ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೪೬

ಮನಮಂಥನ

ಭಯವು ಕಾಡುತ್ತದೆ. ಆ ಸ್ನೇಹಿತನು ಅರ್ಬುದ ರೋಗದಿಂದ ತುಂಬ ನರಳಿ ಸತ್ತ, ಆ ಗೆಳೆಯನಿಗೆ ಲಕ್ವಾ ಬಡಿದು, ನಾಯಿಪಾಡನ್ನು ಅನುಭವಿಸುತ್ತಿದ್ದಾನೆ. ಪಾಪ, ನನ್ನ ಸ್ನೇಹಿತನ ಕಣ್ಣುಗಳೆರಡೂ ಆಪರೇಷನ್ ಆದನಂತರ, ಇಂಗಿಯೇ ಹೋದುವಂತೆ ; ಹೀಗೆ ಸುತ್ತಲೂ ನಡೆದ ಘಟನೆಗಳನ್ನು ಕಂಡು, ನನಗೂ ಹಾಗೆ ಆಗುತ್ತೇನೋ ಎನ್ನುವ ಭಯವು ಮುತ್ತುತ್ತದೆ, ಕಾಡುತ್ತದೆ. ನರಳಿ ಸಾಯುವ ಕಾಲವು ಹತ್ತಿರ ಹತ್ತಿರವಾಗುತ್ತಿದೆ ಎನ್ನುವ ವಾಸ್ತವಿಕತೆಯು ಸ್ಪಷ್ಟವಾಗತೊಡಗುತ್ತದೆ. ಬಯಸಿದಂತೆ ಬಾಳಲು ಹೇಗೆ ಸಾಧ್ಯವಿಲ್ಲವೋ, ಬಯಸಿದಂತೆ ಸಾಯುವುದೂ ಸಾಧ್ಯವಿಲ್ಲ ಎಂಬುದೂ ತಿಳಿದಿರುತ್ತದೆ.

ಇವೆಲ್ಲಾ ಕಾರಣಗಳಿಂದ Ego ಎಂಬ ಕಲ್ಪನೆಯು ಸ್ವಲ್ಪ ಸ್ವಲ್ಪವಾಗಿ ಕರಗತೊಡಗುತ್ತದೆ. ಆದರೂ ಜೀವವಿರುವ ತನಕ ಅದೂ ಇರಬೇಕಲ್ಲ, ಇರುತ್ತದೆ. ಆದರೆ ಭವಿಷ್ಯದ ಕನಸುಗಳನ್ನು ಕಟ್ಟುತ್ತಾ ಮೆರೆಯುವುದಿಲ್ಲ.

Ego ಅಥವಾ ಮಮಕಾರವು ಕರಗುತ್ತ ಅಥವಾ ಕಡಿಮೆಯಾಗುತ್ತ ಹೋಗುವುದರಿಂದ ದೇಹದ ವಿಷಯದಲ್ಲಿ ಮನಸ್ಸು ಸ್ವಲ್ಪ ಉದಾಸೀನವಾಗ ತೊಡಗುತ್ತದೆ.

ಮೂವತ್ತರ ಯೌವನದಲ್ಲಿ ಕಣ್ಣಿಗೆ ತುಸು ಬೇರೆಯಾದರೆ, ದೃಷ್ಟಿಯು ಎಲ್ಲಿ ಇಂಗಿ ಹೋಗುತ್ತೋ ಎಂದು ಕಾತರನಾಗುತ್ತಾನೆ. ಹತ್ತೂ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆಯನ್ನು ಪಡೆಯುತ್ತಾನೆ. ಆದರೆ ಆರೇಳು ದಶಕಗಳು ಮೀರಿದ ಮುದುಕನಿಗೆ ದೃಷ್ಟಿಯು ಕಣ್ಣ ಪೊರೆಯಿಂದ ಮಂದವಾದರೆ, ತತ್‌ಕ್ಷಣ ಚಿಕಿತ್ಸೆಗೆ ಹೋಗುವುದಿಲ್ಲ. ಆಗ ಸ್ವಂತ ಅಗತ್ಯಗಳಿಗೆ ಸಾಕಾದಷ್ಟು ದೃಷ್ಟಿಯು ಇನ್ನೂ ಇದೆಯಲ್ಲ ; ಸಿನಿಮಾಕ್ಕೆ ಹೋಗುವುದು ಸಾಧ್ಯವಿಲ್ಲ ; ಬೇಡವೇ ಬೇಡ ; ನಾಟಕಗಳನ್ನು ನೋಡಲು ಆಗುವುದಿಲ್ಲ ; ನೋಡದೆ ಇದ್ದರೆ ಕಳೆದುಕೊಂಡಿದ್ದೇನು? ಈ ರೀತಿ ಮನಸ್ಸು ನಡೆಯ ತೊಡಗುತ್ತದೆ. ಕಡೆಗೊಮ್ಮೆ ಆಪರೇಷನ್ ಮಾಡಿಸಲು ನಿರ್ಧರಿಸಿದಾಗ, ಶಸ್ತ್ರ ಚಿಕಿತ್ಸೆಯ ಭಯವು ವಯಸ್ಕರಲ್ಲಿದ್ದಂತೆ ಅತಿಯಾಗಿರುವುದಿಲ್ಲ. ಈಗಲೂ ಕಣ್ಣು ಕುರುಡು ; ಮಸಲಾ ಆಪರೇಷನ್ ಸಫಲವಾಗದೆ ಇದ್ದರೆ, ಮೊದಲಿದ್ದ ಕುರುಡು ಮುಂದುವರೆಯುತ್ತದೆ. ಕಳೆದು ಕೊಳ್ಳುವುದಾದರೂ ಏನನ್ನು? ದೃಷ್ಟಿಯು ಪುನಃ ಬರಬಹುದು ಎಂಬ ಆಸೆಯನ್ನು, ಅಷ್ಟೇ ತಾನೆ ? ಎನ್ನುವ ಉದಾಸೀನ ಭಾವನೆಯು ಉಂಟಾಗುತ್ತದೆ. ವಯಸ್ಕರಲ್ಲಿ ಕಂಡುಬರುವ ಬೇನೆಯ ಕಾತರಗಳು, ಮುಪ್ಪಿನಲ್ಲಿ ಕಡಿಮೆಯಾಗಿರುತ್ತವೆ. ಬೇನೆಯ ಫಲವಾಗಿ ಮುಂದೆ ಬೃಹನ್ನಳೆಯಾಗಬಹುದು ಎಂದು ವಯಸ್ಕನಿಗೆ ತಿಳಿದರೆ, ಆತಂಕವು ಅತಿ ಹೆಚ್ಚಾಗಿ