ಕೊಟ್ಟೆ? ಎಂದು ಸುಮಾರು ಎರಡು ಸಿಗರೇಟುಗಳ ಕಾಲ ಯೋಚಿಸಿದೆ. ಯಾರಿಗೂ ಕೊಟ್ಟ ನೆನಪಾಗಲಿಲ್ಲ. ಇಂತಹ ಪ್ರತಿಯನ್ನು ಯಾರಿಗೂ ಆಪ್ತರಿಗೂ ಕೂಡ, ಕೊಡಲು ಮನಸ್ಸು ಒಪ್ಪುವುದೇ ಇಲ್ಲ. ಕೆಲವು ಪುಸ್ತಕಗಳ ವಿಷಯದಲ್ಲಿ; ಅದೂ ನನ್ನ ಪುಸ್ತಕಗಳಾಗಿದ್ದರೆ, ನಾನು ಅತ್ಯಂತ ಲೋಭಿ, ಜಿಪುಣ. ಮತ್ತೆ ಆ ಪ್ರತಿಯೇನಾಯಿತು?
ಯಾಕೋ? ಬರೆಯಲು ಕುಳಿತರೆ, ಇವತ್ತು ಶಕುನವು ಸರಿಯಾಗಲಿಲ್ಲ. ಇವತ್ತು ಬರೆಯುವುದು ಬೇಡ. ಬೆಳಿಗ್ಗೆ ದೈನಂದಿನ ಪತ್ರಿಕೆಯಲ್ಲಿ ಕಂಡ ಚಕ್ರಬಂಧ ಸ್ಪರ್ಧೆಯ ಸಮಸ್ಯೆಯನ್ನು ಮುಗಿಸೋಣ ಎಂದುಕೊಂಡೆ. ಕಾಲವನ್ನು ಹಾಗೂ ತನ್ನನ್ನು ಖೂನಿ ಮಾಡಲು ಇದ್ದಕ್ಕಿಂತ ಪವಿತ್ರವಾದ ಹವ್ಯಾಸವುಂಟೇ? ಇಂತಹ ಪವಿತ್ರ ಕಾರ್ಯವನ್ನು ಪ್ರಾರಂಭಿಸುವ ಮೊದಲು, ಒಂದು ತಟ್ಟೆ ಹುರಿಗಾಳನ್ನು ಪಕ್ಕದಲ್ಲಿಟ್ಟುಕೊಂಡರೆ ವೈನ ಎಂದನಿಸಿತು. ಹುರಿಗಾಳಿನ ಡಬ್ಬವನ್ನು ಪುಸ್ತಕದ ಕಪಾಟಿನಲ್ಲಿ ಸುರಕ್ಷಿತವಾಗಿಡುವುದು ನನ್ನದೊಂದು ಒಳ್ಳೆಯ ಗುಣ. ಅದನ್ನೆಂದೂ ಮರೆಯುವುದಿಲ್ಲ. ತಟ್ಟೆಯನ್ನು ಹಿಡಿದುಕೊಂಡು ಹುರಿಗಾಳಿನ ಡಬ್ಬವಿದ್ದ ಪುಸ್ತಕದ ಕಪಾಟಿನ ಬಳಿಗೆ ಹೋದೆ. ಡಬ್ಬವನ್ನು ಹೊರ ತೆಗೆದೆ. ಅದರ ಹಿಂದೆಯೇ ಮನೋನಂದನದ ಪ್ರತಿಯು ಕಾಣಿಸಿತು. ಅದನ್ನು ಕಂಡ ಮೇಲೆ, ಶಕುನವು ಸರಿಹೋಯಿತು. ಇವತ್ತು ಈ ಅಧ್ಯಾಯವನ್ನು ಬರೆದು ಮುಗಿಸೋಣ ಎಂದು ಪುನಃ ಮೇಜಿನ ಬಳಿಗೆ ಬಂದೆ. ಪುಸ್ತಕವನ್ನು ಹಿಡಿದುಕೊಂಡು, ಹುರಿಗಾಳಿನ ಡಬ್ಬ ಮತ್ತು ತಟ್ಟೆಯನ್ನು ಡಬ್ಬದ ಮೇಲಿರಿಸಿದೆ.
ಮನೋನಂದನವನ್ನು, ಒದ್ದು ಬೈದು, ಬೇಡಿ ಕಾಡಿ, ಬರೆಸಿದ ಜಿ. ಪಿ. ಯವರ ನೆನಪಾಯಿತು. ಅವರಿಗೆ 'ಥ್ಯಾಂಕ್ಯೂ' ಅನ್ನಬೇಕು ಎನಿಸಿತು. ಅವರೆದುರಿಗೆ ಹಾಗೆ ಹೇಳಿದರೆ, ಅವರು ಸಂತಸಗೊಂಡಾರು ; ತೃಪ್ತಿಪಡಬಹುದು ಎಂದೂ ಅನ್ನಿಸಿತು. ಆದರೆ ಅದರ ಹಿಂದೆಯೇ 'ಎಷ್ಟೆಲ್ಲಾ ಕಾಡಿ ಕೆಡವಿದ ; ಸುಖವಸ್ತುವಾದ ನನ್ನನ್ನು' ಎಂಬ ಯೋಚನೆಯೂ ನೆನಪಾಯಿತು. ಎದುರಿಗೆ 'ಥ್ಯಾಂಕ್ಯೂ' ಎಂದರೂ ನನ್ನ ಮನಸ್ಸಿನಲ್ಲಿ ವಂದನಾ ಭಾವನೆಯೂ ಇರಲಿಲ್ಲ, ಇದೆಂತಹ ಮೋಸ! ನನಗೆ ನಾನೇ ಮಾಡಿಕೊಳ್ಳುವ ಮನಸ್ಸಿನ ತಟವಟ, ಎಂದೂ ತೋರಿತು. ನಂತರ ಆ ಪುಸ್ತಕದ ಹಾಳೆಗಳನ್ನು ಮನಸ್ಸಿನ ಚಟುವಟಿಕೆಗಳು ಎಂಬ ಅಧ್ಯಾಯದ ಪುಟಗಳನ್ನು ತಿರುವು ಹಾಕಿದೆ. ಅರೆ! ಅಲ್ಲಿ ಬರೆದಿರುವುದನ್ನೇ ಇಲ್ಲೂ ಬರೆಯಬೇಕಾಗುತ್ತದಲ್ಲ! ಇದೇನೂ ಅಷ್ಟು ಚೆನ್ನಲ್ಲ ಎನ್ನಿಸಿತು. ಹೇಳಿದ್ದನ್ನೇ ಹೇಳುವ ಕಿಸಬಾಯಿದಾಸನಾಗಬೇಕೇ ಎನ್ನಿಸಿತು. ಆದಕಾರಣ ಅಲ್ಲಿ ಬರೆದಂತೆಯೇ