ ಪ್ರವೃತ್ತಿಗಳಿಗೆ ತಂಪೆರೆಯುವ ಕಾರ್ಯಕ್ರಮಗಳನ್ನು ತಿಳಿದಿರುತ್ತಾನೆ. ಬಾಲ್ಯದ ಕಾಮಲೀಲೆಗಳು, ಯುವಕನಲ್ಲಿ ಕಾಮ ಕೇಳಿಯಾಡಲು, ಸಿದ್ಧವಾಗತೊಡಗಿರುತ್ತವೆ.

ಯಶೋದೆಯು ಆಡಿಸಿದ ಬಾಲಕೃಷ್ಣನು, ಈಗ ಜಗವನ್ನು ಉದ್ಧರಿಸುವ, ಸಂತಾನದ ಪರಂಪರೆಯನ್ನು ಅವ್ಯಾಹತವಾಗಿ ಮುಂದುವರೆಸುವ, ಕಾಮಕೃಷ್ಣ ನಾಗುತ್ತಾನೆ, ಕಾಮಕೃಷ್ಣನಾಗಲು ಯತ್ನಿಸುತ್ತಾನೆ. ಅತ್ಯಂತ ಪ್ರಭಾವಿಯಾದ ಈ ಪ್ರೇರಣೆಯು ಯುವಕನನ್ನು ಜಗ್ಗಿ ಆಡಿ, ನಡೆಸುತ್ತದೆ ಚಿತ್ರ ವಿಚಿತ್ರ ರೀತಿಗಳಲ್ಲಿ.

ಪುರಾತನವಾದ ಈ ಪ್ರವೃತ್ತಿಯು ಬಾಳಿಗೆ ಅತ್ಯಗತ್ಯವಾಗಿದ್ದರೂ, ಸ್ಟೇಚ್ಛಾ ವೃತ್ತಿಯಾದರೆ ಸಮಾಜದ ಭದ್ರತೆಯನ್ನು ಸಡಿಲಗೊಳಿಸುತ್ತದೆ. ಆದಕಾರಣ ಸಮಾಜದ ಅನುಭಾವೀ ಗೃಧಗಳು, ಯುವಕರನ್ನು ತಹಬಂದಿಯಲ್ಲಿಡಲು ಶತ ಪ್ರಯತ್ನವನ್ನು ಮಾಡುತ್ತಾರೆ. ಸರ್ವಪ್ರಯತ್ನವನ್ನೂ ಮಾಡುತ್ತಾರೆ.

ಕಿರಿಯರು ಮತ್ತು ಹಿರಿಯರು, ಇವರುಗಳ ನಡುವೆ ನಡೆಯುವ ಝಂಝಾಟಕ್ಕೆ ವಿಭಿನ್ನವಾದ ದೃಷ್ಟಿಕೋನಗಳು ಕಾರಣ. ಕಿರಿಯರ ID ಹುಮ್ಮಸ್ಸಿನ ಪ್ರಭಾವ ಒಂದು ಕಡೆ, ಹಿರಿಯರ Super-Ego, ಪ್ರಭಾವ ಮತ್ತೊಂದು ಕಡೆ. ಹೀಗೆ ಪ್ರತಿ ವೃತ್ತಿಯಲ್ಲೂ ಕಂಡುಬರುವ ಜಗ್ಗಾಟವು ಸಮಾಜದಲ್ಲಿಯೂ ಕಾಣಬರುತ್ತದೆ.

ಸಮಾಜ ಎಂದರೆ ವ್ಯಕ್ತಿಯ ಸುತ್ತಲೂ ಇರುವ ಪರಿಸರ. ಮನೆಯಲ್ಲಿ ಪ್ರಾರಂಭವಾಗುತ್ತದೆ. ತಾಯಿಯ ರಕ್ಷಣೆ ತಂದೆಯ ಶಿಕ್ಷಣ, ಇವುಗಳಿಂದ ಬಾಲಕನ ಸಮಾಜವು ಶುರುವಾಗುತ್ತದೆ. ಶಾಲೆಗೆ ಸೇರಿದ ಬಾಲಕನಿಗೆ, ಕಲಿಸುವ ಮಾಸ್ತರು ತಂದೆಯ ಪ್ರತಿಬಿಂಬವಾಗುತ್ತಾರೆ. ಆನಂತರ ಬೆಳೆದ ಯುವಕನು ಸಮಾಜದ ಗಣ್ಯ ವ್ಯಕ್ತಿಗಳನ್ನು ತಂದೆಯ ಪ್ರತಿಬಿಂಬವನ್ನಾಗಿಸಿಕೊಳ್ಳುತ್ತಾನೆ. Father Image ಈ ರೀತಿ ಹರಡುತ್ತದೆ. ಸಮಾಜದ ಹತ್ತೂ ಮಂದಿಗೆ ಅನ್ವಯಿಸಿಕೊಳ್ಳುತ್ತದೆ.