ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮನಸ್ಸಿನ ಚಟುವಟಿಕೆಗಳು

೩೬೩

ಮನಸ್ಸಿನಲ್ಲಿ ನೆಮ್ಮದಿಯು ಸುಲಭ ಸಾಧ್ಯ. Ego ವನ್ನು ಕರಗಿಸಬೇಕಾದರೆ, ನಾನು ಮಾಡುತ್ತೇನೆ, ನಾನು ಸಾಧಿಸುತ್ತೇನೆ ಎನ್ನುವ ಮಮಕಾರವು ಹೋಗಿ 'ಅದು' ಮಾಡಿಸುತ್ತದೆ' ; 'ಅದು ಸಾಧಿಸುತ್ತದೆ'; 'ಅದಕ್ಕೆ ನಿಮಿತ್ತ ಮಾತ್ರ ನಾನು' ಎನ್ನುವ ಮನೋಭಾವನೆಯು ಭದ್ರವಾಗಬೇಕು. ಆಗ Ego ವಿನ ಹೊಣೆಯೇ ಇಲ್ಲ. ಹೊಣೆಯಲ್ಲವೂ 'ಅದರದು ಅದಕ್ಕೆ ಶರಣಾಗುವುದು, ಪ್ರಪತ್ತಿ ; ಇದರಿಂದ Ego ಕರಗುತ್ತದೆ. ಇದನ್ನು ಮನಸ್ಸಿನಲ್ಲಿ ರೂಢಿಸಿಕೊಳ್ಳಬೇಕಾದರೂ Ego-drive ಪುಷ್ಟಿಯಾಗಿರಬೇಕು.

Super-Ego ಅಥವಾ ಮನಸ್ಸಿನ ಸತ್ವಗುಣ ಪ್ರಧಾನವಾದ ಸತ್ ಚೈತನ್ಯಾಂಶವು ಪ್ರಬಲವಾಗಿದ್ದರೆ, ಅವ ಸಮಾಜದ ದೃಢತೆಗೆ ಬೆಂಬಲವಾಗುತ್ತಾನೆ. ಇಂತಹವರಲ್ಲಿ Ego-drive ಪುಷ್ಟಿಯಾಗಿರುತ್ತದೆ. ಅಂತಹ ಶಕ್ತಿಯು ಮಾನವೀಯತೆಯನ್ನು ಮನಸ್ಸಿನಲ್ಲಿ ತುಂಬುತ್ತದೆ. ನಂತರ ಸಕಾಲದಲ್ಲಿ ಸತ್- ಚೈತನ್ಯಾಂಶವು ಅರಳತೊಡಗಿದಾಗ, ಹರಡತೊಡಗಿದಾಗ ಮಾನವೀಯತೆಯು ದೈವೀಯುತವಾಗುತ್ತದೆ. ಇದಾದಾಗ ತ್ರಿಗುಣಾತೀತನಾಗಲು ಸಾಧನೆಯು ನಡೆಯುತ್ತದೆ. ಈ ಸಾಧನೆಯು ಜಯಗಳಿಸಿದರೆ, ಈ ದೇಹದಲ್ಲಿದ್ದುಕೊಂಡು, ಲೌಕಿಕ ಬಾಳನ್ನು ಎಲ್ಲರಂತೆ ನಡೆಸಬಹುದು. ಆದರೆ ಮನಸ್ಸು ಯಾವುದಕ್ಕೂ ಅಂಟಿಕೊಂಡು ಗಂಟು ಹಾಕಿಕೊಳ್ಳದೆ ನಿರ್ಮಲವಾಗಿರುತ್ತದೆ. ತಳಮಳಗಳಿರುವುದಿಲ್ಲ. ರಾಗ ವಿಕಾರಗಳಿರುವುದಿಲ್ಲ. ಇಂತಹ ಸಾಧನೆಯಲ್ಲಿ ಜಯಗಳಿಸಿದವರನ್ನು ಜೀವನ್ಮುಕ್ತರು ಎಂದು ಕರೆಯುತ್ತಾರೆ. ಸ್ಥಿತಪ್ರಜ್ಞರು ಎಂದೂ ಅನ್ನುತ್ತಾರೆ.