೩೫೧
ಬಯಸಿ ದುಡಿದ ನನಗೆ ಹೀಗೇಕಾಯಿತು? ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕತೊಡಗುತ್ತದೆ. ಮನಸ್ಸಿನಲ್ಲಿ 'ನಾನು' ಎಂದು ದೃಢವಾಗಿ ಬೇರೂರಿರುವ ಕಲ್ಪನೆಯ ವಿವರಗಳನ್ನು ಅರಿಯತೊಡಗುತ್ತದೆ. ಇಂತಹ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುವುದು; ಅವುಗಳ ಜಿಜ್ಞಾಸೆಯನ್ನು ವಿಚಾರಪರ ಮನಸ್ಸು ಮಾಡುವುದು, ಇವೆಲ್ಲವೂ ಸತ್-ಚೈತನ್ಯಾಂಶದ ಪ್ರಭಾವದಿಂದಲೇ. ವಯಸ್ಸಿನಲ್ಲಿ ರಂಗು ರಂಗಿನ ಬಾಳನ್ನು ಅನಂಗನ ಹೆಸರಿನಲ್ಲಿ ಆಡಿ ಕುಣಿದು ನಡೆಸಿದವರು, ಮುಪ್ಪಿನಲ್ಲಿ ತುಳಸೀದಳವನ್ನು ಕಿವಿಗೆ ಸಿಕ್ಕಿಸಿಕೊಂಡು, ಪುರಾಣ ಪುಣ್ಯ ಕತೆಗಳನ್ನು ಕೇಳ ಹೋಗುತ್ತಾರಲ್ಲ ; ಅದು ಸತ್-ಚೈತನ್ಯಾಂಶದ ಪ್ರಭಾವದಿಂದ ಅಂತಹವರನ್ನು ಕಂಡು ಹೀಯಾಳಿಸುವುದು ಮತ್ತು ಗೇಲಿ ಮಾಡುವುದು, ಯುವಕರ ಸ್ವಭಾವ ಇಂತಹ ಮುದುಕರು ಕಪಟವಾಡುತ್ತಾರೆ ಎಂದು ಯುವಕರ ಅಭಿಪ್ರಾಯ. ಆದರೆ ನಿಜವಾಗಿಯೂ ಮುದುಕರು ಕಪಟವಾಡುತ್ತಿರುವುದಿಲ್ಲ. ಸೋಗು ಹಾಕುತ್ತಿರುವುದಿಲ್ಲ. ವೃದ್ಧ ನಾರಿಯು ಮಾನಸಿಕವಾಗಿಯೂ ಪತಿವ್ರತೆಯಾಗಲು ಹಂಬಲಿಸುತ್ತಾಳೆ. ಮನಸ್ಸಿನ ಸತ್-ಚೈತ್ಯನ್ಯಾಂಶವು ಪ್ರಭಾವವನ್ನು ಮುಪ್ಪಿನಲ್ಲಿ ಹೆಚ್ಚಾಗಿ ಬೀರುವುದರಿಂದ, ಈ ತೆರನ ಆಧ್ಯಾತ್ಮಿಕ ಪ್ರವೃತ್ತಿಯು ಕಾಣಿಸಿಕೊಳ್ಳುತ್ತದೆ.
ಮುಪ್ಪಿನಲ್ಲಿ ಬಹುಪಾಲು ಮಂದಿಗೆ ಹೀಗಾಗುತ್ತದೆ. ಅವರಲ್ಲಿ ಕೆಲವರಿಗೆ ವಿಚಾರಪರ ಮನಸ್ಸು ಸಾಕಷ್ಟು ಚುರುಕಾಗಿ ಉಳಿದಿರುತ್ತದೆ. ಲೌಕಿಕದಲ್ಲಿ ಉದಾಸೀನತೆಯು ಮೂಡಿರುವುದರಿಂದ ಅಲೌಕಿಕದ ವಿಷಯಗಳಲ್ಲಿ ವಿಚಾರಪರ ಮನಸ್ಸು ಆಸಕ್ತವಾಗುತ್ತದೆ. ಆತ್ಮ ಜಿಜ್ಞಾಸೆಯನ್ನು ಮಾಡುವ ಯೋಗ್ಯತೆಯೂ ಶಕ್ತಿಯೂ ಇರುತ್ತದೆ. ಪ್ರಾಯಶಃ ಅಂತಹವರು, ಬ್ರಹ್ಮಾಂಡದ ಆದಿಮೂಲವು ಒಂದೇ ಅದ್ವಿತೀಯವಾದುದು. ಆದುದರಿಂದ ಅದೈತವೇ ಸಿದ್ಧಾಂತ ಎಂದು ಅನ್ನುವ Theosophy, ರಾಮಕೃಷ್ಣ ಪಂಥ, ಇತ್ಯಾದಿ ಸಂಘಗಳನ್ನು ಕಟ್ಟಿಕೊಳ್ಳುತ್ತಾರೆ.
ಮತ್ತೆ ಕೆಲವರಿಗೆ ವಿಚಾರಪರ ಮನಸ್ಸು ಚುರುಕನ್ನು ಉಳಿಸಿಕೊಂಡಿರಲಿ, ಆದರೂ ಅದು ಮನಸ್ಸಿನ ಅಂಶವೇ ಆಗಿದೆ. ಆದಿಮೂಲವನ್ನು ಅರಿಯಬೇಕಾದರೆ, ಮನಸ್ಸು ನೆರವನ್ನು ನೀಡಬಹುದು. ಆದರೆ ಅದು ನಿರ್ಮೂಲವಾದ ಹೊರತು ಆದಿಮೂಲವು ಸಾಕ್ಷಾತ್ಕಾರವಾಗುವುದಿಲ್ಲ ಎಂದು ನಿರ್ಣಯಿಸುತ್ತಾರೆ. ಆದಿಮೂಲವು ಕೃಪೆದೋರಿ, ಕೈಚಾಚಿ ಎಳೆದುಕೊಂಡರೆ; ಆಗ ಅದರ ಸಾಕ್ಷಾತ್ ದರ್ಶನವು ಸಾಧ್ಯ ಎನ್ನುತ್ತಾರೆ. ಆದಿಮೂಲವು ಕೃಪೆತೋರಬೇಕಾದರೆ, ಅದಕ್ಕೆ ಸಂಪೂರ್ಣವಾಗಿ ಶರಣಾಗಬೇಕು, ಶರಣಾಗತರಾಗಬೇಕು ಎಂದು ಹೇಳುತ್ತಾರೆ. ಆದಿ ಮೂಲವು ಅದ್ವಿತೀಯವೇ ಸರಿ. ಆದರೆ ವಿಶಿಷ್ಟವಾದ ಅದೈತವದು,