ಸರಿಹೋಗುವುದಿಲ್ಲ ಎಂದು ಖಂಡಿತವಾದರೆ ತೀವ್ರವಾದ ಶೋಕ, ಅಥವಾ ಕೊರೆವ ಕೊರಗು ಉಂಟಾಗಬಹುದು. ಮಗನೊಬ್ಬನ ಹೊರತು, ಇತರ ಯಾವ ಆಸರೆಯೂ ಇಲ್ಲದ ವಿಧವೆಗೆ, ಮಗ ಅಪಘಾತಕ್ಕೀಡಾಗಿ ಅಕಸ್ಮಾತ್ ಸತ್ತರೆ, ಕೊರಗು ಕೊರೆಯುತ್ತದೆ. ಬದುಕುವ ಆಸೆಯು ನಿರ್ಮೂಲವಾಗುತ್ತದೆ. ಯಾವುದರಲ್ಲೂ ಉತ್ಸಾಹವಿರುವುದಿಲ್ಲ.
'Grief Syndrome' ಅಥವಾ ವಿಪರೀತ ಕೊರಗಿನ ವಿಚಿತ್ರ ಹಾವಳಿ, ಎಂಬ ವಿಷಯವನ್ನು ಪ್ರತ್ಯೇಕವಾಗಿ ಮನೋವಿಜ್ಞಾನಿಗಳು ಅಭ್ಯಾಸಮಾಡುತ್ತಾರೆ. ಅಷ್ಟು ಪ್ರಾಮುಖ್ಯವಾದ ವಿಷಯವಿದು. ಕೊರಗು ಹತ್ತಿದಾಗ ಬಿಕ್ಕಿ ಬಿಕ್ಕಿ ಅತ್ತರೆ ಮನಸ್ಸು ಸ್ವಲ್ಪ ಹಗೂರಾಗುತ್ತದೆ. ಉಕ್ಕಿ ಬಂದ ಅಳುವನ್ನು ಸೊಕ್ಕಿದ Ego ಅದುಮಿ ತಡೆದಿಟ್ಟರೆ, ಮುಂದೆ ಈ ಕಾರಣದಿಂದ ಮಾನಸಿಕ ಸ್ವಾಸ್ಥ್ಯವು ಕೆಟ್ಟು, ನಡವಳಿಕೆಯು ವಿಪರೀತವಾಗಬಹುದು. ಮನೆಯಲ್ಲಿ ಯಾರಾದರೂ ಸತ್ತರೆ, ಆಳುವನ್ನೇ ಕಸಬು ಮಾಡಿಕೊಂಡಿರುವವರನ್ನು ದುಡ್ಡು ಕೊಟ್ಟು ಕರೆಸಿ, ಮನೆಯಲ್ಲಿ ಗೊಳೋ ಎಂದು ಅಳಿಸುತ್ತಾರೆ, ಕೆಲವು ಪಂಗಡದವರು. ವೈಜ್ಞಾನಿಕವಾಗಿ ಈ ಪದ್ಧತಿಯು ಒಳ್ಳೆಯದು. ಹತ್ತೂ ಜನರು ಕುಟ್ಟಿಕೊಂಡು ಸುತ್ತಲೂ ಅತ್ತರೆ, ಸತ್ತವನೇನೂ ಹಿಂತಿರುಗಿ ಬರುವುದಿಲ್ಲ. ಆದರೆ ಹತ್ತೂ ಜನರ ಜತೆಗೆ ಮನೆಯವರು ಕೂಡ ಸುಲಭವಾಗಿ ಅಳುವಂತಾಗುತ್ತದೆ. ಆಗ ಉಳಿದವರು ಸ್ವಲ್ಪ ಮಟ್ಟಿಗೆ ಕೊರಗನ್ನು ಕಡಿಮೆ ಮಾಡಿಕೊಳ್ಳಬಹುದು.
ನಿರಾಸೆಯ ಕೊರಗು ಅತ್ಯುಲ್ಬಣವಾದಾಗ, Ego ಕರಗಿ, ವ್ಯಕ್ತಿಯು ಸಾಯಬಹುದು. ಪುತ್ರಶೋಕದಿಂದ ದಶರಥನು ಸತ್ತಂತೆ. ಬಾಳು ಬೇಸರವಾದಾಗ, ಸಾವು ಹಿಂಬಾಲಿಸಬಹುದು. ಅಥವಾ ಸೇಡಿನ ಮನೋಭಾವವು Ego ವನ್ನು ಮುತ್ತಿಕ್ಕಿ, ಕೊರಗುವವನನ್ನು ಹುರಿದುಂಬಿಸಿ ನಡೆಸಲೂಬಹುದು. ಇಂದ್ರಜಿತುವು ಸತ್ತ ಸುದ್ದಿಯನ್ನು ಕೇಳಿದ ರಾವಣನು ವೀರಾವೇಶದಿಂದ ಹೋರಾಡಿದಂತೆ.
ನಿರಾಶೆಯ ಕೊರಗು ಅತ್ಯುಗ್ರವಾಗಬೇಕಾದರೆ, ಸಾವು ಆಗಬೇಕಾಗಿಲ್ಲ, ವ್ಯಕ್ತಿಯ ಮನಸ್ಸು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದರೆ, ಕಿರು ನೆಪವು ಕೂಡ ಅತ್ಯುಗ್ರ ಕೊರಗನ್ನುಂಟುಮಾಡಬಹುದು. ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಬ್ಯಾಂಕು ಗಳಿಸಿ ಕೆಲಸಕ್ಕೆ ಸೇರಿದ ಯುವಕ, ಮದುವೆಯ ವಿಚಾರದಲ್ಲಿ ತಂದೆಯು ಏನೋ ಅಂದರು ಎಂಬ ಕಾರಣದಿಂದ, ಕೆರೆಗೆ ಹೋಗಿ ಬಿದ್ದು ಆತ್ಮಹತ್ಯೆಯನ್ನು ಮಾಡಿಕೊಂಡ ಅಂದರೆ ಕೊರಗಿನ ಪರಿಣಾಮವು, ವ್ಯಕ್ತಿಯ ಮಾನಸಿಕ ಪ್ರೌಢತೆಯನ್ನು ಅವಲಂಬಿಸಿರುತ್ತದೆ.