ಸತ್-ಚೈತನ್ಯಾಂಶದ ಆದಿಮೂಲವು ನನ್ನ ನೆರವಿಗೆ ಬಂದು, ಆಗಬಹುದಾದ ದುಃಖವನ್ನು ತಪ್ಪಿಸಬಹುದು. ಈ ರೀತಿ ವಿಚಾರಮಾಡಿ, ವಿಚಾರಪರ ಮನಸ್ಸಿನ ಅಂಶವು. ತನ್ನನ್ನು ತಾನೇ ಸ್ತಬ್ಧಗೊಳಿಸುತ್ತದೆ. ಮನಸ್ಸಿನ ವಿಚಾರಪರ ಅಂಶವು ತಾನಾಗಿಯೇ 'ಬಲಿ'ಯಾಗುತ್ತದೆ. ಚಿತ್ತವೃತ್ತಿ ನಿರೋಧಃ ಎಂದು ಪತಂಜಲಿ ಮಹರ್ಷಿಗಳೂ ಯೋಗವನ್ನು ವಿವರಿಸುವಾಗ ಹೇಳಿದುದು, ಈ ದೃಷ್ಟಾಂತದಿಂದಲೂ ಸಮರ್ಥನೀಯವಾಗಿದೆ. ಆದರೆ ಮತ್ತೂ ಹೆಚ್ಚಿನ ವಿಶಾಲ ಅರ್ಥವುಳ್ಳ ಆ ವಾಕ್ಯವನ್ನು ಮುಂದೆ ಅಭ್ಯಾಸ ಮಾಡೋಣ. ಅರಿಯಲು ಪ್ರಯತ್ನಿಸೋಣ.
ವಯಸ್ಕರ ಮನಸ್ಸಿನಲ್ಲಿ ಕಾರ್ಯಕ್ರಮಗಳು ಹೇಗೆ ನಡೆಯುತ್ತವೆ ಎಂಬುದನ್ನು ಸ್ಕೂಲವಾಗಿ ತಿಳಿದೆವು. ಇವಕ್ಕೆಲ್ಲಾ ಸ್ವಾರ್ಥವು ಪ್ರಮುಖವಾದ ಪ್ರೇರಣೆಯೆಂಬುದನ್ನೂ ಅರಿತೆವು. ಬಾಳ ಅನುಭವವು, ವಿಚಾರಪರ ಮನಸ್ಸಿನ ಅಂಶದಿಂದ ನೆರವು ಪಡೆದು, 'ನಿನ್ನ ನೀ ಕಾಪಾಡಿಕೊ ಇತರರನ್ನು ಭಗವಂತ ರಕ್ಷಿಸುತ್ತಾನೆ' ಎಂಬ ಪಾಠವನ್ನು ಚಚ್ಚಿ ಬಡಿದು ಕಲಿಸಿರುತ್ತದೆ. ಸ್ವಂತ ಸಂರಕ್ಷಣೆಯನ್ನು ಸಮಾಜದಲ್ಲಿದ್ದುಕೊಂಡೇ, ಮಾಡಿಕೊಳ್ಳುವಾಗ, ವಯಸ್ಕರಲ್ಲಿ ಹಲವಾರು ವಿಚಿತ್ರ ನಡವಳಿಕೆಗಳು ಕಾಣಬರುತ್ತವೆ.
ಒಂದು ನಾನು, ನಾನಿದ್ದರೆ, ತಾನೇ ಈ ಬಾಳು, ಈ ಲೋಕ, ಈ ಸಮಾಜ, ಈ ಸಂಸಾರ. ಅಂತಹ ನನ್ನನ್ನು ನಾನೇ, ನನಗಿರುವ ವಿಚಾರ ಮಾಡುವ ಮನಸ್ಸಿನಿಂದ ಸಾಧಿಸಲೇಬೇಕು. ನನಗೆ ಯಾರೂ ನೆರವಾಗುವುದಿಲ್ಲ. ಈ ಯೋಚನೆಯಿಂದ ಯಾರನ್ನೂ ನಂಬದೆ, ಬಾಳುವವರು ಕೆಲವರು.
ಎರಡು-ನಾನು ಇರಬೇಕಾದರೆ, ಸಮಾಜ ಮತ್ತು ಸಂಸಾರವು ನೆರವಾಗಲೇ ಬೇಕು. ಬಾಲ್ಯದಲ್ಲಿ ತಾಯ್ತಂದೆಯರು, ಅಥವಾ ಪೋಷಕರು ಹೀಗೆ ನೆರವಾದರು, ಮುಂದೆಯೂ ಹೀಗೆಯೇ ಆಗಬೇಕು. ಆದಕಾರಣ, ಸ್ವಾರ್ಥಕ್ಕಾಗಿಯಾದರೂ ಪರಾರ್ಥ ಹಿತವನ್ನು ಆಗ ಮಾಡಬೇಕು; ಎನ್ನುವವರು ಕೆಲವರು.
ಮೂರು-ನಾನು ಮತ್ತು ನನ್ನ ಸುಖವನ್ನು ಹಾಗೂ ಹಿತವನ್ನು ನಡಸಿಕೊಡಬೇಕಾದರೆ, ಲೌಕಿಕವಾದ ಸಮಾಜ ಮತ್ತು ಸಂಸಾರವು ಹೆಚ್ಚು ಪ್ರಯೋಜಕವಾಗುವುದಿಲ್ಲ. ಆದಕಾರಣ, ಬ್ರಹ್ಮಾಂಡವನ್ನು ನಡೆಸುವ ಅವ್ಯಕ್ತವಾದ ಆದಿ ಮೂಲಕ್ಕೆ ಶರಣಾಗುವುದು ಲೇಸು. ಅದು ನನ್ನನ್ನು ರಕ್ಷಿಸುತ್ತದೆ ಎಂದು ನಿರ್ಧರಿಸಿ, ಅದರಂತೆ ನಡೆಯುವವರು ಹಲವಾರು ಮಂದಿ ಶರಣಾಗತರು, ಶರಣರು.