೧೭
ಉಪಯೋಗಕ್ಕೂ ಬರುವಂತಹ ಪುಟ್ಟ ಸುಳ್ಳನ್ನು ಹೇಳುವುದು ನ್ಯಾಯ ಎನ್ನಿಸಿತು. ಆದಕಾರಣ ಆತಂಕಶಮನಕಾರಕ ಔಷಧಿಗಳಲ್ಲಿ ತುಂಬಾ ಲಘುವಾದುದೊಂದನ್ನು ಬರೆದುಕೊಟ್ಟು ಕಳುಹಿಸಿದೆ. ಆಗ ಹೋದ ರೋಗಿ, ತಿರುಗಿ ಬರಲೇ ಇಲ್ಲ.
ಹೇಳಿದುದನ್ನೆಲ್ಲಾ ಕೇಳಿಕೊಂಡು ಅರ್ಥಮಾಡಿಕೊಂಡು ಪೂರ್ಣಗುಣಹೊಂದಿರುವುದರಿಂದ, ನನ್ನ ಬಳಿಗೆ ಪುನಃ ಬರಲಿಲ್ಲ ಎಂದು ನಾನಂದುಕೊಳ್ಳುವುದು, ಬರೀ ಹುಸಿ ಆಸೆ, ಈ ತೆರನ ಬೇನೆಗಳು ಬೇಗ ಗುಣವಾಗುವುದಿಲ್ಲ. ಕೆಲವು ತಿಂಗಳುಗಳಾದರೂ ಕಾಡುತ್ತವೆ. ಆದುದರಿಂದ ಪ್ರಾಯಶಃ ಈ ರೋಗಿಯು, ಹತ್ತಾರು ವೈದ್ಯರುಗಳ ಬಳಿಗೆ, ಆರೆಂಟು ಆಸ್ಪತ್ರೆಗಳ ಮೊರೆಹೊಕ್ಕು, ನರಳುತ್ತಲೇ ಇರಬಹುದು. ಅವನ ಮೇಲೆ ನನ್ನ ವಿವರಣೆಯ ಪ್ರಭಾವವು, ಗೋರ್ಕಲ್ಲ ಮೇಲೆ ಮಳೆಗರೆದಂತೆಯೇ ಆಗಿರಬಹುದು.
ನರಳುತ್ತಿರುವ ರೋಗಿಗಳಿಗೆ, ಹೀಗಾಗುವುದು ಸಹಜ. ಅವರುಗಳ ಮನಸ್ಸು ಸ್ತಿಮಿತದಲ್ಲಿರುವುದಿಲ್ಲ. ಆತಂಕ, ಭಯಗಳ ನಡುವೆ ಸಿಕ್ಕಿಕೊಂಡು ಡೋಲಾಯಿಸುತ್ತಿರುತ್ತದೆ. ಆದರೆ ರೋಗಿಯ ತಾಯ್ತಂದೆಯರು, ನೆಂಟರಿಷ್ಟರು, ಈ ಹೊತ್ತಗೆಯನ್ನು ಓದಿ ಅರ್ಥಮಾಡಿಕೊಂಡರೆ, ಆಗ ರೋಗಿಯು ಏಕೆ ಹಾಗೆ ಅಸಂಬದ್ಧವಾಗಿ ಆಡುತ್ತಾನೆ. ಉಸಿರು ನಿಂತೇ ಹೋಗಿದೆ ಎಂದು ಉಸಿರಾಡುತ್ತಿದ್ದರೂ ಹೇಳುತ್ತಿದ್ದಾನೆ, ಎನ್ನುವುದು ತಿಳಿಯುತ್ತದೆ. ಹೀಗೆ ಏಕೆ ಪೆಚ್ಚುಪೆಚ್ಚಾಗಿ ಆಡ್ತೀ, ತಲೇಲಿ ಬುದ್ಧಿ ಇಲ್ಲವೇ ಎಂದು ಅವನ ಮೇಲೆ ರೇಗುವುದಾದರೂ ತಪ್ಪುತ್ತೆ. ಹಾಗೆ ಹಿರಿಯರು ರೇಗುವುದರಿಂದ ಅವನ ಮನಸ್ಸು ಇನ್ನೂ ಮೊಂಡು ಹಿಡಿಯುತ್ತೆ ಇನ್ನೂ ಬೆದರುತ್ತೆ, ಬದಲು ಅನುಕಂಪವನ್ನು ತೋರಿಸಿದರೆ, ಮನಸ್ಸು ಸರಳವಾಗುತ್ತದೆ. ಹೆಚ್ಚು ಪ್ರಸನ್ನವಾಗುತ್ತದೆ, ಅಂದರೆ ಗುಣ ಹೊಂದಲು ಹೆಚ್ಚು ಅನುಕೂಲವೂ ಆಗುತ್ತದೆ.
ಒಬ್ಬರ ಮನೆಯ ದೋಸೆ ತೂತಾದರೆ ಇನ್ನೊಬ್ಬರ ಮನೆಯ ಕಾವಲಿಯೇ ತೂತು ಎನ್ನುವಂತೆ, ಈ ತೆರನ ರೋಗಿಗಳು ಒಂದಲ್ಲ ಒಂದು ಹಂತದಲ್ಲಿ ಎಲ್ಲ ಮನೆಗಳಲ್ಲಿಯೂ ಇರುತ್ತಾರೆ. ಅಂದರೆ ಎಲ್ಲರಿಗೂ ಅಗತ್ಯವಾಗಿ ತಿಳಿದಿರಬೇಕಾದ ವಿಷಯಗಳಿವು. ಸಮಾಜದಲ್ಲಿ ದೇಹಾರೋಗ್ಯವು ಇರಬೇಕು; ಮನಸ್ವಾಸ್ಥ್ಯವ ಇರಬೇಕು ಎಂದು ಬಯಸುವವರೆಲ್ಲರೂ ಈ ವಿಷಯವನ್ನು ಮನಗಾಣಬೇಕು.
೨. ಕಟ್ಟಿಬಿಡುವ ಉಸಿರು
ಕಳೆದ ಐದಾರು ತಿಂಗಳುಗಳಿಂದ ಆಕೆಯು ನರಳಲಾರಂಭಿಸಿದ್ದಳು.