ನಷ್ಟವಾಗುತ್ತದೆ. ಹಿಂದೆ ಕೂಡಿಟ್ಟಿದ್ದೆಲ್ಲಾ ಈ ವ್ಯವಹಾರದಲ್ಲಿ ಕಳೆದು ಹೋಗುತ್ತದೆಯೋ ಎಂಬ ಆಲೋಚನೆ, ವರ್ಷವೆಲ್ಲಾ ವ್ಯಾಸಂಗವನ್ನು ಶ್ರದ್ಧೆಯಿಂದ ಮಾಡಿದ್ದೇನೆ; ಪರೀಕ್ಷೆಯ ಸಮಯದಲ್ಲಿ ಕಾಯಿಲೆ ಮಲಗಿದರೆ ಎನ್ನುವ ಯೋಚನೆ. ಎಲ್ಲವೂ ದರಿದ್ರದ ಯೋಚನೆಗಳು.
ಜೇಷ್ಯಾ, ಅಥವಾ ದರಿದ್ರ ಲಕ್ಷ್ಮಿಯು, ಕೃಷ್ಣರೂಪ ಧರಾ ದೇವಿಯಂತೆ. ಸರ್ವಾಭರಣ ಭೂಷಿತಳಂತೆ, ದಾರಿದ್ರವು ಕಪ್ಪು ಕಪ್ಪಾದ ಭವಿಷ್ಯವನ್ನು ಸೂಚಿಸಬಹುದು. ಆದರೆ ಸರ್ವಾಭರಣ ಭೂಷಿತಳು ಹೇಗೆ? ಲೌಕಿಕ ಬಾಳಿನಲ್ಲಿ ಶ್ರೀಮಂತರ ಸಂಸಾರವನ್ನು ನೋಡಿ. ಪ್ರತಿಯೊಬ್ಬರಿಗೂ ಆರ್ಥಿಕ ಸ್ವಾತಂತ್ರ್ಯವಿರಲು ಸುಲಭ. ಹಿರಿಯರ ಹೆದರಿಕೆಯು ಕಿರಿಯರನ್ನು ನಡೆಸುತ್ತದೆ. ಹಿರಿಯರ ಕಣ್ಣು ತಪ್ಪಿದರೆ ಸಾಕು; ಕಿರಿಯರು ಸ್ವಚ್ಛಾ ವಿಹಾರಿಗಳಾಗುತ್ತಾರೆ. ನಿಕಟವಾದ ಅನ್ನೋನ್ಯತೆಯು ಬೆಳೆಯುವುದು ಕಷ್ಟ. ನಮ್ಮಪ್ಪ ನನಗಾಗಿ ಏನು ಮಾಡಿದ? ಅವರಪ್ಪ ಬಿಟ್ಟು ಹೋದ ಆಸ್ತಿಯನ್ನು ಬೆಳಸಿದ. ತಾನೂ ಮಜ ಜೀವನ ನಡೆಸಿದ. ಅವನ ಅಂತಸ್ತಿಗೆ ತಕ್ಕಂತೆ ಸಮಾಜದಲ್ಲಿ ನಾನು ಮೆರೆಯಬೇಕು ಎಂದು ಸೌಲಭ್ಯಗಳನ್ನು ನೀಡಿದ ಎನ್ನುವ ಭಾವನೆಯು ಮೂಡುತ್ತದೆ.
ಆದರೆ ಬಡವರ ಸಂಸಾರದಲ್ಲಿ ನೋಡಿ, ಮಗನಿಗೆ ಅನ್ನವನ್ನಿಟ್ಟು ಶಾಲೆಗೆ ತಾಯಿ ಕಳಿಸಿದಳು. ಶಾಲೆಗೆ ಹೋದ ಮೇಲೆ, ಯಾರೋ ದೊಡ್ಡವರು ಸತ್ತರು ಅಂತ ರಜಾ ಕೊಟ್ಟರು. ಹತ್ತು ವರ್ಷದ ಮಗ ಮನೆಗೆ ಹನ್ನೆರಡರ ವೇಳೆಗೆ ಹಿಂತಿರುಗಿ ಬಂದ. ತಾಯಿ ಊಟಕ್ಕೆ ಕುಳಿತಿದ್ದಳು. ರಾಗಿ ಮುದ್ದೆಯನ್ನು ತಟ್ಟೆಗೆ ಬಡಿಸಿಕೊಂಡಿದ್ದಳು. ಅನ್ನವನ್ನು ನೀನು ತಿನ್ನುಲ್ಲವಾ? ಎಂದು ಮಗ ಕೇಳಿದ. ಎಲ್ಲರೂ ಅನ್ನವನ್ನು ತಿನ್ನುವಷ್ಟು ಸಂಪಾದನೆಯು ನಿಮ್ಮಪ್ಪನಿಗೆ ಇಲ್ಲ. ಹೊರಗೆ ಹೋಗಿ ಬರುವ ಗಂಡಸರಿಗೆ ಅನ್ನವನ್ನು ಮಾಡಿ ಹಾಕುತ್ತೇನೆ. ಮನೆಯಲ್ಲೇ ಕುಳಿತಿರುವ ಹೆಂಗಸರು ಏನನ್ನು ತಿಂದರೂ ಆಯಿತು, ಎಂದಳು ತಾಯಿ.
ರಾಗಿ ಮುದ್ದೆಯನ್ನು ದಿನವೂ ಹಲವಾರು ಶ್ರೀಮಂತರು ತಿನ್ನುತ್ತಾರೆ. ಅದು ಅಭ್ಯಾಸವಾಗಿದ್ದುದರಿಂದ, ಅಕ್ಕಿಯು ದುಬಾರಿ ದುರ್ಲಭ ಎಂದಲ್ಲ. ಆ ಅಭ್ಯಾಸವಿಲ್ಲದ ಬಡವರ ಮನೆಯಲ್ಲಿ ಗಂಡು ಮಕ್ಕಳಿಗೆ ಅಭ್ಯಾಸವಾದ ಅನ್ನವನ್ನು ಹಾಕಿ, ರಾಗಿ ಮುದ್ದೆಯನ್ನು ತಾಯಿಯು ಉಳಿತಾಯಕ್ಕಾಗಿ ತಿಂದರೆ, ಮಗ-ತಾಯಿ ಇವರುಗಳ ನಡುವೆ ಎಂತಹ ನಿಕಟ ಪ್ರೇಮವು ಉಂಟಾಗುತ್ತದೆ. ! ಇಂದು ನಾಲ್ಕಾರು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳೂ ಸಂಪಾದಿಸುವ ಶ್ರೀಮಂತ, ನಾಲ್ವತ್ತು ವರ್ಷಗಳ ಹಿಂದಿನ ತಾಯ ಒಲವನ್ನು ಸ್ಮರಿಸಿಕೊಂಡು,