ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೪

ಮನಮಂಥನ

ಬಾಳು' ಎಂದವರು ಖಡಾಖಂಡಿತವಾಗಿ ಹೇಳಿದ್ದರು. ಮೂರು ದಿನಗಳು ಊಟ ಬಿಟ್ಟು ಶೀಲಾ ರಂಪ ಹೂಡಿದ್ದಳು. ಅವಳನ್ನ ಸಮಾಧಾನಪಡಿಸಲು ನನ್ನನ್ನು ಕರೆಸಿದ್ದರು. ವಿಷಯವನ್ನು ಕೇಳಿ ತಿಳಿದುಕೊಂಡ ಮೇಲೆ ಖಾಜಿ ನ್ಯಾಯವನ್ನು ಮಾಡಿದ್ದೆ. 'ಒಂದು ವರ್ಷ ಭರತನಾಟ್ಯವನ್ನು ಮನೆಯಲ್ಲಿ ಅಭ್ಯಾಸ ಮಾಡಲಿ. ಹೆಣ್ಣಿನ ದೇಹಕ್ಕೆ ಭರತನಾಟ್ಯವು ಅತ್ಯುತ್ತಮವಾದ ಮತ್ತು ಪರಿಪೂರ್ಣವಾದ ವ್ಯಾಯಾಮ, ಆ ದೃಷ್ಟಿಯಿಂದ ಶೀಲಾ ನಾಟ್ಯಾಭ್ಯಾಸವನ್ನು ಮಾಡಲಿ. ಆನಂತರ ರಂಗಪ್ರವೇಶವನ್ನು ಬಹಿರಂಗವಾಗಿ ಮಾಡಬೇಕೇ, ಬೇಡವೇ, ಎನ್ನುವುದನ್ನು ನಿರ್ಧರಿಸೋಣ' ಎಂದು ಸಲಹೆಯನ್ನು ಮಾಡಿದ್ದೆ. ಶೀಲಾ ಒಪ್ಪಿದ್ದಳು. ತಾಯ್ತಂದೆಯರೂ ಕೂಡ.

ಹಟಮಾರಿತನವು ಶೀಲಾಳಲ್ಲಿ ಅಷ್ಟು ದೃಢವಾಗಿದೆ ಎನ್ನುವುದು ಆಗಲೇ ನನಗೆ ತಿಳಿದಿದ್ದು, ಹಟ ಹಿಡಿದು ವಾದಮಾಡಿದಾಗ ಅವಳ ಕೆನ್ನೆಗಳೆಲ್ಲಾ ಕೆಂಪೇರಿದ್ದುವು. ತುಟಿಗಳು ಥರಥರ ನಡುಗುತ್ತಿದ್ದುವು. ಮೂಗಿನ ಹೊಳ್ಳೆಗಳು ಕಂಪಿಸುತ್ತಿದ್ದುವು. ಅಗತ್ಯ ಬಿದ್ದರೆ, ಅವಕಾಶ ಸಿಕ್ಕರೆ ಕೈಮಾಡುವುದಕ್ಕೂ ಅವಳು ಹಿಂತೆಗೆಯುವುದಿಲ್ಲ ಎಂದು ಅನಿಸಿತ್ತು. ಇವೆಲ್ಲವೂ ಶೀಲಾಳನ್ನು ಈಗ ಕಂಡಾಗ, ಸ್ಮರಣೆಯಲ್ಲಿ ಮಿಂಚಿದುವು.

“ಅಜೀರ್ಣದಿಂದ, ಗಾಳಿ ಹೆಚ್ಚಾಗಿ ಹೊಟ್ಟೆಯಲ್ಲಿ ಉತ್ಪತ್ತಿಯಾಗಿದೆ. ಅದು ಡೈಯಾಪಂ ಅನ್ನು ಒತ್ತಿ ಏರಿಸಿದ ಹಾಗಾಗಿ ಉಸಿರು ಹೊರಬರಲು ಅಡಚಣೆ ಯಾದಂತೆ ಆಗಿದೆ. ಆದರೆ ಫೋನ್ ಮಾಡಿ ತುರ್ತು ಕರೆಸುವ ಪ್ರಸಂಗ ಇದಲ್ಲವಲ್ಲ! ನನ್ನ ಯಾಕೆ ಸತಾಯಿಸಿದೆ, ಈ ಹೊತ್ತಿನಲ್ಲಿ' ಎಂದೆ. ಹೀಗನ್ನುವಾಗ ಅವಳ ನಾಡಿಪರೀಕ್ಷೆಯನ್ನು ಮಾಡುತ್ತಿದ್ದೆ. ಕೆಟ್ಟ ಕನಸು ಕಂಡು, ಬೆದರಿ ಎದ್ದವರ ನಾಡಿ ಬಡಿತದಂತೆ ಮಿಡಿಯುತ್ತಿತ್ತು.

'ಉಸಿರು ಇಳಿಯಲಿಲ್ಲ. ಏಕೆ? ಎಂದು ಹೆದರಿಕೆಯಾಯಿತು. ಏನಾದರೂ ಬಂದಿದೆಯೇನೋ ಎಂದು ಅನಿಸಿತು. ಯಾವ ವಯಸ್ಸಿನಲ್ಲಾದರೂ ಹಾರ್ಟ್ ಅಟಾಕ್ ಬರಬಹುದು ಎಂದು ಮಾಸ ಪತ್ರಿಕೆಗಳಲ್ಲಿ ಓದಿದ್ದ ನೆನಪಾಯಿತು. ಹೆದರಿಕೆಯೂ ಇನ್ನೂ ಹೆಚ್ಚಾಯಿತು. ಏನೇ ಆಗಲಿ, ನಿಮಗೆ ಹೇಳಿಬಿಡುವುದು ವಾಸಿ ಅಂತ, ಕಾರ್ ಕಳಿಸಪ್ಪ ಎಂದು ಅಪ್ಪನಿಗೆ ಹೇಳಿದೆ.' ಎಂದಳು.

'ಈ ವಯಸ್ಸಿನಲ್ಲಿ ನಿನಗೆ ತಗಲುವ ಹಾರ್ಟ್ ಅಟಾಕ್, ಬೇರೆ ರೀತಿಯದು, ಕಣೇ! ಸ್ವೀಟ್‌ಹಾರ್ಟ್ ಅಟಾಕ್ ಆಗಬಹುದು. ಆ ಅಟಾಕಿಗೆ ನನ್ನಲ್ಲಿ ಔಷಧಿ ಇಲ್ಲ ಕಣಮ್ಮಾ !' ಎಂದು ನಿಧಾನವಾಗಿ ಗಂಭೀರವಾಗಿ ಹೇಳಿದೆನಾದರೂ,