ಜೋಫ್ರೆನಿಯಾದ ಅವತಾರಗಳಾಗುತ್ತವೆ.
Ego-drive ಇದ್ದವರಲ್ಲಿ, ಆಸೆಯು ಅಪರಿಮಿತವಾಗಿದ್ದು, ವಾಸ್ತವಿಕ ಅರಿವು ಸಾಕಷ್ಟು ವಿಶಾಲವಾಗಿರದಿದ್ದರೆ, ಅಂದರೆ ಮನಸ್ಸಿನ ಬೆಳವಣಿಗೆಯು ಬಾಲ್ಯಾವಸ್ಥೆಯಲ್ಲಿದ್ದರೆ, ಅಂತಹವರ ಮನಸ್ಸು ಆಘಾತಗಳಿಗೆ ಸಿಕ್ಕಿದಾಗ ಛಿದ್ರವಾಗಬಹುದು. ಹೀಗಂದ ಮಾತ್ರಕ್ಕೆ ಅವರ ವಿಚಾರಪರ ಮನಸ್ಸು ಮಿಕ್ಕಮಿಕ್ಕ ವಿಷಯಗಳಲ್ಲಿ ಮಂದವಾಗಿರುತ್ತದೆ ಎಂದೇನೂ ಅಲ್ಲ. ಎಷ್ಟೋ ಬಾರಿ, ಬಲು ಚುರುಕಾಗಿ ಕೆಲಸ ಮಾಡುತ್ತದೆ. ಮತ್ತೆ ಕೆಲವು ಕಾಲ ಏರುಪೇರಾಗಿರುತ್ತದೆ ; ಇವನ್ನು Lucid intervals ಎಂದು ಕರೆಯುತ್ತಾರೆ. ಪಲ್ಲಟವಾಗಿದ್ದ ಮನಸ್ಸು, ತನ್ನಂ ತಾನಾಗಿಯೇ ಸರಿಮಾಡಿಕೊಂಡು ಸ್ವಾಸ್ಥ್ಯವನ್ನು ಸ್ವಲ್ಪ ಕಾಲವಾದರೂ ಪಡೆಯುತ್ತದೆ. ಅನಂತರ ಬಾಳಿನಲ್ಲಿ ಆಗಲೇಬೇಕಾದ ಇತರ ಮಾನಸಿಕ ಆಘಾತಗಳಿಂದ, ಏರುಪೇರು ಮರುಕಳಿಸುತ್ತದೆ. ರಕ್ಷಣಾ ವ್ಯವಸ್ಥೆಗಳು ದೇಹವನ್ನು ಬೇನೆಗಳಿಂದ ಪಾರುಮಾಡುವಂತೆ, ಮನಸ್ಸಿನಲ್ಲಿಯೂ ಸ್ವಾಸ್ಥ್ಯವನ್ನು ನೀಡುವ ವ್ಯವಸ್ಥೆಗಳು ಇವೆ ಎಂಬುದು ಸ್ಪಷ್ಟವಾಗಿದೆ. ಅಂತಹ ಸ್ವಯಂ-ಸ್ವಾಸ್ಥ್ಯವನ್ನು ಸಾಧಿಸುವ ಮಾನಸಿಕ ವ್ಯವಸ್ಥೆಗಳು ಯಾವುವು ಎಂಬುದನ್ನು ಪತ್ತೆ ಹಚ್ಚಿದರೆ ಅಂತಹ ವ್ಯವಸ್ಥೆಗಳಿಗೆ ಬೆಂಬಲವನ್ನು ಮನೋವಿಜ್ಞಾನಿಗಳು ನೀಡಲು ಸುಲಭವಾಗುತ್ತದೆ. ಆದರೆ ಅಂತಹ ಮನಸ್ಸಿನ ಸ್ವಯಂ-ರಕ್ಷಣಾ ವ್ಯವಸ್ಥೆಗಳ ವಿವರವಾದ ಅರಿವು ಇನ್ನೂ ಸಿದ್ಧಾಂತವಾಗಿಲ್ಲ. ಆದಕಾರಣ ಮನಸ್ಸಿನ ವಿಷಯದಲ್ಲಿ ಮನನಿಗರು, ಋಷಿಗಳು, ಪ್ರಪಂಚದ ಎಲ್ಲೆಡೆಯಲ್ಲೇ ಇದ್ದಿರಲಿ, ಅವರುಗಳು ನುಡಿದುದನ್ನು ಅಧ್ಯಯನ ಮಾಡುವುದು, ಮನೋ ವಿಜ್ಞಾನಶಾಸ್ತ್ರಕ್ಕೆ ಅಗತ್ಯ ಮತ್ತು ಶ್ರೇಯಸ್ಕರ. ಆದಕಾರಣ ಪತಂಜಲಿಗಳ ಯೋಗ ಸೂತ್ರಗಳನ್ನು ಇಂದಿನ ವಿಜ್ಞಾನಕ್ಕೆ ಅನ್ವಯಿಸಿಕೊಂಡು, ಅವುಗಳಿಂದ ಮುಂದಿನ ಪ್ರಗತಿಯನ್ನು ಸಾಧಿಸಬಹುದು ಎಂಬ ನಂಬಿಕೆಯಿಂದ, ಆ ಅಧ್ಯಾಯವನ್ನು ಸೇರಿಸಿದ್ದೇನೆ, ಈ ಪುಸ್ತಕದಲ್ಲಿ.
ಮುಪ್ಪಿನಲ್ಲಿ ದೇಹವು ಶಿಥಿಲವಾದಂತೆ, Ego-drive ಕೂಡ ದುರ್ಬಲವಾಗುತ್ತದೆ. ಆಗ ಆಸೆಯು ಕಡಿಮೆಯಾಗಲೇಬೇಕು. ಏಕೆಂದರೆ ಆಸೆಯನ್ನು ತೀರಿಸಿಕೊಳ್ಳುವ ಸಾಮರ್ಥ್ಯವು ಇರುವುದಿಲ್ಲ. ಆದರೆ ಪ್ರಾಯದಲ್ಲಿ ತಾನು ಬಯಸಿ ಸಫಲವಾಗದೆ ಇರುವ ಆಸೆಗಳು ಉಳಿದುಕೊಂಡಿರುತ್ತವೆ. ಅವನ್ನು ವಯಸ್ಸಿಗೆ ಬಂದ ಮಕ್ಕಳ ಜೀವನದಲ್ಲಿ ಈಡೇರಿಸ ಬಯಸುತ್ತಾನೆ. 'ಹೀಗೆ ಓದಿ, ಹೀಗೆ ಮಾಡಿ, ಇಂತಹ ಫಲವು ದೊರೆಯುತ್ತೆ' ಎಂದು ಮಕ್ಕಳನ್ನು ಒತ್ತಾಯ ಪಡಿಸುತ್ತಾನೆ.