ಮನಮಂಥನ
ಒಂದೊಂದು ಚಟುವಟಿಕೆಯನ್ನೂ ವಿವರವಾಗಿ ಬರೆಯುವುದು ಬೇಡ. ಬೇರೆಯ ತರಹಾ ಇನ್ನೂ ಸ್ಪಷ್ಟವಾಗಿ ಬರೆಯಬೇಕು. ವಿಷಯವು ಚೆನ್ನಾಗಿ ತಿಳಿದಿದ್ದರೆ, ಬರವಣಿಗೆಯು ಸರಳವೂ ಸುಲಭವೂ ಆಗಿರುತ್ತದೆ. ಆದಕಾರಣ ವಿಷಯವನ್ನು ಮೆಲುಕು ಹಾಕೋಣ ಎನಿಸಿತು.
ಮೇಜಿನ ಮುಂದೆ ಕುರ್ಚಿಯ ಮೇಲೆ ಕುಳಿತು ಮೆಲುಕು ಹಾಕತೊಡಗಿದೆ. 'ಮನಸ್ಸಿನ ಚಟುವಟಿಕೆಗಳು ಈ ವಿಷಯವು ನನ್ನ ಮನಸ್ಸನ್ನು ಕಚ್ಚಿಕೊಳ್ಳಲಿಲ್ಲ. ನನ್ನ ಮನಸ್ಸು ಅಡ್ಡದಾರಿಯನ್ನು ಹಿಡಿಯಿತು. ಸಿಗರೇಟು ಉರಿಯತೊಡಗಿತು.
'ಈ ಪುಸ್ತಕವನ್ನು ಅತ್ಯುತ್ತಮ ರೀತಿಯಲ್ಲಿ ಬರೆಯುತ್ತೇನೆ. ಕನ್ನಡವನ್ನು ಕಲಿಯುತ್ತಿರುವ ಹಿಪ್ಪಿ ತರುಣಿಯೊಬ್ಬಳು ಅಕಸ್ಮಾತ್ ಇದನ್ನು ನೋಡುತ್ತಾಳೆ, ಓದುತ್ತಾಳೆ. ಡಂಗ್ ಆಗಿ ಬಿಡುತ್ತಾಳೆ. ಬಂದು ನನ್ನನ್ನು ಕಂಡು 'ಘನ ವಿದ್ವಾಂಸರೇ! ನಿಮ್ಮ ಪುಸ್ತಕವನ್ನು ಇಂಗ್ಲೀಷಿಗೆ ತರ್ಜುಮೆ ಮಾಡಿ ಅಮೆರಿಕಾದಲ್ಲಿ ಪ್ರಕಟಪಡಿಸುತ್ತೇನೆ. ನನ್ನ ಜತೆಯಲ್ಲಿ ಅಮೆರಿಕಾಕ್ಕೆ ಬನ್ನಿ, ತರ್ಜುಮೆ ಮಾಡಲು ನೆರವಾಗಿ ರಾಜಾತಿಥ್ಯವನ್ನು ನಿಮಗೆ ನೀಡುತ್ತೇನೆ. ಒಂದು ಲಕ್ಷ ಡಾಲರನ್ನು ಗೌರವ ಧನವನ್ನಾಗಿ ಕೊಡುತ್ತೇನೆ. ನನ್ನ ತಂದೆಯ ಹೆಸರನ್ನು ನೀವು ಕೇಳದೇ ಇರಬಹುದು. ರಾಕ್‌ಫೆಲ್ಲರಿನ ಮೊಮ್ಮಗ ಆತ. ನಾನೊಬ್ಬಳೇ ಮಗಳು' ಎಂದನ್ನುತ್ತಾಳೆ. 'ಇಷ್ಟು ವಿಶ್ವಾಸದಿಂದ ಕರೆಯುತ್ತಾ ಇದಿ, ಆದರೆ ಹಣ್ಣು ಹಣ್ಣು ಮುದುಕ ನಾನು, ಅಮೆರಿಕಾದ ಆತಿಥ್ಯವನ್ನು ಸವಿಯುವ ಆಯಸ್ಸು ಮಿಂಚಿ ಹೋಗಿದೆಯಲ್ಲೇ! ಆದರೂ ನೀನೂ ಬಾ ಅಂತ ಬಾಯಿ ಬಿಟ್ಟರೆ, ನನ್ನ ಬಾಯಲ್ಲೂ ಜೊಲ್ಲು ಸುರಿಯುತ್ತೆ. ಇಲ್ಲಿ ಒಂದಿಷ್ಟು ಚಿಲ್ಲರೆ ಸಾಲಗಳಿವೆ. ಮುಂಗಡವಾಗಿ ಸ್ವಲ್ಪ ಹಣ ಕೊಟ್ಟರೆ, ಒಂದಿಷ್ಟು ಅಗತ್ಯವಾದ ಬಟ್ಟೆಗಳನ್ನು ಹೊಲಿಸಿಕೊಳ್ಳುತ್ತೀನಿ. ಮತ್ತು ಸಾಲಗಳನ್ನು ತೀರಿಸುತ್ತೀನಿ. ನಂತರ ನಿನ್ನೊಡನೆ ಎಲ್ಲಿಗಂದರೆ ಅಲ್ಲಿಗೆ ಬತ್ತೀನಿ' ಎನ್ನುತ್ತೇನೆ. ಅವಳು ತತ್‌ಕ್ಷಣ, ಐವತ್ತುಸಾವಿರ ಡಾಲರುಗಳ ಚೆಕ್ಕನ್ನು ಬರೆದು ಕೊಡುತ್ತಾಳೆ. 'ಇನ್ನೆಂಟು ದಿನಗಳಲ್ಲಿ ನಿಮ್ಮ ಪ್ರವಾಸ ಪತ್ರಗಳನ್ನು ಅಣಿ ಮಾಡಿಸುತ್ತೇನೆ.ನಂತರ ಹೊರಡೋಣ' ಎನ್ನುತ್ತಾಳೆ. ಆಮೇಲೆ ಕೇಳಬೇಕೆ? ಅಮೆರಿಕಾದಲ್ಲಿ ಪ್ರಕಟಣೆ ಸ್ಟಾಕ್ ಹೊಂನಲ್ಲಿ ನೊಬೆಲ್ ಪಾರಿತೋಷಕ ಅಂದಮೇಲೆ ದಿಳ್ಳಿಯಲ್ಲಿ ಹಿಂತಿರುಗುವಾಗ ಎಂತದಾದರೂ ಒಂದು 'ಪದ್ಮ' ಬೆಂಗಳೂರಿಗೆ ಬಂದ ಮೇಲೆ,ನಮ್ಮ ಕೇರಿಯ ಕನ್ನಡಿಗರು, ಅದು ಯಾವುದೋ ನಿಮ್ಮ ಪುಸ್ತಕಕ್ಕೆ ಯಾರೋ ಕೊಳ್ಳೆ ಹಣ ಕೊಟ್ಟರಂತೆ. ಆದ್ದರಿಂದ ನಿಮ್ಮನ್ನು ನಾವೂ ಸನ್ಮಾನಿಸುತ್ತೇವೆ, ಎನ್ನುತ್ತಾರೆ.