೬. ಆಸೆ-ಮೂಲ ಪ್ರೇರಕ
Ego ವಿನ ಸ್ಥಿತಿಯನ್ನು ಅಕ್ಕಿಯಮೇಲೆ ಆಸೆ ; ನೆಂಟರ ಮೇಲೆ ಪ್ರೀತಿ' ಎಂಬ ನಾಣ್ಣುಡಿಯು ಲಕ್ಷಣವಾಗಿ ವರ್ಣಿಸುತ್ತದೆ. Id ಇನ ಕಾಮನೆಗಳ ಮೇಲೆ ಆಸೆಯು ಪ್ರಬಲವಾಗಿರುತ್ತದೆ. ಜತೆಜತೆಗೂ ನೆಂಟರ ಮೇಲೆ ಪ್ರೀತಿಯೂ ಇರುತ್ತದೆ. ನಾನು ಸುಖವನ್ನು ಅನುಭವಿಸುವಾಗ ಅವರೂ ಪಾಲ್ಗೊಳ್ಳಲಿ ಎಂಬ ಆಸೆಯೂ ಇರುತ್ತದೆ. ಆದರೆ ಈ ಡೋಲಾಯಮಾನ ಸ್ಥಿತಿಯಲ್ಲಿ ಮನಸ್ಸು ತನ್ನ ಸುಖಕ್ಕೆ, ತನ್ನ ಹಕ್ಕಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಸ್ವಾಭಾವಿಕವಾಗಿ ನೀಡುತ್ತದೆ.
ತನ್ನ ಸುಖ ಎಂದರೇನು? ಹಸಿವು ಬಾಯಾರಿಕೆಗಳನ್ನು ತನ್ನ ಮನಸ್ಸಿಗೆ ತೃಪ್ತಿಯಾಗುವಂತೆ ಯಥಾ-ಇಚ್ಛವಾಗಿ ತೃಪ್ತಿಗೊಳಿಸುವುದು. ಮುಂದೆ ದುಡಿದು ಸಂಪಾದಿಸದೆ ಇದ್ದರೂ, ತನಗೂ, ತನ್ನ ಮಕ್ಕಳಿಗೂ, ಮೊಮ್ಮಕ್ಕಳಿಗೂ ಸಾಕಷ್ಟು ಹಣವು ದೊರೆಯುವಂತೆ, ಇಂದೇ ಅಪಾರ ಹಣವನ್ನು ಶೇಖರಿಸಿಡುವುದು. ಹೆಣ್ಣು ಗಂಡೊಲವು ; ಅಥವಾ ಕಾಮವು ದೇಹ ಮನಸ್ಸಿನ ಒಕ್ಕೂಟದ ಪ್ರಮುಖ ಪ್ರೇರಕಗಳಲ್ಲೊಂದು. ಕಾಮ ತೃಪ್ತಿಗೆ ಚಿತ್ರ ವಿಚಿತ್ರ ಮಾರ್ಗಗಳುಂಟು. ವಿಧವಿಧವಾದ ಸೌಂದರ್ಯ-ಕಲ್ಪನೆಗಳುಂಟು. ಪ್ರತಿಯೊಂದು ವ್ಯಕ್ತಿಗೂ ಒಂದೊಂದು ತರಹ ಅಭೀಷ್ಟ ಮಾನವನ ಕಾಮದ ಚಟುವಟಿಕೆಗಳಲ್ಲಿ ಸಂತಾನೋತ್ಪಾದನೆಯು ಅತ್ಯಲ್ಪ ಅಂಶ ; ಅತ್ಯಂತ ಸಣ್ಣ ಪ್ರಚೋದನೆ.
ಇವುಗಳಿಗೆಲ್ಲಕ್ಕಿಂತಲೂ ಸಮಾಜದಲ್ಲಿ ಗಣ್ಯನಾಗಬೇಕು, ; ಮನ್ನಣೆಯನ್ನು ಗಳಿಸಬೇಕು, ಎನ್ನುವ ಹಿರಿ ಹಂಬಲವು, ಅತ್ಯಾಸೆಯು, Ego-drive ಇದ್ದವರಲ್ಲಿ ಅತಿಯಾಗಿರುತ್ತದೆ. ಮನ್ನಣೆಯನ್ನು ಗಳಿಸಲೋಸುಗ ಸುಂದರ ಹೆಂಡತಿಯನ್ನು ಹಂಚಿಕೊಂಡವರೂ ಇದ್ದಾರೆ. ಅಂದರೆ ಮನ್ನಣೆಯ ತೀಕ್ಷಣತೆಯು ಎಷ್ಟು ಹರಿತ, ಎಷ್ಟು ಪ್ರಬಲ, ಎನ್ನುವುದು ಸ್ಪಷ್ಟವಾಗುತ್ತದೆ.
ಭಗವಾನ್ ಬುದ್ಧನು ಜೀವನ ಚಕ್ರದೊಂದಿಗೆ ಆಸೆಯೂ ಹುಟ್ಟುತ್ತದೆ ಎಂದನು. ಮನೋವೈಜ್ಞಾನಿಕರಿಗೆ, ಬಹಳ ಗಂಭೀರವಾದ, ಅರ್ಥಗರ್ಭಿತವಾದ ವ್ಯಾಕ್ಯವಿದು.