ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೧೯

ಓಡಾಡುವುದು ಚೆನ್ನಲ್ಲ. ಆದಷ್ಟು ಬೇಗ ಅನುಕೂಲವಾದ ಗಂಡನ್ನು ಹಿಡಿದು ಮದುವೆ ಮಾಡಿಬಿಟ್ಟರೆ, ನಮ್ಮ ಹೊಣೆ ತೀರಿತು' ಎಂದು ತಾಯಿ ಖಡಾಖಂಡಿತವಾಗಿ ನುಡಿದಿದ್ದಳು. ಆಡಿದ ಮಾತುಗಳಿಗಿಂತ, ತೋರಿದ ಧೋರಣೆಯು, ಮಗಳನ್ನು ರೇಗಿಸಿತ್ತು. ಅಮ್ಮನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದೋ ಏನೋ ಆಕೆ B.Ed., ಗೆ ಸೇರಿದ್ದಳು. ಆ ಪರೀಕ್ಷೆಗೆ ಕೂರಬೇಕು ಎಂದು ಆಸಕ್ತಿಯೇನೂ ಇರಲಿಲ್ಲ. ಎಳೆಯ ಮಕ್ಕಳನ್ನು ಕೂರಿಸಿಕೊಂಡು, ಅವಕ್ಕೆ ಕಲಿಸಬೇಕು ಎನ್ನುವ ಹಂಬಲವನಕ ಸುತರಾಂ ಇರಲಿಲ್ಲ. ಆದರೂ ಹತ್ತಿರವೇ B.Ed., ಕಾಲೇಜಿದೆ ಎಂದು ಸೇರಿದ್ದಳು. ಅದನ್ನೂ ಪ್ಯಾಸು ಮಾಡಾಗಿತ್ತು.

ಈ ಮಧ್ಯೆ ಮದುವೆಯ ಸನ್ನಾಹಗಳೂ ನಡೆಯುತ್ತಲೇ ಇದ್ದವು. ನೋಡಲು ಬಂದಿದ್ದ ಗಂಡುಗಳಲ್ಲಿ ಹಲವು ಆಕೆಯನ್ನು ಮೆಚ್ಚಿರಲಿಲ್ಲ. ಕೆಲವನ್ನು ಇವಳು ಒಪ್ಪಲಿಲ್ಲ. ಹಾಗಾಗಿ ಮದುವೆಯು ನಿಷ್ಕರ್ಷೆಯಾಗಿರಲಿಲ್ಲ. ಅನ್ಯ ಮಾರ್ಗವಿಲ್ಲದೆ, ಖಾಸಗಿ ಶಾಲೆಯೊಂದರಲ್ಲಿ ಮಾಸ್ತರಿಣಿಯಾಗಿ ಕೆಲಸಕ್ಕೆ ಸೇರಿಕೊಂಡಳು. ಮನೆಯ ಹತ್ತಿರವೇ ಶಾಲೆ ಇದ್ದುದರಿಂದ, ಅಮ್ಮನೂ ಅಡ್ಡಿ ಬರಲಿಲ್ಲ. ಹೆಚ್ಚು ಆಸಕ್ತಿಯು ಮೊದಮೊದಲು ಇರದಿದ್ದರೂ, ಕ್ರಮೇಣ ಚಿಕ್ಕ ಮಕ್ಕಳಿಗೆ ಪಾಠ ಕಲಿಸುವುದರಲ್ಲಿ ಉತ್ಸಾಹವು ಮೂಡಲಾರಂಭಿಸಿತು. ಒಂದೆರಡು ವರ್ಷ ಸುಖವಾಗಿಯೇ ಇದ್ದಳು. ಆದರೆ ಕಳೆದ ಐದಾರು ತಿಂಗಳುಗಳಿಂದ ಉಸಿರಾಟದ ಈ ಕಾಟವು ಪ್ರಾರಂಭವಾಗಿತ್ತು. ದಿನದಿನಕ್ಕೂ ಇದರ ಅವಾಂತರವು ಹೆಚ್ಚಾಗುತ್ತಿತ್ತು.

ಈ ವಿಚಾರಗಳನ್ನೆಲ್ಲ ಆಕೆಯು ಲಕ್ಷಣವಾಗಿ ಸಮಂಜಸವಾಗಿ ಹೇಳಿದಳು. ನಂತರ ಕೇಳಿದಳು :- 'ಏನಾದರೂ ಆತ್ಮ ಬಂದುಬಿಟ್ಟಿದೆಯೇ, ಡಾಕ್ಟರೆ ! ನಮ್ಮ ಸೋದರತ್ತೆಗೆ ಆಸ್ಮಾ ತುಂಬ ಕಠಿಣವಾಗಿತ್ತು. ಅವಳ ಹಾಗೆಯೇ ನನಗೂ ಆತ್ಮ ಬಂದೂ ಬಂದೂ ಗೂನು ಬೆನ್ನಾಗಿ ಬಿಡುತ್ತೋ ?' ಎಂದು.

ಉಮಾಕುಮಾರಿಯ ದೇಹಾರೋಗ್ಯದಲ್ಲಿ ಯಾವ ಲೋಪ ದೋಷಗಳೂ ಕಾಣಬರಲಿಲ್ಲ. ಅಂದರೆ ಆಕೆಯ ಕಾತರಕ್ಕೆ ಮಾನಸಿಕ ಕಾರಣಗಳೇ ಮೂಲವಾಗಿರಬೇಕು. ಬೆಳೆದ ಹೆಣ್ಣಿಗೆ ಸಕಾಲದಲ್ಲಿ ಜತೆ ಸಿಗದೆ ಇದ್ದರೆ, ದಿನಗಳು ಕಳೆದಂತೆಲ್ಲ, ಒಪ್ಪು ಜೋಡಿಯು ದೊರಕುವುದು ಹೆಚ್ಚು ಕಷ್ಟವಾಗುತ್ತದೆ. ಆದರೆ ಸಿಕ್ಕಿತು ಅಂತ ಯಾವುದನ್ನಾದರೂ ಕಟ್ಟಿಕೊಳ್ಳುವುದಕ್ಕೆ ಆಗುತ್ತದೆಯೆ? ಓದಿದ ಹುಡುಗಿ, ಷಹರಿನ ಸುಸಂಸ್ಕೃತ ತರುಣಿ, ಯಃಕಶ್ಚಿತ್ ಗಂಡನೊಂದಿಗೆ ಸಿನಿಮಾಕ್ಕೆ ಎಲ್ಲರೆದುರಿಗೂ ಹೋಗಲು ಸಾಧ್ಯವೇ? ಹಾಗೆ ಮಾಡಿದರೆ ಅವಮಾನವಾಗುವುದಿಲ್ಲವೇ? ಈ ರೀತಿಯ ಆತಂಕವು ಆ ವಯಸ್ಸಿನ