ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮನಮಂಥನ

೭. ಆಸೆಯು ನಿರಾಸೆಯಾದರೆ

'ಈ ಬಾರಿ ಪ್ರಮೋಷನ್ ಖಂಡಿತವಾಗಿ ಸಿಗುತ್ತೆ' ಎಂದು ನರಸಪ್ಪ ನಂಬಿದ್ದ. ಅಪ್ಪರ್ ಡಿವಿಜನ್ ಕ್ಲಾರ್ಕ್ ಅವ. ಸೂಪರಿಂಟೆಂಡೆಂಟ್ ಆಗಬೇಕಾಗಿತ್ತು; ಮೂರು ವರ್ಷಗಳ ಹಿಂದೆ. ಆದರೆ ಜಾತ್ಯಾತೀತ ರಾಷ್ಟ್ರದಲ್ಲಿ ನೌಕರಿ ಮಾಡುತ್ತಿದ್ದ ಕಾರಣ, ಮೂರು ಅವಕಾಶಗಳು ಇತರರಿಗೆ ದಕ್ಕಿತ್ತು. ಈ ಸರ್ತಿ ಅಂಥಹ ಸ್ಪರ್ಧೆಯಿಲ್ಲ ಎಂದು ನಂಬಿದ್ದ. ಆಗಿನ ಕಾಲದ ಕೇವಲ ಮೆಟ್ರಿಕ್ಯುಲೇಷನ್ ಮಾಡಿದ್ದ ನರಸಪ್ಪನಿಗೆ, ವಿಶ್ರಾಂತಿ ವೇತನವನ್ನು ಪಡೆಯುವ ಹೊತ್ತಿಗೆ ಸೂಪರಿಂಟೆಂಡೆಂಟ್ ಆಗಬೇಕು ಎಂಬ ಅತಿ ದೊಡ್ಡ ಆಸೆಯಿತ್ತು. ಅಗತ್ಯವಾದ ಇಲಾಖಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪ್ಯಾಸು ಮಾಡಿದ್ದ. ಆದಕಾರಣ ಈ ಬಾರಿ ಸತ್ಯನಾರಾಯಣನ ಪೂಜೆಗೆ ಅಣಿಯನ್ನೂ ಮಾಡಿಕೊಳ್ಳುತ್ತಿದ್ದ ; ಪ್ರಮೋಷನ್ ಆರ್ಡರ್ ಬಂದ ಮೇಲೆ ಅದ್ದೂರಿಯಿಂದ ಆಚರಿಸಬೇಕೆಂದು.

ಆಸೆಯು ನಿರಾಸೆಯಾಯಿತು. ಸುಳ್ಳು ವಯಸ್ಸನ್ನು ಕೊಟ್ಟು ಸೇರಿಕೊಂಡಿದ್ದ ಹಳೆಯ ಸೂಪರಿಂಟೆಂಡನಿಗೆ ಇನ್ನೊಂದು ವರ್ಷ ಎಕ್ಸ್‌ಟೆನ್ನನ್ ದೊರಕಿತು. ನರಸಪ್ಪ ಸತ್ತ ನಾರಾಯಣನ ಪೂಜೆಗೆ ಸಿದ್ಧವಾಗಬೇಕಾಯಿತು. ಹೀಗೇಕೆ ಆಯಿತು ಎಂದು ತಿಳಿದುಕೊಳ್ಳಲು, ಅವ, ಜಾತಕವನ್ನು ಹಿಡಿದುಕೊಂಡು ಜ್ಯೋತಿಷ್ಯನ ಬಳಿಗೆ ಹೋದ. ಜಾತಕವನ್ನು ಪರಿಶೀಲಿಸಿದ ಮೇಲೆ, ಜ್ಯೋತಿಷಿಯು ನುಡಿದ -ರಾಯರೇ ! 'ಏಳರಾಟದ ಶನಿಕಾಟ ನಿಮಗೆ ಕೈಗೆ ಬಂದ ತುತ್ತು ಬಾಯಿಗೆ ಸಿಗುವುದಿಲ್ಲ. ಗ್ರಹಗತಿಗಳು ಕ್ರೂರವಾದರೆ, ಮನುಷ್ಯನು ಎಷ್ಟು ಲಾಗ ಹಾಕಿದರೂ ಪ್ರಯೋಜನವಾಗುವುದಿಲ್ಲ. ನವಗ್ರಹ ಪೂಜೆಯನ್ನು ಮಾಡಿಸಿ.' ಎಂದು.

ಇದನ್ನು ಕೇಳಿದ ಮೇಲೆ ನರಸಪ್ಪನ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಆ ಮೊದಲು ತುಂಬಾ ನಿರಾಸೆಯಾಗಿ, ಕುಗ್ಗಿಹೋಗಿದ್ದ. ಮನಸ್ಸು ಬಹಳ ಬೇಸರಗೊಂಡು, ಯಾವುದರಲ್ಲಿಯೂ ಉತ್ಸಾಹವು ಇರಲಿಲ್ಲ.'ನನ್ನ ಪ್ರಯತ್ನವನ್ನು ಕಾಯಾ ವಾಚಾ ಮನಸಾ ಮಾಡಿದ್ದಾಯಿತು. ಗ್ರಹಗಳು ಕ್ರೂರವಾದರೆ ಕೇವಲ ನರ ಮನುಷ್ಯ ಏನನ್ನು ತಾನೆ ಮಾಡಬಲ್ಲ ?' ಎಂದು ಈಗ ಸಮಾಧಾನವನ್ನು ಮಾಡಿಕೊಂಡಿದ್ದ. ಉತ್ಸಾಹವು ಅಷ್ಟಾಗಿ ಇರದಿದ್ದರೂ ಸಂತೆ ಹೊತ್ತಿಗೆ ಮೂರು ಮೊಳ ನೇಯುತ್ತಿದ್ದ.