೧೧. ನನಗೆ ಹುಚ್ಚು ಹಿಡಿದಿದೆಯೇ?
ಐದಾರು ಬಟ್ಟಲು ಕಾಫಿಯನ್ನು ಕುಡಿದು, ರಾತ್ರಿಯ ವೇಳೆ ಬಹಳ ಹೊತ್ತು ಓದುವುದು ಹಲವಾರು ವಿದ್ಯಾರ್ಥಿಗಳ ಹಣೆಯ ಬರಹ. ಪರೀಕ್ಷೆಯು ಹತ್ತಿರವಾದಂತೆಲ್ಲಾ, ನಿದ್ರೆಗೆಟ್ಟು ಓದುವುದು ಹೆಚ್ಚಾಗುತ್ತದೆ. ಪರೀಕ್ಷೆಯು ನಾಳೆ ನಾಡಿದ್ದು ಎನ್ನುವಾಗ, ಅಕ್ಷರಗಳೇನೋ ಪುಸ್ತಕದಲ್ಲಿ ಕಂಡರೂ, ಅವುಗಳ ಅರ್ಥವೇನು ಎನ್ನುವುದು ತಲೆಗೆ ಹತ್ತುವುದೇ ಇಲ್ಲ. ಹಿಂದಿನ ದಿನ ಓದಿದ್ದನ್ನು ಜ್ಞಾಪಿಸಿಕೊಳ್ಳಹೋಗುತ್ತಾನೆ. ಯಾವುದೂ ನೆನಪಿಗೆ ಬರುವುದಿಲ್ಲ. ದಿಗ್ಧಮೆ ಯಾದಂತಾಗುತ್ತದೆ. ನನಗೇನಾದರೂ ಹುಚ್ಚು ಗಿಚ್ಚು ಹಿಡಿದಿದೆಯೋ ಎಂದು ಅರೆಕ್ಷಣ ಅನುಮಾನಿಸುತ್ತಾನೆ.
ಕಚೇರಿಯಲ್ಲಿ ಲೆಕ್ಕ ಬರೆಯುವ ನೌಕರರು ಕೋಪಿಷ್ಠ ಅಧಿಕಾರಿಯ ಕೆಳಗೆ ದುಡಿಯಬೇಕಾಗುತ್ತದೆ. ವೇಳೆಗೆ ಸರಿಯಾಗಿ ಅಕಸ್ಮಾತ್ ಒಂದು ದಿನ ಆ ದಿನದ ಲೆಕ್ಕಗಳನ್ನು ಪೂರೈಸದೆ ಇದ್ದಾಗ 'ಏನ್ರಿ ! ಕತ್ತೆ ಹಾಗೆ ಬೆಳೆದಿದ್ದೀರಿ. ಹತ್ತು ವರ್ಷ ಸರ್ವಿಸ್ ಆಗಿ, ಎರಡು ಗಂಟೆಗಳಲ್ಲಿ ಮುಗಿಸುವ ಕೆಲಸವನ್ನು ಇನ್ನೂ ಮುಗಿಸಿಲ್ಲವ, ನಾಚಿಕೆಯಾಗುಲ್ವೇ, ಎಂದು ಅಧಿಕಾರಿಯು ರೇಗಿ ಬೈಯುತ್ತಾನೆ. ನೌಕರನಿಗೆ ಆತಂಕವು ಶುರುವಾಗುತ್ತದೆ. ಮುಂದೆ ಬರಬೇಕಾದ ಪ್ರಮೋಷನ್ನಿಗೆ ಈ ಅಧಿಕಾರಿ ತುಂಡು ಹಾಕುತ್ತಾನೆ, ನನ್ನ ಭವಿಷ್ಯವೇ ಕುಂಟುತ್ತದೆ ಎಂದು ಖಿನ್ನನಾಗುತ್ತಾನೆ. ಈ ಸ್ಥಿತಿಯಲ್ಲಿ ಅವ ಮಾಡಿದ ಕೆಲಸವು ತಪ್ಪುಗಳಿಂದ ಕೂಡಿರುವುದು ಸ್ವಾಭಾವಿಕ, ಮಾಡಿದ ಲೆಕ್ಕವನ್ನು ತಿರುಗಿ ತಿರುಗಿ ಮೂರು ಬಾರಿ ಮಾಡುತ್ತಾನೆ. ಮೂರು ಉತ್ತರಗಳು ದೊರೆಯುತ್ತವೆ. ನನ್ನ ತಲೆಗೆ ಏನೋ ಆಗಿದೆ ; ಇಂತಹ ಸಣ್ಣ ಲೆಕ್ಕವನ್ನು ಸರಿಯಾಗಿ ಮಾಡಲು ಆಗಲಿಲ್ಲ' ಎಂದು ಕೊರಗುತ್ತಾನೆ. ನನ್ನ ಚಿಕ್ಕಜ್ಜನಿಗೆ ಹುಚ್ಚು ಹಿಡಿದಿತ್ತು ಎನ್ನುತ್ತಿದ್ದರು. ನನಗೂ ಹಾಗೆಯೇ ಆಗುತ್ತಿದೆಯೇನೋ ಎನ್ನುವ ಸಂದೇಹವು ಕಾಡತೊಡಗುತ್ತದೆ.
ಅತ್ತೆಯ ದೈನಂದಿನ ಸುಸಂಸ್ಕೃತ ಕುಕ್ಕಾಟದಿಂದ, ಬಡವರ ಮನೆಯಿಂದ ಬಂದ ಸೊಸೆಗೆ ಬೇಸರವಾಗುತ್ತದೆ. ಆಡುವಂತಿಲ್ಲ, ಅನುಭವಿಸುವಂತಿಲ್ಲ. ಬೇಸರವು ಮನಸ್ಸನ್ನು ತುಂಬಿದಾಗ, ಮಾಡಿದ ಮನೆಗೆಲಸವು ಸಮರ್ಪಕವಾಗಿರುವುದಿಲ್ಲ.