ಒತ್ತಡದಿಂದ ಸ್ವಯಂಕೃತವಾಗಿಯೋ ಕನಸಿನ ಮೂಲಕವೋ ನಿಷ್ಠೆಯು ಸಡಿಲವಾದರೆ, 'ಮಾಡಬಾರದುದನ್ನು ಮಾಡಿದೆ. ಅಂದ ಮೇಲೆ ಆಗಬಾರದುದು ಆಗಿಬಿಡುತ್ತೆ' ಎನ್ನುವ ಮನೋಭಾವವುಂಟಾಗುತ್ತದೆ. ಹೀಗಾಯಿತಲ್ಲ ಎನ್ನುವ ಆತಂಕ. ಮುಂದೆ ಆಗಬಾರದ್ದು ಆಗುತ್ತೆ ಎನ್ನುವ ಭಯ. ಇಂತಹ ಮನಃಸ್ಥಿತಿಯಲ್ಲಿ ಆತಂಕ ಮತ್ತು ಭಯ ಇವೆರಡೂ ಒಂದಕ್ಕೊಂದು ಬೆಂಬಲವಾಗಿ, ಎರಡೂ ಅಧಿಕವಾಗುತ್ತದೆ. ನಿನ್ನಲ್ಲಿ ಹೀಗಾಗಿದೆ.
'ಮನಸ್ಸಿನ ಆತಂಕವು ದೇಹಕ್ಕೆ ಹರಡಿ, ಶ್ವಾಸಕೋಶಗಳಲ್ಲಿ ಮನೆ ಮಾಡಿಕೊಂಡಿದೆ. ಉಸಿರಾಟದ ಏರುಪೇರು, ಉಸಿರು ಸಿಕ್ಕಿಕೊಂಡಹಾಗಾಗುವುದು; ನಿಂತೇಹೋಯಿತು, ಸತ್ತೇಹೋಗುತ್ತೇನೆ, ಎನ್ನುವ ಭಯ, ಇವೆಲ್ಲವೂ ನೀ ತಪ್ಪುಮಾಡಿದೆ ಎನ್ನುಕೊಳ್ಳುವುದರಿಂದ ಉಂಟಾದ ಅಪರಾಧಕ್ಕೆ-ನಿನ್ನ ಮನಸ್ಸೇ ವಿಧಿಸುವ ಶಿಕ್ಷೆ. ಈ ಶಿಕ್ಷೆಯೂ ಮಾಯಾ ರೂಪಿನದೇ! ಏಕೆಂದರೆ ನಿನ್ನ ಉಸಿರಾಟದಲ್ಲಿ ಯಾವ ತೆರನ ವ್ಯತ್ಯಾಸವು, ಪ್ರಾಣಕ್ಕೆ ಸಂಚು ತರಬಹುದಾದಂತಹ ವ್ಯತ್ಯಾಸವೂ, ಕಂಡು ಬಂದೇ ಇಲ್ಲ. ತಪ್ಪು ಮಾಡಿದೆ ಎನ್ನುವ ಭಾವನೆಯೂ ಅಜ್ಞಾನದೋಷದಿಂದ ಉಂಟಾದುದು; ಅರ್ಧಮರ್ಧ ಓದಿನಿಂದ ಉಂಟಾದುದು. ಆದಕಾರಣ ಈ ಸಂಕಟದಿಂದ ಪಾರಾಗಬೇಕಾದರೆ, ಇದರ ವಿಷಯದ ವೈದ್ಯವಿಜ್ಞಾನವನ್ನು ಆದಷ್ಟು ಪೂರ್ಣವಾಗಿ ಅರಿತುಕೊಳ್ಳಬೇಕು.'
ಎಂದು ಎಳೆಎಳೆಯಾಗಿ ಸುಲಭವಾಗಿ ಅರ್ಥವಾಗುವಂತೆ, ಉದಾಹರಣೆಗಳನ್ನು ಕೊಟ್ಟು, ಸರಳವಾಗಿ ವಿವರಿಸಿದೆ.
'ತುಂಬಾ ಥ್ಯಾಂಕ್ಸ್ ಸಾರ್' ಎಂದ. 'ಎಲ್ಲವೂ ಅರ್ಥವಾಯಿತು. ಇನ್ನು ಮೇಲೆ ಉಸಿರು ನಿಂತು ಹೋದರೂ ಹೋಗಲೀ ಅಂತ, ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತೇನೆ. ಪಾಪದ ಕೆಲಸವು ಆಗಿಹೋಯಿತು, ಮಾಡಬಾರದ್ದನ್ನು ಮಾಡಿದೆ ಎಂದು ವೃಥಾ ಕೊರಗುವುದಿಲ್ಲ.' ಎಂದು ಭರವಸೆಯನ್ನು ಕೊಟ್ಟ 'ನೀವು ಹೇಳಿದ್ದು ಅರ್ಥವಾಯಿತು, ಸಾರ್ ! ಆದರೆ ಮನಸ್ಸನ್ನು ದೃಢಪಡಿಸಿ, ಮಾಡುತ್ತಿರುವ ಕೆಲಸವನ್ನು ಉಸಿರು ಸಿಕ್ಕಿಹಾಕಿಕೊಂಡರೂ, ಮುಂದುವರೆಸುವಂತೆ ಸಹಾಯಮಾಡುವ ಔಷಧಿಗಳನ್ನೋ ಟಾನಿಕ್ಕನ್ನೋ ಕೊಡುತ್ತೀರಾ' ಎಂದು ಕೇಳಿದ.
ಪ್ರಶ್ನೆಯು ನ್ಯಾಯವಾಗಿತ್ತು : ಸಮಂಜಸವಾಗಿತ್ತು. ಔಷಧಿಗಳು ಈವರೆಗೆ ಯಾವುದೂ ಕಂಡುಬಂದಿಲ್ಲ, ಎಂದು ಇದ್ದ ಯಥಾರ್ಥವನ್ನು ಹೇಳಲು ಮನಸ್ಸು ಹಿಂಜರಿಯಿತು. ಇಂತಹ ಸನ್ನಿವೇಶಗಳಲ್ಲಿ ನಿರುಪದ್ರವಿಯಾದ ಹಾಗೂ