ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮

ಮನಮಂಥನ

'ನೋಡುವುದಕ್ಕೇನೋ ಕಟ್ಟುಮಸ್ತಾಗಿದ್ದೀನಿ, ಡಾಕ್ಟರೆ ; ಆದರೆ Sudden ಆಗಿ ಉಸಿರು ಕಟ್ಟಿಬಿಡುತ್ತೆ. ಹೊತ್ತುಗೊತ್ತು ಏನೂ ಇಲ್ಲ, ಎಲ್ಲಿದ್ದರೂ ಅದು ಒರಗುತ್ತೆ. ಊಟ ಮುಗಿಸಿ ಸ್ಕೂಲಿಗೆ ಹೋಗುವಾಗ ಆರೋಗ್ಯವಾಗಿಯೇ ಇರುತ್ತೇನೆ. ನಮ್ಮ ಮನೆಯಿಂದ ಸ್ಕೂಲಿಗೆ ಕೇವಲ ಇಪ್ಪತ್ತು ನಿಮಿಷಗಳ ನಡಿಗೆ, ಅಷ್ಟೇ ! ಆದರೆ ಹೊರಟ ಐದಾರು ನಿಮಿಷಗಳಲ್ಲೇ ಒಮ್ಮೊಮ್ಮೆ ಉಸಿರು ಕಟ್ಟಿಬಿಡುತ್ತದೆ. ಆಗ ತುಂಬಾ ಗಾಬರಿಯಾಗುತ್ತದೆ. ಎಲ್ಲಾದರೂ ಸತ್ತುಹೋದರೆ; ಅದರಲ್ಲೂ ನಡುರಸ್ತೆಯಲ್ಲಿ ! ಎಷ್ಟು ಅವಮಾನ ಆಗುತ್ತೆ ? ಆಗ ಮನೆಗೆ ಹಿಂತಿರುಗಿ ಓಡಿಬಿಡುತ್ತೇನೆ. ಪಟ್ಟು ಹಿಡಿದು ಮುಸುಕು ಎಳೆದುಕೊಂಡು ಮಲಗಿಬಿಡುತ್ತೇನೆ. “ಉಸಿರಾಡುತ್ತಲೇ ಇದೀಯಲ್ಲೇ, ಅದೆಲ್ಲಿ ಕಟ್ಟಿಹೋಗಿದೆ' ಎಂದು ಅಮ್ಮ ರೇಗಿ ಬಯ್ಯುತ್ತಾರೆ. ನನ್ನ ಕಷ್ಟ ಅವರಿಗೆ ತಿಳಿಯೋದೇ ಇಲ್ಲ. ಅವರ ಹತ್ತಿರ ಈಚೀಚೆಗೆ ನನಗಾಗುವುದನ್ನು ಹೇಳಿಕೊಳ್ಳುವುದೇ ಇಲ್ಲ. ಗೋಡೆಗೆ ಮುಖ ಮಾಡಿಕೊಂಡು ಮಲಗಿಬಿಡುತ್ತೇನೆ. ಅವರೇನಾದರೂ ಅಂದುಕೊಳ್ಳಲಿ ಅಂತ ತೆಪ್ಪಗಿರುತ್ತೇನೆ. ಒಂದರ್ಧ ಗಂಟೆಯ ತರುವಾಯ ತನ್ನಷ್ಟಕ್ಕೆ ತಾನೇ ಉಸಿರು ಸರಾಗವಾಗುತ್ತದೆ' ಎಂದು ತನ್ನ ಗೋಳನ್ನು ಉಮಾಕುಮಾರಿ ತವಕ ಪಡುತ್ತಾ ಹೇಳಿಕೊಂಡಳು.

ಇಪ್ಪತ್ತು ಇಪ್ಪತ್ತೆರಡರ ತುಂಬು ಪ್ರಾಯ. ಮಾಸಲ ಬಣ್ಣವಾದರೂ ಮುಖದಲ್ಲಿ ಕಳೆಯಿತ್ತು. ಆದರೆ ತುಸು ಕಾತರವೂ ಮುಖದಲ್ಲಿ ಗೆರೆಗಳನ್ನು ಮೂಡಿಸಿದ್ದುವು. ಅವಳ ತಂದೆಯು ನನ್ನ ಹಳೆಯ ಗೆಳೆಯ. ಹಾಗಾಗಿ ಬಿಚ್ಚು ಮಾತನ್ನಾಡಲು ಅಡ್ಡಿಯೇನೂ ಇರಲಿಲ್ಲ. ಬಿ.ಎಸ್‌ಸಿ., ಪರೀಕ್ಷೆಯನ್ನು ಹೈಸೆಕೆಂಡ್ ಕ್ಲಾಸಿನಲ್ಲಿ ಪಾಸು ಮಾಡಿದ್ದಳು. ಸಂಗೀತದಲ್ಲಿ ಸ್ವಲ್ಪ ಅಭಿರುಚಿ ಇತ್ತು. ಆದುದರಿಂದ, ಸಂಪ್ರದಾಯಸ್ಥನಾದರೂ, ತಂದೆಯು, ಆಕೆಗೆ ಪ್ರಸಿದ್ಧ ಭಾಗವತರಲ್ಲಿ ಸಂಗೀತ ಪಾಠಕ್ಕೆ ಏರ್ಪಾಡು ಮಾಡಿದ್ದ. ಸುಮಾರು ಖರ್ಚೂ ಆಗುತ್ತಿತ್ತು. ಶುರುಮಾಡಿದ ಐದಾರು ತಿಂಗಳುಗಳಲ್ಲಿಯೇ ಉಮಾಕುಮಾರಿಗೆ ಸಂಗೀತದಲ್ಲಿ ಬೇಸರ ಹುಟ್ಟಿತು. ಸಂಗೀತದ ಪಾಠಗಳಿಗೆ ಹೋಗುವುದನ್ನು ನಿಲ್ಲಿಸಿದಳು. 'ನಿನಗಿಷ್ಟವಿರದಿದ್ದರೆ ಬೇಡ, ಐದಾರು ತಿಂಗಳುಗಳಿಂದ ಆರೇಳು ನೂರು ಕೈ ಬಿಟ್ಟಿತು ಅಂತ ವ್ಯಥೆ ಪಡಬೇಡ. ಆದರೆ ಸುಮ್ಮನೆ ಮನೆಯಲ್ಲಿ ಕುಳಿತು ಹೇಗೆ ಕಾಲ ಕಳೆಯುತ್ತೀ ಷಾರ್ಟ್‌ಹ್ಯಾಂಡ್, ಟೈಪ್‌ರೈಟಿಂಗ್ ಆದರೂ ಕಲಿತುಕೊ, ಮುಂದಕ್ಕೆ ಪ್ರಯೋಜನಕ್ಕೆ ಬರಬಹುದು ಎಂದು ತಂದೆ ಹೇಳಿದ್ದರು.

'ಓದುವುದು ಸಾಕು. ಮುಂದೆ ಕಲಿಯುವುದು ಬೇಡ, ಮನೆಕೆಲಸದಲ್ಲಿ ನನಗೆ ನೆರವಾಗಲಿ, ಬೆಳೆದ ಹುಡುಗಿ ಅಲ್ಲಿ ಇಲ್ಲಿ ಪುಣಕ್ ಪುಣಕ್ ಅಂತ