ಮನಮಂಥನ
ನನ್ನ ತೃಪ್ತಿಗಾಗಿ ಮಾಡಿಕೊಳ್ಳುವ ಚಟುವಟಿಕೆಗಳು.
ಆದರೆ ಈ ಪುಸ್ತಕವನ್ನು ಬರೆಯಬೇಕು ಎನ್ನುವ ತೆವಲು ಏಕೆ ಹಿಡಿಯಿತು? ಎಚ್ಚರವಾಗಿರುವ ಹೊತ್ತಿನಲ್ಲೆಲ್ಲಾ ನನ್ನ ಕಸುಬನ್ನು ಮಾಡುವಷ್ಟು ಕೆಲಸವಿದೆ. ಸ್ವಲ್ಪ ಹೊತ್ತು ವಿರಾಮವು ದೊರಕಿದರೆ ಮನಸ್ಸಿಗೆ ತ್ರಾಸು ಕೊಡದೆ ಓದಬಹುದಾದ ಅಸಂಖ್ಯಾತ ಪುಸ್ತಕಗಳಿವೆ. ಸುಖವಾಗಿ ಹೀಗೆ ಇರುವುದರ ಬದಲು, ಈ ಪುಸ್ತಕವನ್ನು ಬರೆಯಲು ಏನೆಲ್ಲಾ ಕಷ್ಟ ಪಡಬೇಕು? ಏಕೆ ಕಷ್ಟ ಪಡುತ್ತಿದ್ದೇನೆ? ವಿಶ್ಲೇಷಣೆಯನ್ನು ಮಾಡಿದೆ.
ಮನಸ್ಸನ್ನು ತಾವೇ ಗೋಜು ಮಾಡಿಕೊಂಡು ವಿನಾಕಾರಣ ನರಳುವ ರೋಗಿಗಳನ್ನು ಕಂಡಾಗ ತುಂಬಾ ಮರುಕವುಂಟಾಗುತ್ತಿತ್ತು. ಮನಸ್ಸು ಗೋಜು ಮಾಡಿಕೊಂಡು ತಳಮಳ ಪಡಲು ಆರಂಭಿಸಿದಾಗ, ಕೂಡಲೇ ವೈದ್ಯರಲ್ಲಿಗೆ ಹೋಗಿದ್ದರೆ, ಅವನ ಸಲಹೆಯನ್ನು ಪಡೆದು, ಚಿಕಿತ್ಸೆಯನ್ನು ಮಾಡಿಕೊಂಡು, ಬಹಳ ಸುಲಭವಾಗಿ ಗೋಜನ್ನು ಬಿಡಿಸಿಕೊಳ್ಳಬಹುದಾಗಿತ್ತು. ಮನಸ್ಸು ತಳಮಳಗೊಳ್ಳುತ್ತಿದೆ ಎಂದು ಇತರರಲ್ಲಿ ಹೇಳಿಕೊಳ್ಳಲು, ನಮ್ಮ ಸಮಾಜದಲ್ಲಿ ತುಂಬಾ ವಾಮಾನಿಕೆ, ಆದಕಾರಣ ತಳಮಳವನ್ನು ಅನುಭವಿಸುತ್ತಾ ಮನಸ್ಸಿನ ಗೋಜನ್ನು ವಿಪರೀತವನ್ನಾಗಿ ಮಾಡಿಕೊಳ್ಳುವ ರೋಗಿಗಳನ್ನು ಕಂಡು ಅನುಕಂಪ. ಇವರುಗಳಿಗೆ ಮನಸ್ಸು ಹೇಗೆ ಗೋಜಾಗುತ್ತೆ ಎಂಬುದನ್ನು ತಿಳಿಸಬೇಕು. ಮನೆಮನೆಯಲ್ಲಿಯೂ ಈ ರೀತಿ ತಳಮಳವನ್ನು ಅನುಭವಿಸುವವರು ಬಹಳಷ್ಟು ಮಂದಿ ಇದ್ದಾರೆ ; ಹೊರ ನೋಟಕ್ಕೆ ನೆಮ್ಮದಿಯಿಂದ ಇದ್ದಂತೆಯೇ ಕಾಣಿಸುತ್ತದೆ. ಆದರೂ ಅವರುಗಳು ನನ್ನಂತೆಯೇ ಒಳ ಒಳಗೇ ನರಳುತ್ತಿದ್ದಾರೆ ; ಈ ವಿಷಯವು ತಿಳಿದರೆ, ಆಗ ರೋಗಿಗಳ ಮನಸ್ಸಿನಲ್ಲಿ ನನ್ನೊಬ್ಬನಿಗೇ ಈ ಬೇನೆ ಬಂದಿದೆ, ನನ್ನ ದುರದೃಷ್ಟ ; ಎನ್ನುವ ಕೀಳು ಮನೋಭಾವವು ಕಡಿಮೆಯಾಗುತ್ತದೆ. Group Therapy ಎನ್ನುವ ಚಿಕಿತ್ಸಾ ಕ್ರಮವು ಮನೋವೈದ್ಯರುಗಳಿಂದ ಆಚರಿಸಲ್ಪಡುವುದು, ಈ ಕಾರಣದಿಂದಲೇ. ಅನುಕಂಪದಿಂದ ಪ್ರೇರಿತವಾದಾಗ, ನನಗೆ ಮತ್ತು ನನ್ನ ಬಾಳಿಗೆ ಅತ್ಯಗತ್ಯವಲ್ಲದಿದ್ದರೂ, ಮನಸ್ಸು ಈ ತೆವಲನ್ನು ಹಚ್ಚಿಕೊಂಡಿತು.
ಹಾಗೂ ಮನೋವಿಜ್ಞಾನದಲ್ಲಿ ಈ ಐದಾರು ದಶಕಗಳಲ್ಲಿ ನಡೆದಿರುವ ಪ್ರಗತಿಯು ಅಮೋಘವಾಗಿದೆ. ಇದನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲವು ಕೆರಳಿದೆ. ತೆಪ್ಪನಿರಲು ಬಿಡುವುದಿಲ್ಲ. ಅಲ್ಲದೆ ನಮ್ಮ ನಾಡಿನ ಪುರಾತನ ಮನನಿಗರು ಮನಸ್ಸನ್ನು ಅರಿಯತೊಡಗಿದ್ದರು. ಅದೊಂದೇ ಜ್ಞಾನವನ್ನು ಪಡೆಯಲು