ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೬೮
ಮನಮಂಥನ

ಹಿರಿಯರ ಮತ್ತು ಗೆಳೆಯರ ನೆರವನ್ನು ಪಡೆದು ಆಕೆಯ ಹಿರಿಯರ ಒಪ್ಪಿಗೆಯನ್ನು ಗಿಟ್ಟಿಸಿ ಆಕೆಯನ್ನು ಒಲಿಸಿಕೊಂಡು ವಿಧಿವತ್ತಾಗಿ ಮದುವೆಯಾಗಬಹುದು. ವಾಸ್ತವಿಕವಾಗಿ ಆಸೆಯು ಈಡೇರುವ ನೇರ ಮಾರ್ಗವಿದು.

೨. ಚಿತ್ರದ ಮೂಲ ವ್ಯಕ್ತಿಯು ಸಿನಿಮಾತಾರೆ. ಐದು ಅಂಕಿಗಳ ಲೆಕ್ಕದಲ್ಲಿ ಸಂಪಾದಿಸುವ ಪಾಂಚಾಲಿ ಆಕೆ. ಇದು ತಿಳಿದಾಗ ಆಕೆಯನ್ನು ಮದುವೆಯಾಗುವುದು ಹಾಗಿರಲಿ, ಹತ್ತು ಮಾರು ದೂರದಲ್ಲಿ ಪ್ರತ್ಯಕ್ಷವಾಗಿ ನೋಡುವ ಅವಕಾಶವೂ ಇರುವುದಿಲ್ಲ ಎಂಬ ವಾಸ್ತವಿಕತೆಯನ್ನು ತರುಣನು ಮನಗಾಣುತ್ತಾನೆ. ಆದರೆ ಆಸೆಯು ಹೆಡೆಯಾಡಿಸುತ್ತಲೇ ಇರುತ್ತದೆ. ಇಂತಹವರು ಸಿನಿಮಾ ತಾರೆಯನ್ನು ಲಪಟಾಯಿಸಿಕೊಂಡು ಹೋಗಿ ಅದ್ದೂರಿಯ ವಿವಾಹ ಜೀವನವನ್ನು ಮಾಡಿದಂತೆ, ಕನಸು ಕಾಣಬಹುದು. ಅತ್ಯುಗ್ರವಾದ ಆಸೆಗಳು ವಾಸ್ತವಿಕವಾಗಿ ಸಾಧ್ಯವಿರದಿದ್ದಾಗ, ಕನಸಿನಲ್ಲಿ ಈಡೇರಬಹುದು. 'ಅಷ್ಟು ಕಂಡರಾ! ಕೃಷ್ಣಂ ಭಟ್ಟರಾ!' ಎಂಬ ಗಾದೆಯಂತೆ ಇವರು ಸ್ವಲ್ಪಮಟ್ಟಿಗೆ ಆಸೆಯನ್ನು ಪೂರೈಸಿಕೊಳ್ಳಬಹುದು.

೩. ಚಿತ್ರದ ಮೂಲ ವ್ಯಕ್ತಿಯು ಸಿನಿಮಾ ತಾರೆಯಾದರೂ ಹಂಬಲಿಸುವ ತರುಣನು ವಿಶ್ವವಿಖ್ಯಾತ ಸಂಗೀತಗಾರನೋ, ಕ್ರೀಡಾಪಟುವೊ ಆಗಿದ್ದರೆ, ಅಥವಾ ಕೊಬ್ಬಿದ ಶ್ರೀಮಂತನಾಗಿದ್ದರೆ, ಆಗ ಆಕೆಯ ಪರಿಚಯವನ್ನು ಆಕೆಯ ಗೆಳೆಯರ ಮೂಲಕ ಮಾಡಿಕೊಳ್ಳಬಹುದು. ಬುಟ್ಟಿಗೆ ಹಾಕಿಕೊಳ್ಳಲೋಸುಗ, ಉಡುಗೊರೆಗಳನ್ನು ಕೊಟ್ಟು ಒಡವೆ ವಸ್ತುಗಳನ್ನು ಇತ್ತು ಸಂತೋಷ ಕೂಟಗಳನ್ನು ಏರ್ಪಡಿಸಬಹುದು. ಇನ್ನೇನು ಮೀನು ಬುಟ್ಟಿಗೆ ಬಿತ್ತು ಎಂದು ತರುಣ ಶ್ರೀಮಂತನು ಅಂದು ಕೊಳ್ಳಬಹುದು. ಪತ್ರಿಕೆಗಳಲ್ಲಿ ಮದುವೆಯ ಸುದ್ದಿಯು ಪ್ರಕಟವಾಗಬಹುದು. ಆದರೆ ಕೊನೆಗಳಿಗೆಯಲ್ಲಿ, ಯಾವುದಾದರೂ ಒಂದು ಕಾರಣದಿಂದ ಮದುವೆಯ ಮಾತು ತುಂಡು ಮುರಿದು ಬೀಳುವ ತನಕ. ಮದುವೆಯ ನಿರೀಕ್ಷೆಯು ತರುಣನಿಗೆ ತೃಪ್ತಿಯನ್ನು ನೀಡಿರುತ್ತದೆ. ಅವನ ಆಸೆಯನ್ನು ಒಂದು ಹಂತದ ಮುಟ್ಟಿಗೆ ಪೂರೈಸಿರುತ್ತದೆ. ಆಸೆಯ ಈಡೇರಿಕೆಗೆ ಪ್ರಯತ್ನ ಪಡುವುದೂ ಒಂದು ಮಾರ್ಗ.

೪. ಅಥವಾ ಆಕೆಯ ಚಿತ್ರಗಳನ್ನು ಪುನಃ ಪುನಃ ನೋಡುತ್ತಾ ; ಆಕೆಯ ಬಂಗಲೆಯ ಹೊರಗಿನ ಕಸದ ತೊಟ್ಟಿಯಲ್ಲಿ ಬೆಳಿಗ್ಗೆ ಬಿದ್ದಿರುವ ಬಾಡಿದ ಹೂಗಳನ್ನು ನಿರ್ಮಾಲ್ಯ ಎಂದು ಶೇಖರಿಸಿಟ್ಟುಕೊಳ್ಳಬಹುದು. ಪತ್ರಿಕೆಗಳಲ್ಲಿ ಪ್ರಕಟವಾಗುವ ಆಕೆಯ ಚಿತ್ರಗಳನ್ನು ಮತ್ತು ಸುದ್ದಿಗಳನ್ನು ಓದುತ್ತಾ, ನೋಡುತ್ತಾ ಖುಷಿಯನ್ನು ಪಡೆಯಬಹುದು. ವಯೂರಿಸಂ (Voyeurism) ಇನ ಹಲವಾರು ರೂಪಗಳಲ್ಲಿ