೧೨. ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
ಮನಸ್ಸು ಹಿಂದಿನ ಅಧ್ಯಾಯಗಳಲ್ಲಿ, ಇಂದಿನ ಮನೋ ವಿಜ್ಞಾನದ ಪ್ರಕಾರ ಮನಸ್ಸಿನಲ್ಲಿ ಸ್ವರೂಪ ಮತ್ತು ಕಾರ್ಯಕ್ರಮಗಳನ್ನು ತಿಳಿದೆವು. ಸಾರಾಂಶವು ಇಷ್ಟು.
ಪಂಚೇಂದ್ರಿಯಗಳ ಮೂಲಕ ಹೊರ ಪ್ರಪಂಚದ ಅರಿವನ್ನು ಸಂಗ್ರಹಿಸುತ್ತೇವೆ. ಇವು ತೋರಮನಸ್ಸಿನಲ್ಲಿ ಸ್ಪಷ್ಟವಾಗುತ್ತದೆ. ಹಾಗೂ ಇವುಗಳ 'ಪ್ರತಿ'ಯೊಂದು ಸ್ಮರಣಾ ವಿಭಾಗದಲ್ಲಿ ಶೇಖರಿಸಿಡಲ್ಪಡುತ್ತದೆ. ಬಾಲ್ಯದಲ್ಲಿ ಮನಸ್ಸು ಈ ಕಾರ್ಯದಲ್ಲಿ ಕುತೂಹಲದಿಂದ ಅತಿ ಪ್ರಮುಖವಾಗಿ ತೊಡಗಿರುತ್ತದೆ.
ಬೆಳೆಯುತ್ತ ಹೋದಾಗ, ಪಂಚೇಂದ್ರಿಯಗಳ ಮೂಲಕ ಅರಿತಿದ್ದನ್ನು ಸ್ಮರಣಾ ಭಾಗದ ನೆರವನ್ನು ಪಡೆದು, ವಿಚಾರವನ್ನು ಮಾಡಿ, ಅರಿತಿದ್ದುದು ಇಷ್ಟು; ಅದರ ಕಾರಣವು ಹೀಗಿರಬೇಕು ಎಂದು ಮನಸ್ಸು ನಿರ್ಣಯಿಸುತ್ತದೆ. ವಿಚಾರಪರ ಮನಸ್ಸು: ಮತ್ತು ಸ್ಮರಣಾ ವಿಭಾಗಗಳ ನೆರವು, ಕಾರ್ಯ ಮಾಡುವುದೆಲ್ಲವೂ, ತೋರ ಅಥವಾ Conscious mind ಇಗೆ ಕಾಣಬೇಕಾಗಿಲ್ಲ. ಮನಸ್ಸಿನ ಅವ್ಯಕ್ತವಾದ ಪದರಗಳಲ್ಲಿ ಈ ಕಾರ್ಯಗಳು ನಡೆಯತ್ತವೆ. ಯುವಕರಲ್ಲಿ ಮತ್ತು ವಯಸ್ಕರಲ್ಲಿ ವಿಚಾರಪರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತವೆ.
ಬಾಹ್ಯ ಪ್ರಪಂಚದ ಸುದ್ದಿಯನ್ನು ಈ ರೀತಿ ಮನಸ್ಸು ವಿಶ್ಲೇಷಿಸುವಾಗ, ಭಾವನಾ ಕೇಂದ್ರಗಳು ಕೆರಳುತ್ತವೆ. ರಾಗ, ದ್ವೇಷ, ಕ್ರೋಧ; ಭಯ, ಪ್ರೀತಿ, ವಾತ್ಸಲ್ಯ, ಜುಗುಪ್ಪೆ, ಇತ್ಯಾದಿ ಭಾವನೆಗಳು ಉಂಟಾಗಿ ಮನಸ್ಸಿನ ಮೇಲೆ ಪ್ರಭಾವವನ್ನು ಬೀರಿ, ಪ್ರಚೋದಿಸಿ, ಈ ರೀತಿ ಕಾರ್ಯವನ್ನು ಮಾಡಿದರೆ ತೃಪ್ತಿಯಾಗುತ್ತದೆ, ಎಂದು ಮನಸ್ಸನ್ನು ನಡೆಸುತ್ತವೆ. ಆಗ ಮನಸ್ಸು ಕರ್ಮೇಂದ್ರಿಯಗಳ ಮೂಲಕ ಕೆಲಸವನ್ನೂ ಮಾಡುತ್ತದೆ.
ಬಾಲ್ಯದಲ್ಲಿ ಕುತೂಹಲ ಮತ್ತು ಸ್ವಾವಲಂಬಿಯಾಗುವ ಆಸೆ, ಇವೆರಡೂ ಮುಖ್ಯವಾದ ಪ್ರೇರಕಗಳು, ಯುವಕರಲ್ಲಿ ಇವೆರಡರ ಜತೆಗೆ 'ಕಾಮ'ವು ಪ್ರಮುಖ ಪ್ರೇರಕವಾಗುತ್ತದೆ, ಬಾಲ್ಯದಲ್ಲಿ ಈ ಪ್ರೇರಕವು ಶೈಶವಾವಸ್ಥೆಯಲ್ಲಿರುತ್ತದೆ. ಪೌಗಂಡ ವಯಸ್ಸಿನಲ್ಲಿ ಅರಳಿ ಹೊರವಾಗುತ್ತದೆ.