ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೨೩

ಎಷ್ಟು ಖರ್ಚಾದರೂ ಚಿಂತೆ ಇಲ್ಲ ಎನ್ನುತ್ತಿದ್ದ. ಈ ಎಲ್ಲ ಕಾರಣಗಳಿಂದ, ದೇವರನ್ನೊಬ್ಬನನ್ನು ಬಿಟ್ಟು ಇನ್ನು ಯಾರನ್ನೂ ಶಪಿಸದೆ, ಅವನ ಮನೆಗೆ, ಆ ಹೊತ್ತಿಗೆ ಬಂದು ಸಿದ್ಧವಾಗಿದ್ದ ಕಾರಿನಲ್ಲಿ ಹೋದೆ.

ಶೀಲಾ ಅವನ ಚೊಚ್ಚಲು ಮಗಳು. ಹದಿನೆಂಟರ ಪ್ರಾಯ. ಮೂರು ಜನ ತಂಗಿಯರೂ, ನಾಲ್ವರು ತಮ್ಮಂದಿರೂ ಇದ್ದ ನಂದಗೋಕುಲ, ಆ ಮನೆ. ಅಂದ ಮೇಲೆ ಶೀಲಾಳನ್ನ ಅತಿಮುದ್ದಿನಿಂದ ಏನೂ ಸಾಕಿರಲಿಲ್ಲ, ಅವಳ ಅಪ್ಪ ಅಮ್ಮ. ಡಿಗ್ರಿ ಪರೀಕ್ಷೆಗೆ ಹೋಂಸೈನ್ಸ್ ತೆಗೆದುಕೊಂಡು ಓದುತ್ತಿದ್ದಳು. ಸಾಕಷ್ಟು ಜಾಣೆ ಕೂಡ. ಅವಳೇ ತನಗಾದುದರ ವರದಿಯನ್ನು ಒಪ್ಪಿಸಿದಳು.

'ಡಾಕ್ಟರೆ' ಇವತ್ತು ಕಾಲೇಜಿಗೆ ರಜ ಇತ್ತು. ಊಟಕ್ಕೆ ವಿರಾಮವಾಗಿ ಕೂತಾಗ, ಮಿಡಿಮಾವಿನ ಉಪ್ಪಿನಕಾಯೂ ಘಮ ಘಮ ಅಂತಿತ್ತು. ಸಂಕೋಚ ಪಡದೆ ನೀವು ಉಣೋ ಹಾಗೆ ನಾನೂ ತಿಂದೆ. ಉಂಡಾಗಲೇ ಎರಡು ಗಂಟೆಗಳ ಮೇಲಾಯಿತು. ಇಷ್ಟು ಹೊತ್ತಿಗೆ ಆಹಾರವೆಲ್ಲಾ ಹೊಟ್ಟೆಯಿಂದ ಕರುಳಿಗೆ ಇಳಿದಿರಲೇಬೇಕು. ಈಗ ಹತ್ತು ಹದಿನೈದು ನಿಮಿಷಗಳಿಂದ ತೆಗೆದುಕೊಂಡ ಉಸಿರು ಶ್ವಾಸಕೋಶಗಳನ್ನು ಬೆಲೂನಿನಂತೆ ಉಬ್ಬಿಸುತ್ತದೆ. ಆದರೆ ಎಷ್ಟು ಪ್ರಯಾಸ ಪಟ್ಟರೂ ಉಸಿರುಹೊರಕ್ಕೆ ಬರುವುದೇ ಇಲ್ಲ' ಎಂದಳು.

ತಾಯ ಗರ್ಭದಲ್ಲಿ ಆಕೆ ಅವತರಿಸಿದಾಗಿನಿಂದ, ಅವಳ ಪರಿಚಯವು ನನಗಿತ್ತು. ನನ್ನನ್ನು ಕಂಡರೆ ಬಲು ಸದರ, ಸ್ವಲ್ಪ ಗೌರವವೂ ಮಿಶ್ರಿತವಾಗಿದ್ದಿರಬಹುದು. ನನ್ನ ಜೊತೆಯಲ್ಲಿ ಎಷ್ಟೋ ಬಾರಿ ಊಟ ಮಾಡಿದ್ದ ಆಕೆ, ಹಾಗೆ ಸಾಮತಿಯನ್ನು ಕೊಟ್ಟಿದ್ದಳು. ಸ್ವಲ್ಪ ತುಂಟ ಸ್ವಭಾವದ ಹುಡುಗಿ.

ಚಿಕ್ಕಂದಿನಿಂದಲೂ ಆಕೆಯ ದೇಹಸ್ಥಿತಿಯ ವಿವರಗಳು ಚೆನ್ನಾಗಿ ಗೊತ್ತಿತ್ತು. ದೇಹಾರೋಗ್ಯವು ಅತ್ಯಂತ ತೃಪ್ತಿಕರವಾಗಿದೆ ಎನ್ನುವುದೂ ತಿಳಿದಿತ್ತು. ಶ್ರೀಮಂತ ಮನೆಯಾಗಿದ್ದರಿಂದ, ಅಪ್ಪ ಅಮ್ಮ ಅತಿ ಮುದ್ದು ಮಾಡದೆ ಇದ್ದರೂ, ಅವಳು ಬಯಸಿದ್ದನ್ನು ಪೂರೈಸುತ್ತಿದ್ದರು. ಕಾಲೇಜು ಸೇರಿದ ಮೇಲೆ ಭರತನಾಟ್ಯದ ಮೇಲೆ ಅವಳಿಗೆ ಖಯಾಲಿ ತಿರುಗಿತು. ಭರತನಾಟ್ಯ ಪ್ರವೀಣೆಯಾಗಬೇಕು, ಪ್ರಪಂಚ ಪರ್ಯಟನವನ್ನು ಮಾಡಬೇಕು. ಊರುಕೇರಿಗಳ ಪತ್ರಿಕೆಗಳಲ್ಲಿ ತನ್ನ ಫೋಟೋ ಮೆರೆಯಬೇಕು ; ಈ ಹೆಬ್ಬಯಕೆಯು ತೀವ್ರವಾಯಿತು. ಆ ತನಕ ತಾನು ಕೇಳಿದುದನ್ನೆಲ್ಲಾ ತಾಯ್ತಂದೆಯರು ನಡೆಸಿಕೊಟ್ಟಿದ್ದರು. ಆದರೆ ಈ ಹಂಬಲಕ್ಕೆ ತುಂಡು ಹಾಕಿದರು. 'ಕಾಲು ತೊಡೆಗಳನ್ನು ಎಲ್ಲರೆದುರಿಗೂ ಕೊಂಕಿಸಿಕೊಂಡು, ಕುಣಿದು ನೀನೇನೂ ಸಂಪಾದಿಸಬೇಕಾಗಿಲ್ಲ. ಮದುವೆಯಾಗಿ ಎಲ್ಲರಂತೆ ಮಾನವಾಗಿ