ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೩೨

ಮನಮಂಥನ

ಹಂತದಲ್ಲಿ ನೀಡಿದರೆ ಮಾನಸಿಕ ನೆಮ್ಮದಿಯು ದೊರೆಯುತ್ತದೆ. ಆದರೆ ಅತ್ತೆ ಮಾವನಾಗಲೀ, ಗಂಡನಾಗಲೀ, ಅಂಕೆ ಶಿಕ್ಷೆಗೆ ಒಳಪಡಿಸಿದರೆ ಸರಿಹೋಗುತ್ತಾಳೆ, ಇದಕ್ಕೆಲ್ಲಾ ಹುಚ್ಚಾಸ್ಪತ್ರೆಗೆ ಹೋಗಿ ಮನೆಯ ಮಾನವನ್ನು ಕಳೆದುಕೊಳ್ಳುವುದೇ? ಎಂದುಕೊಳ್ಳುತ್ತಾರೆ. ಮಾನಸಿಕ ಪಲ್ಲಟವು ಅನಂತರ ವಿಪರೀತವಾಗಬಹುದು. ಚಿಕಿತ್ಸೆಗೆ ಬಗ್ಗುವ ಮಟ್ಟವನ್ನು ಮೀರಬಹುದು.

ಅಪಕ್ವ ಮನಸ್ಸು ಎಂದು ಯುವಕನಿಗಾಗಲೀ, ಯುವತಿಗಾಗಲೀ ಹೇಳಿದರೆ, ಅವರು ಒಪ್ಪುತ್ತಾರೆಯೇ? ಬಂಡೇಳುತ್ತಾರೆ. ಬಂಡೇಳುವುದೂ ಅಪಕ್ವ ಮನಸ್ಸಿನ ಒಂದು ಚಿಹ್ನೆ: ಈ ದೃಷ್ಟಿಯಿಂದ ಯೌವನದಲ್ಲಿ ಅಪಕ್ವ ಮನಸ್ಸು ಹೆಚ್ಚಾಗಿ ಕಾಣಬರುತ್ತದೆ. ಆದರೆ ವಯಸ್ಸು ಮೂಡಿದಂತೆಲ್ಲಾ ಮನಸೂ ಪಕ್ವವಾಗುತ್ತದೆ ಎಂದುಕೊಳ್ಳಬಾರದು. ಪಂಚಾಂಗದ ಪ್ರಕಾರ ವಯಸ್ಸಿಗೂ, ಮನಸ್ಸಿನ ಪರಿಪಕ್ವತೆಯ ಗತಿಗೂ, ಬಹಳಷ್ಟು ಜನರಲ್ಲಿ ಅನ್ವಯವು ಇರುವುದಿಲ್ಲ. ಆದಕಾರಣ, ಯುವಕರಲ್ಲಿ ಕಾಣಸಿಗುವ ಮಾನಸಿಕ ಪಲ್ಲಟಗಳು, ಬೆಳೆದ ವಯಸ್ಸಿನವರಲ್ಲಿ ಕೂಡ ಇರುತ್ತದೆ. ಆದರೆ ಪ್ರಚೋದಿಸುವ ಕಾರಣಗಳು ಬೇರೆ ಬೇರೆಯಾಗಿರುತ್ತವೆ. ವಾಸ್ತವಿಕತೆಯ ಅರಿವನ್ನು ಮೂಡಿಸುವ ಸಂಸಾರ ಮತ್ತು ಸಮಾಜದ ಹಲವಾರು ಕಟ್ಟುನಿಟ್ಟುಗಳು ಇರುವುದರಿಂದ ಮಾನಸಿಕ ಪಲ್ಲಟಗಳು ಯುವಕರಲ್ಲಿದ್ದಂತೆ ವಿಪರೀತವಾಗುವುದಿಲ್ಲ. ವಯಸ್ಕರಲ್ಲಿ ಮನಸ್ಸಿನ ಕಾರ್ಯಕ್ರಮಗಳು ಹೇಗೆ ಇರುತ್ತವೆಂಬುದನ್ನು ಮುಂದೆ ತಿಳಿಯೋಣ.

ವಯಸ್ಕರಲ್ಲಿ ಮನಸ್ಸಿನ ಕಾರ್ಯಕ್ರಮ

ರಾಮನಾಥಯ್ಯ ಎಂಬ ಸ್ನೇಹಿತನಿದ್ದಾನೆ. ತುಂಬಾ ಚೂಟಿ, ನಾಲಿಗೆಯೂ ಹರಿತ, ಯೋಚನೆಗಳು ಮಿಂಚಿನ ಬಳ್ಳಿಯಂತೆ ಮೂಡುತ್ತವೆ. ಅವುಗಳನ್ನು ಮಿರುಗುವ ಮಾತುಗಳಲ್ಲಿ ಕೇಳುವವರಿಗೆ ನಾಟುವಂತೆ ತಡಬಡವಿಲ್ಲದೆ ಆಡುತ್ತಾನೆ. ಅವನೊಂದಿಗೆ ಮಾತನಾಡುವುದೆಂದರೆ ನನಗೆ ಬಲು ಮೋಜು, ತಾಸು ತಾಸುಗಳನ್ನು ಹರಟೆಯಲ್ಲಿ ಕಳೆಯುತ್ತಿದ್ದೆವು. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅವ ಪಾಸಾದ. ನಾನೂ ಪಾಸಾದೆ, ಎನ್ನುವುದಕ್ಕಿಂತ ನಪಾಸಾಗಲಿಲ್ಲ ಎಂದರೆ ಸರಿಯಾದೀತು. ಅವನ ತಂದೆಯು, ಅದೇನು ಅವಸರವೋ, ಆಗ ಸತ್ತುಹೋದ. ತಮ್ಮಂದಿರು ತಂಗಿಯರು ಮತ್ತು ತಾಯಿಯನ್ನು ಸಾಕುವ ಹೊಣೆಗಾರಿಕೆಯು ರಾಮನಾಥಯ್ಯನ ಮೇಲೆ ಹದಿನಾರನೇ ವಯಸ್ಸಿನಲ್ಲಿ ಬಿತ್ತು. ಆದಕಾರಣ ಓದನ್ನು ಮುಂದುವರೆಸಲಿಲ್ಲ. ಸರ್ಕಾರಿ ಕಚೇರಿಯಲ್ಲಿ ಕ್ಲಾರ್ಕ್‌ ಆಗಿ ಕೆಲಸಕ್ಕೆ ಸೇರಿಕೊಂಡ.