ಇಬ್ಬರೂ ಹೀಗೆ ಯೋಚಿಸುವುದು, ನನ್ನ ವಿಷಯದಲ್ಲಿ ಅವ; ಅವ ಏಕೆ ಹಾಗೆ ಎಂದು ನಾನು; ಇಬ್ಬರಿಗೂ ಯೋಚನೆಯು ಮೂಡಿರುತಿತ್ತು.
ಯೋಚನೆ ಎಂದರೇನು? ಹಾಸಿಗೆಯನ್ನು ಆಣಿಯಾಗಿ ಹಾಸುವ ಯೋಚನೆ ಅವನಿಗೆ. ಎಲ್ಲಿ ಅಂದರೆ ಅಲ್ಲಿ ಬಿದ್ದುಕೊಂಡರೆ ಅವನಿಗೆ ನಿದ್ರೆಯು ಬರುವುದಿಲ್ಲ. ಅವನು ಏಕೆ ವೃಥಾ ಶ್ರಮಪಡುತ್ತಾನೆ ಎಂದು ನನ್ನ ಯೋಚನೆ. ಅವನ ಯೋಚನೆಗಳು, ಒಂದು ಕಾರ್ಯದ ಸಿದ್ಧಿಗೆ ನನ್ನ ಯೋಚನೆಯು ಒಂದು ಸಮಸ್ಯಾ ಪರಿಹಾರಕ್ಕೆ ಯೋಚಿಸಿದನಂತರ ನಾನು ನಿರ್ಣಯಿಸಿದೆ ; ಯಲ್ಲಪ್ಪನ ಸ್ವಭಾವ ಅದು ಎಂದುಕೊಂಡೆ. ಆದರೆ ಹಾಗೇಕಾಯಿತು ಎಂದು ಮುಂದೆ ನಾನು ಯೋಚಿಸಲಿಲ್ಲ. ಯೋಚಿಸಲು ಕುತೂಹಲವು ಉಂಟಾಗಲಿಲ್ಲ. ಬಿದ್ದು ಮಲಗಿಕೊಳ್ಳುಕ್ಕೆ ಇಷ್ಟೆಲ್ಲಾ ಏಕೆ ಒದ್ದಾಡುತ್ತೀನಿ ಎಂಬ ಯೋಚನೆಯು ಯಲ್ಲಪ್ಪನಿಗೆ ಬರವೊಲ್ಲದು.
ಕಾರ್ಯಕ್ಕಾಗಲೀ, ಸಮಸ್ಯೆಯ ನಿವಾರಣೆಗಾಗಲೀ ಯೋಚನೆಯನ್ನು ಮಾಡುತ್ತೇವೆ. ಯಾವುದಾದರೂ ಕೆಲಸವನ್ನು ಮಾಡುವಾಗ, ಈ ರೀತಿಯಲ್ಲಿ ಮಾಡಿದರೆ, ಖರ್ಚು ಕಡಿಮೆಯಾಗುತ್ತದೆ, ಕೆಲಸವು ಬೇಗ ಆಗುತ್ತದೆ. ಲಕ್ಷಣವಾಗಿಯೂ ಆಗುತ್ತದೆ, ಎಂಬುದನ್ನು ನಿರ್ಣಯಿಸಬೇಕು. ಸಾಧ್ಯವಾದಷ್ಟು ಮಟ್ಟಿಗೆ ಇತರ ಎಲ್ಲ ವಿಧಾನಗಳನ್ನು ಯೋಚಿಸಿ, ಅವುಗಳಲ್ಲೆಲ್ಲ ಒಂದು ಉತ್ತಮವಾದುದು ಎಂದು ತೀರ್ಮಾನಿಸಬೇಕು. ಸಮಸ್ಯೆಯು ಎದುರಾದಾಗ, ಅದನ್ನು ಬಿಡಿಸಬೇಕಾದರೆ, ಅಥವಾ ಪರಿಹಾರವನ್ನು ಕಂಡುಹಿಡಿಯಬೇಕಾದರೆ, ಆಗಲೂ ಹಲವಾರು ಪರಿಹಾರ ಮಾರ್ಗಗಳನ್ನು ಪರಿಶೀಲಿಸಿ, ಸುಲಭವಾದ ಮತ್ತು ಉತ್ತಮವಾದ ಮಾರ್ಗವನ್ನು ನಿರ್ಧರಿಸಬೇಕು.
ಮನಸ್ಸನ್ನು ಮಥಿಸುವುದರಿಂದ, ವಿಚಾರವನ್ನು ಮಾಡುವುದರಿಂದ, ನಿರ್ಣಯಿಸಲು ಸಾಧ್ಯ. ಮೊಸರನ್ನು ಚೆನ್ನಾಗಿ ಕಡೆದರೆ ಬೆಣ್ಣೆಯು ಮೇಲಕ್ಕೆ ತೇಲುತ್ತದೆ. ಮನಸ್ಸನ್ನು ವಿಚಾರದ ಕಡೆಗೋಲಿನಿಂದ ಕಡೆದರೆ ನಿರ್ಣಯವು ಹೊರಬೀಳುತ್ತದೆ.
ನಮ್ಮ ನಾಡಿನ ಋಷಿಗಳು ಮನವನ್ನು ಮಥಿಸುವಾಗ ಉದ್ಭವಿಸುವವುಗಳನ್ನು ಪುರಾಣದ ಕತೆಯ ಮೂಲಕ ವಿವರಿಸಿದರು.
ಮನಸ್ಸು ಸಮುದ್ರದಂತೆ ವಿಶಾಲವಾದುದು, ಆಳವಾದುದು ಮೇಲ್ಪದರದಲ್ಲಿರುವುದು ಮಾತ್ರ ನಮ್ಮ ಗಮನಕ್ಕೆ ಪ್ರತ್ಯಕ್ಷವಾಗುತ್ತದೆ. ಮನಸ್ಸಿನಲ್ಲಿ ಇದನ್ನು Conscious part ಎನ್ನುತ್ತಾರೆ. ತೋರ ಮನಸ್ಸು, ಆಳಮನಸ್ಸಿನಲ್ಲಿ, ಸಮುದ್ರದ ಗರ್ಭದಲ್ಲಿ ಯಾವ ಯಾವುವು ಅಡಗಿವೆಯೋ ಯಾರು ಬಲ್ಲರು?