೪೦೧
ವ್ಯವಸ್ಥೆಯನ್ನು Mind ಎಂದು ನಾವಂದರೆ, ಆ ಕಾಲದಲ್ಲಿ ಅಂತಃಕರಣ ಎಂದರು. ಒಳಗೆ ಇದ್ದುಕೊಂಡು ಕೆಲಸಗಳನ್ನು ಮಾಡಿಸುವ ವ್ಯವಸ್ಥೆಯು ಅಂತಃಕರಣ, ಇದಕ್ಕೆ ವಸ್ತು ಸ್ವರೂಪವಿಲ್ಲ. ಶಕ್ತಿ ಸ್ವರೂಪದ ಒಂದು ಮುಖ.
ಅಂತಃಕರಣದಲ್ಲಿ ಮುಖ್ಯವಾದ ನಾಲ್ಕು ಭಾಗಗಳಿವೆ.
೧. ಮನಸ್ಸು : ಈ ಭಾಗದಿಂದ ಅರಿಯುವುದು ಅಥವಾ ತಿಳಿಯುವುದು ಸಾಧ್ಯವಾಗುತ್ತದೆ. ಪಂಚೇಂದ್ರಿಯಗಳಿಂದ ಸಂಗ್ರಹಿಸಿದುದನ್ನು ಅರಿಯುವುದು ಮನಸ್ಸು ಸ್ಮರಣೆಯನ್ನು ಚೇತನಗೊಳಿಸಿ ತಿಳಿಯುವುದೂ ಮನಸ್ಸು.
೨. ಚಿತ್ತ : ಅಂತಃಕರಣದ ಈ ಭಾಗವು ಯಾವುದಾದರೂ ವಸ್ತುವಿನ ಮೇಲೆ ಸಂಪೂರ್ಣವಾಗಿ ನೆಲೆಸಿ, ಆ ವಸ್ತುವನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತದೆ. ದಾರಿಯಲ್ಲಿ ನಡೆಯುವಾಗ ಹತ್ತು ವಸ್ತುಗಳನ್ನು ಕಣ್ಣುಗಳು ಕಾಣುತ್ತವೆ. ಆದರೆ ಅದರಲ್ಲೊಂದು ನಮ್ಮ ಗಮನವನ್ನು ತುಸು ಕಾಲವಾದರೂ ಸೆರೆ ಹಿಡಿಯುತ್ತದೆ. ಗಮನವು ಸಂಪೂರ್ಣವಾಗಿ, ಇತರ ಯಾವುವೂ ಬಾರದಂತಾಗುವುದು ಚಿತ್ತದ ಜವಾಬ್ದಾರಿ.
೩. ಅಹಂ-ಕಾರ : ಚಿತ್ತವು ತನ್ನದನ್ನಾಗಿ ಮಾಡಿಕೊಂಡುದನ್ನು ನಾನು ಎನ್ನುವ ಕಲ್ಪನೆಯೊಂದಿಗೆ ದೃಢವಾಗಿ ಜತೆಗೂಡಿಸುವುದು, ಅಹಂ-ಕಾರದ ಹೊಣೆ ಮತ್ತು ಕರ್ತವ್ಯ.
೪. ಬುದ್ಧಿ : ಅಂತಃಕರಣದ ಈ ಭಾಗವು ವಿವೇಚನೆಯನ್ನು ಮಾಡುತ್ತದೆ. ಆಗುಹೋಗುಗಳನ್ನು ವಿಚಾರಮಾಡಿ, ಹೀಗೆ ಮಾಡಿದರೆ ಹಿತ ಮತ್ತು ವಿಹಿತ ಎನ್ನುವುದನ್ನು ನಿರ್ಣಯಿಸುತ್ತದೆ.
ಅಂತಃಕರಣದ ಈ ನಾಲ್ಕು ಭಾಗಗಳಲ್ಲಿ ಯಾವುದನ್ನಾದರೂ ಬಳಸಿಕೊಂಡು, ಅದನ್ನು ಪರಿವರ್ತಿಸುವುದರಿಂದ, ಅರಿವು ಅಥವಾ ಗ್ರಹಿಸಲು ಸಾಧ್ಯ. ಇಂತಹ ಪರಿವರ್ತನೆಯನ್ನು 'ಪರಿಣಾಮ' ಎಂದನ್ನುತ್ತಿದ್ದರು. ಇಂತಹ ಗ್ರಹಿಕೆಯು ದೇಹದ ಹೊರಗಿನದೂ ಆಗಿರಬಹುದು. ದೇಹದೊಳಗಿನದೂ ಆಗಿರಬಹುದು.
ಅಂತಃಕರಣವು ನಿರ್ಮಲವಾಗಿರುವ, ಸತ್ವಗುಣವನ್ನು ಪೂರ್ಣ ಹೊಂದಿರುವ, ಚಿತ್ತದ ಪರಿಣಾಮದ ಸ್ಥಿತಿ ಎಂದೂ ಹೇಳಬಹುದು. ಸಾಮನ್ಯವಾಗಿ ಚಿತ್ತವು ಐದು ಅವಸ್ಥೆಗಳಲ್ಲಿರುತ್ತದೆ.
೧. ಲೌಕಿಕ ಬಾಳಿನಲ್ಲಿ ಪ್ರವರ್ತಿಸಿ, ಸುಖ ದುಃಖಾದಿಗಳನ್ನು ಅನುಭವಿಸುವ ಚಿತ್ತದ ಅವಸ್ಥೆಗೆ ರಜೋಗುಣವೇ ಪ್ರಧಾನವಾದ ಪ್ರೇರಕ, ಚಿತ್ತದ ಈ ಅವಸ್ಥೆಯನ್ನು ಕ್ಷಿಪ್ತ ಎನ್ನುತ್ತಾರೆ.