ಕೈವಲ್ಯವನ್ನು ಮನೆಯಾಗಿರಿಸಿಕೊಂಡಿರುವ ಕೈಲಾಸಾಧಿಪತಿಯೂ ಕೂಡ, ಹಾಲಾಹಲವು ಹೊಟ್ಟೆಯನ್ನು ಸೇರಿದ್ದರೆ, ಭಸ್ಮವಾಗುತ್ತಿದ್ದನಂತೆ. ಅಸ್ತಿತ್ವವು ಅವನಿಗೆ ಉಳಿಯುತ್ತಿರಲಿಲ್ಲವಂತೆ. ಆದಕಾರಣ ಶಿವನಿಗೂ ಕೂಡ ಹಾಲಾಹಲವು ನುಂಗಲಾರದ ತುತ್ತಾಯಿತಂತೆ. ಗಂಟಲಿನಲ್ಲಿ ಸಿಕ್ಕಿಕೊಂಡಿತಂತೆ. ಗಂಟಲು ಪ್ರದೇಶವು ನೀಲಿಗಟ್ಟಿತಂತೆ. ನೀಲಕಂಠನಾದನಂತೆ. ಶಿವ ವಿಷಕಂಠನಾದನಂತೆ ಶಿವ. ಶ್ರೀಕಂಠನಾದನಂತೆ ಶಿವ. ಇದರಿಂದಾಗಿ ವಾಸ್ತವಿಕ ಲೋಕವು ಅಸ್ತಿತ್ವದಲ್ಲಿ ಉಳಿಯಿತಂತೆ. ಲೌಕಿಕ ಕಲ್ಯಾಣವು ಆಯಿತಂತೆ.
೧. ಮನಸ್ಸಿನಲ್ಲಿ ಮಥನವಾದಾಗ ಮೊದಲು ಹೊರಹೊಮ್ಮುವುದು ವಿಷ ಕೆಟ್ಟ ಯೋಚನೆ. ಸಾವಿನ ಭಯ. ಮನೆಗೆ ಸಂಜೆ ಆರರ ವೇಳೆಗೆ ಹಿಂತಿರುಗುತ್ತೇನೆ. ಆ ವೇಳೆಗೆ ಮೊದಲ ಮಗನು ಚಾಕರಿಯಿಂದ ಹಿಂತಿರುಗಿ ಸುಸ್ತು ಬಡಿದು ಬಂದು, ತಿಂಡಿಯನ್ನು ತಿನ್ನುತ್ತಿರಬೇಕು. ಆದರೆ ಆ ಸಂಜೆ ಮನೆಗೆ ಅವ ಹಿಂತಿರುಗಿರುವುದಿಲ್ಲ. ಏನು ಕಾರಣವಿತ್ತೋ ಅವನಿಗೆ ಮಾತ್ರ ಗೊತ್ತು. ಕ್ಲುಪ್ತವಾದ ಹೊತ್ತಿಗೆ ಮಗನು ಬರಲಿಲ್ಲ ಎಂದಾಗ ನನಗೆ ಆತಂಕವಾಗುತ್ತದೆ. ಹೊಸ ಸ್ಕೂಟರನ್ನು ಕೊಂಡಿದ್ದಾನೆ. ಯೌವನದ ಆತುರ, ಸ್ಕೂಟರಿನ ಅನುಭವ ಸಾಲದು. ಆದಕಾರಣ ಅಪಘಾತಕ್ಕೀಡಾಗಿದ್ದಾನೆ. ಯಾವ ಆಸ್ಪತ್ರೆಗೆ ದಾಖಲು ಮಾಡಿದ್ದಾರೋ? ಇದಾನೆಯೋ ? ಪ್ರಜ್ಞಾಹೀನನಾಗಿದ್ದಾನೆಯೋ ? ಅಥವಾ...ಮುಂದೆ ಬರುವ ಯೋಚನೆಯನ್ನು ಮುಂದುವರಿಸಲಾರೆ. ಆ ವಿಷಯವನ್ನು ನನ್ನ ಮನಸ್ಸು ನುಂಗಲಾರದು. ಉಗುಳಲೂ ಆಗದು. ಸ್ವಲ್ಪ ಕಾಲ ನಾನೂ ವಿಷಕಂಠನೇ ! 'ಹೆಲೈಟ್ ಕೊಳ್ಳಲು ಹೋಗಿದ್ದೆ. ಬಾ ಹಾಗೇ ಮಜೇಂದ್ರ ಭವನಕ್ಕೆ ಹೋಗಿ ಕಾಫಿ ಕುಡಿದು ಬಂದೆ' ಎಂದು ಒಂದು ತಾಸು ಮುಗಿದ ಮೇಲೆ ಅವನು ಬಂದು ಹೇಳಿದಾಗ, ನನ್ನ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಮನಸ್ಸಿನ ಆತಂಕದ ವಿಷವು ತಟ್ಟಂತ ನಿವಾರಣೆಯಾಗುತ್ತದೆ. ನನ್ನ ಮನಸ್ಸಿನ ಲೋಕದ ಕಲ್ಯಾಣವಾಗುತ್ತದೆ.
ಹಾಲಾಹಲವನ್ನು ನಿವಾರಿಸಿದನಂತರ ಸಮುದ್ರ ಮಥನವಾದಾಗ, ಜೇಷ್ಠಾ ಎಂಬ ಹೆಸರಿನ ದರಿದ್ರ ಲಕ್ಷ್ಮಿಯು ತೇಲಿ ಬಂದಳಂತೆ. ಮೊದಲು ಹುಟ್ಟಿ ಬಂದವಳು ಜೇಷ್ಠಾ.
೨. ಲೌಕಿಕ ಬಾಳಿನಲ್ಲಿ ಯಶಸ್ವಿಯಾಗಲು ಯಾವುದಾದರೂ ಒಂದು ಕಾರ್ಯವನ್ನೋ ಅಥವಾ ವ್ಯವಹಾರವನ್ನೋ ಮಾಡಬೇಕಾಗುತ್ತದೆ. ಸಾಕಷ್ಟು ವಿಚಾರವನ್ನು ಮಾಡಿದಾಗ, ಮೊದಲು ಬರುವ ಯೋಚನೆಯು ನಷ್ಟದ್ದು, ಮಸಲಾ ನನ್ನ ಯೋಜನೆಯು ಕಾರಣಾಂತರದಿಂದ ಸರಿ ನಡೆಯದಿದ್ದರೆ, ಆಗ ತುಂಬಾ