ದೇಹ ಕಾರ್ಯ ಶಾಸ್ತ್ರವನ್ನೂ, ಮನೋವಿಜ್ಞಾನವನ್ನೂ (Physiology & psychology) ಆಧರಿಸಿಕೊಂಡು ಯೋಗ ಸೂತ್ರಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ? ಸಾಧ್ಯ ಮತ್ತು ಪ್ರಯೋಜನಕಾರಿ ಎಂದನ್ನಿಸಿತು. ಆದಕಾರಣ ಈ ಪ್ರಯತ್ನವನ್ನು ಮಾಡಲಾಗಿದೆ. ಯೋಗ ಸೂತ್ರಗಳು, ಮನಸ್ಸಿನ ವಿಶ್ಲೇಷಣೆಯನ್ನು ವೈಜ್ಞಾನಿಕವಾಗಿ ಮಾಡಿವೆ. ಜಾತಿ, ಮತ, ಪಂಥ ಇತ್ಯಾದಿ ಸಂಕೋಲೆಗಳಿಲ್ಲದೆ, ಕೇವಲ ವೈಜ್ಞಾನಿಕವಾಗಿ, ವಿಶ್ಲೇಷಿಸಲಾಗಿದೆ. ಆದಕಾರಣ ಸೂತ್ರಗಳನ್ನು ಅರ್ಥಮಾಡಿಕೊಳ್ಳುವುದು ವಿಜ್ಞಾನಿಗಳಿಗೆ ಸುಲಭವಾಗಬೇಕು.
ಪ್ರಕೃತಿಯಲ್ಲಿ 'ಜೀವ'ದ ಪ್ರಗತಿಯು ಕೋಟಿ ಕೋಟ್ಯಂತರ ವರ್ಷಗಳಿಂದ ನಡೆದಿದೆ. ಆದಿಮಾನವನು, 'ಜೀವ' ಸಮೂಹದಲ್ಲಿ ಕಾಣಿಸಿಕೊಂಡು, ಹಲವು ಕೋಟಿ ವರ್ಷಗಳಾಗಿದೆ. ಇಂತಹ ದೀರ್ಘಾವಧಿಯಲ್ಲಿ ೨,೦೦೦ ಸಾವಿರ ವರ್ಷಗಳು ಅಲ್ಪ ಪ್ರಮಾಣ. ಈ ಅವಧಿಯಲ್ಲಿ ಮನಸ್ಸಿನ ಪ್ರಗತಿಯು ಅತ್ಯಲ್ಪವಾಗಿರುತ್ತದೆ. ಅಂದರೆ ಮಾನವನ ಮನಸ್ಸಿನ ಸ್ವರೂಪವಾಗಲೀ ಕಾರ್ಯಕ್ರಮಗಳಿಗೆ ವ್ಯತ್ಯಾಸವಾಗಿರುವುದಿಲ್ಲ. ಆದರೆ ಮನಸ್ಸಿನ ವಿಚಾರಪರ ಮನಸ್ಸಿನಿಂದ ಸಂಗ್ರಹಿಸಲ್ಪಟ್ಟ ಜ್ಞಾನ ಭಾಂಡಾರವು ಅಧಿಕ ಪ್ರಮಾಣದಲ್ಲಿ ಆಸ್ಫೋಟಕ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಹಾಗೂ ಕಳೆದ ಒಂದು ಶತಮಾನದಲ್ಲನಕ ಬಹಳಷ್ಟು ಹೆಚ್ಚಾಗಿದೆ. ಅಂದ ಮಾತ್ರಕ್ಕೆ ಮನಸ್ಸಿನ ರೂಪ ರೇಷೆಗಳು ಬದಲಾಯಿಸಿಲ್ಲ.ಇಂದು ಅದೇ ಮನಸ್ಸು ಹೆಚ್ಚು ಅನುಭವದಿಂದ, ತಾಂತ್ರಿಕಸಲಕರಣೆಗಳ ಸೃಷ್ಟಿಯಿಂದ, ಅತ್ಯಧಿಕವಾಗಿ ವಿಜ್ಞಾನದ ಹಲವಾರು ಶಾಖೆಗಳಲ್ಲಿ ಅಮೋಘವಾದ ಪ್ರಗತಿಯನ್ನು ಸಾಧಿಸಿದೆ ಅಷ್ಟೇ.
ಆದಕಾರಣ ಪತಂಜಲಿ ಮಹರ್ಷಿಗಳು ವಿಶ್ಲೇಷಿಸಿದ 'ಮನಸ್ಸು' ಇಂದೂ ಅದೇ ತೆರನಾಗಿದೆ. ಆದುದರಿಂದ ಯೋಗ ಸೂತ್ರಗಳ ಅಧ್ಯಯನವು ಇಂದಿಗೂ ಸೂಕ್ತ. ಯಾಂತ್ರಿಕ ಸಾಧನೆಗಳಿಂದ, ವಿಜ್ಞಾನದ ಇತರ ಶಾಖೆಗಳ ಪ್ರಗತಿಯ ನೆರವಿನಿಂದ ಮನೋ ವಿಜ್ಞಾನಿಗಳು ಅಪಾರ ಪ್ರಯೋಗಗಳನ್ನು ನಡೆಸಿ ಸಿದ್ಧಾಂತಗಳನ್ನು ಮಾಡಿದ್ದಾರೆ. ಯೋಗಸೂತ್ರಗಳಲ್ಲಿ ವಿವರಿಸಲಾದ ವಿಶ್ಲೇಷಣೆಯು, ಇಂದಿನ ವಿಜ್ಞಾನಿಗಳ ಸಿದ್ಧಾಂತಗಳನ್ನು ಆ ಕಾಲದ ಭಾಷೆಯಲ್ಲಿ ಹೇಳಿದೆ. ಕೆಲವು ವಿಷಯಗಳಲ್ಲಿ ಮುಂದುವರೆದೂ ಇದೆ ಎನ್ನಿಸುತ್ತದೆ.
ಯೋಗ ಭೋಗ ಯೋಗ ಎನ್ನುವ ಪದವು, ವಸ್ತುಗಳು ಅಥವಾ ವಿಷಯಗಳೆರಡಕ್ಕೆ ಸಂಬಂಧವನ್ನು ಕಲ್ಪಿಸುವುದು, ಅಥವಾ ಅವುಗಳ ಮಧ್ಯೆ ಸೇತುವೆಯನ್ನು ಕಟ್ಟುವುದು,