೮. ಮನಸ್ಸಿನ ಮಥನ
ಯಲ್ಲಪ್ಪನದು ಸ್ವಲ್ಪ ವಿಚಿತ್ರ ಸ್ವಭಾವ. ಹೇಳಿಕೊಳ್ಳುವಂತಹ ಜಾಣನೇನೂ ಅಲ್ಲ. ಆದರೆ ಸಣ್ಣ ಸಣ್ಣ ವಿಷಯಕ್ಕೂ ಅತಿಯಾಗಿ ಯೋಚಿಸಿ, ಅಳೆದು, ಸುರಿದು, ಕಡೆಗೆ ತೀರ್ಮಾನಕ್ಕೆ ಬರುತ್ತಾನೆ. ರಾತ್ರಿ ಮಲಗುವ ಮುಂಚೆ ಚಾಪೆಯನ್ನು ಹಾಸುತ್ತಾನೆ. ಅದರಮೇಲೆ ವಾರಣವಾಗಿ ಜಮಖಾನವನ್ನು ಹಾಸುತ್ತಾನೆ. ಸ್ವಲ್ಪವೂ ಸುಕ್ಕುಬರದಂತೆ ಅದರ ಮೇಲೆ ಕುಕ್ಕುರುಗಾಲಿನಲ್ಲಿ ಕುಳಿತು ಕೈಯಾಡಿಸುತ್ತಾನೆ. ನಂತರ ಹಾಸಿಗೆಯನ್ನು ಹರಡುತ್ತಾನೆ. ಅದರ ಮೇಲೆ ಮಲಗುತ್ತಾನೆ. ಆಗ ಇಂತಹ ಸ್ಥಳದಲ್ಲಿ ಮೊದಲ ದಿಂಬನ್ನು ಇಡಬೇಕು ಎಂದು ನಿರ್ಧರಿಸುತ್ತಾನೆ. ಎದ್ದು ದಿಂಬನ್ನಿಟ್ಟು, ಮಗ್ಗಲು ಹಾಸಿಗೆಯನ್ನು ಸುಕ್ಕುಗಳು ಬರದಂತೆ ಹಾಸುತ್ತಾನೆ. ಹಾಸಿಗೆಯ ಕೆಳಕ್ಕೆ ಮಗ್ಗಲು ಹಾಸಿಗೆಯ ಪಕ್ಕಗಳನ್ನು ವೈನವಾಗಿ ತುರುಕುತ್ತಾನೆ. ನಂತರ ಎರಡನೆಯ ದಿಂಬನ್ನು ಮೊದಲ ದಿಂಬಿನ ಮೇಲೆ ಇಡುತ್ತಾನೆ. ಶಾಲನ್ನು ಅಣಿಯಾಗಿ ಮಡಿಸಿ ಕಾಲ ದಿಸೆಯಲ್ಲಿ ಅಲಂಕಾರವಾಗಿಡುತ್ತಾನೆ. ತುಸು ದೂರದಿಂದ ಎಲ್ಲವನ್ನೂ ಅರೆಕ್ಷಣ ನೋಡುತ್ತಾನೆ. ನಂತರ ಸಂತಸದಿಂದ ಹಾಸಿಗೆಯ ಮೇಲೆ ಹಗೂರಾಗಿ ಮಲಗುತ್ತಾನೆ.
ಕಾಲೇಜಿನಲ್ಲಿ ಓದುತ್ತಿದ್ದಾಗ ಯಲ್ಲಪ್ಪ ನನ್ನ ರೂಂ ಮೇಟ್. ಇಷ್ಟೆಲ್ಲಾ ಅಣಿಯನ್ನು ಅವ ಮಾಡುವುದನ್ನು ನೋಡಿ ಅಯ್ಯೋ ನತದೃಷ್ಟ ! ಬಿದ್ದುಗೊಳ್ಳುಕ್ಕೆ ಇಷ್ಟೆಲ್ಲಾ ಯೋಚಿಸಬೇಕೇ? ಎಂದು ಅಂದುಕೊಳ್ಳುತ್ತಿದ್ದೆ. ಸುರುಳಿ ಸುತ್ತಿಟ್ಟಿದ್ದ ಹಾಸಿಗೆಯನ್ನು ಕತ್ತೆ ಒದ್ದ ಹಾಗೆ ಒದೆಯುವುದರಿಂದ, ಹಾಸಿಗೆಯು ಬಿಡಿಸಿಕೊಂಡು ಹರಡುತ್ತದೆ. ತತ್‌ಕ್ಷಣ ಅದರ ಮೇಲೆ ನಾನು ಬಿದ್ದುಕೊಳ್ಳುತ್ತಿದ್ದೆ. ಅಗತ್ಯ ತೋರಿದ ಹಾಗೆ ದಿಂಬು ಶಾಲುಗಳನ್ನು ನಂತರ ಅಳವಡಿಸಿಕೊಳ್ಳುತ್ತಿದ್ದೆ.
ಇಬ್ಬರೂ ಮಲಗಬೇಕು, ನಿದ್ರೆಮಾಡಬೇಕು. ಆದರೆ ಅವ ಏನೆಲ್ಲಾ ಅಣಿ ಮಾಡಿಕೊಳ್ಳುತ್ತಿದ್ದ. ಆದರೆ ಬೆಳಗ್ಗೆ ಎದ್ದಾಗ ಇಬ್ಬರ ಹಾಸಿಗೆಯೂ ಒಂದೇ ರೀತಿ ಮುದುಡಿಕೊಂಡಿರುತ್ತಿತ್ತು. ಯಾಕೆ ಹಾಗೆ ಯಲ್ಲಪ್ಪ ತುಂಬಾ ಯೋಚಿಸಿ ಅಣಿಯಾಗಿ ಹಾಸಿಗೆಯನ್ನು ಹರಡಿಕೊಳ್ಳುತ್ತಾನೆ ಎಂದು ನಾನೂ ಆಲೋಚಿಸುತ್ತಿದ್ದೆ.