೪೧೭
ಹೊಂದಿದಳು. ಅಂದರೆ 'ಸಂಯಮ'ದ ಪರಿಣಾಮವು ಜೀವಂತ ವ್ಯಕ್ತಿಯಲ್ಲಿ ಸಿದ್ಧಿಸಿದುದನ್ನು ಅಕ್ಕಮಹಾದೇವಿಯ ಬಾಳಚರಿತ್ರೆಯಲ್ಲಿ ಕಾಣಬಹುದು.
ಧಾರಣ, ಧ್ಯಾನ, ಸಮಾಧಿ ಇವುಗಳು ಅತ್ಯಂತ ಲಘು ಪ್ರಮಾಣದಿಂದ ಅತ್ಯುನ್ನತ ಹಂತದವರೆಗೂ, ಮಾನವನ ಜೀವನದಲ್ಲಿ ಸಾಧ್ಯವಾಗುತ್ತದೆ ಎಂದು ಸ್ಪಷ್ಟವಾಯಿತು. 'ಸಂಯಮ'ವು ಕೇವಲ ಶುಷ್ಕ ಮನೋವಿಶ್ಲೇಷಣೆಯು ಮಾತ್ರವಲ್ಲ.
ನಿತ್ಯಜೀವನದಲ್ಲಿ, ಧಾರಣ, ಧ್ಯಾನಗಳನ್ನು, ಅವುಗಳ ಪರಿಣಾಮಗಳನ್ನು ಕಾಣಬಹುದು. ವಿಜ್ಞಾನದ ಯಾವುದಾದರೂ ಒಂದು ಶಾಖೆಯಲ್ಲಿ, ಸಮಸ್ಯೆಯೊಂದರ ವಿಶ್ಲೇಷಣೆಗಾಗಿ ಸಂಶೋಧನೆಯನ್ನು ನಡೆಸುತ್ತಿರುತ್ತಾನೆ. ಆ ವೈಜ್ಞಾನಿಕ ಸಮಸ್ಯೆಯು ಪರಿಹಾರವಾಗುವತನಕ, ಮನಸ್ಸು ತವಕಪಡುತ್ತಿರುತ್ತದೆ. ಸಮಸ್ಯೆಯೇ ಅವನನ್ನು ಸೆರೆಹಿಡಿದಿರುತ್ತದೆ, ಪಿಶಾಚಿಯಂತೆ. ಆ ಹಂತದಲ್ಲಿ ಅವನು ಸಮಸ್ಯೆಯನ್ನು ಎದುರಿಸುತ್ತಿದ್ದಾನೆ ಎನ್ನುವುದಕ್ಕಿಂತ, ಸಮಸ್ಯೆಯು ಅವನನ್ನು ಹಿಡಿದಿದೆ ಎನ್ನುವುದು ಉಚಿತ. ಮನಸ್ಸು ಧಾರಣಾವಸ್ಥೆಯಲ್ಲಿದೆ ಎನ್ನಬಹುದು.
ಸಮಸ್ಯೆಯು ಪರಿಹಾರವಾಯಿತು. ಸ್ಫೂರ್ತಿಯ ಮಿಂಚಿನಿಂದ ಪರಿಹಾರವಾಯಿತು. ಆನಂತರ ತಾನು ಕಂಡುಹಿಡಿದುದನ್ನು ವೈಚಾರಿಕವಾಗಿ ಸಿದ್ಧಾಂತ ಮಾಡಬೇಕು. Research thesis ಅನ್ನು ಬರೆಯಬೇಕು. ಆಗ ಕುಳಿತ ಪೀಠಕ್ಕೆ ಅಂಟಿಕೊಂಡು ಬರೆಯತೊಡಗುತ್ತಾನೆ. ಆಗ ಅವನ ಆತುರ, ಅವಸರಕ್ಕೆ ಮಿತಿಯೇ ಇಲ್ಲ. ಊಟ ಬೇಡ, ತಿಂಡಿ ಬೇಡ. ಭದ್ರವಾಗಿ ಕುಳಿತು ತನ್ನ ಸಿದ್ಧಾಂತವನ್ನು ಬರೆದು ಮುಗಿಸುವ ತನಕ ಇತರ ಯಾವ ಯೋಚನೆಗಳೂ ಅವನ ಬಳಿ ಸುಳಿಯುವುದಿಲ್ಲ.
ಮನಸ್ಸು ಧ್ಯಾನಾವಸ್ಥೆಯಲ್ಲಿದೆ ಎನ್ನಬಹುದು.
ಆದರೆ ವಿಜ್ಞಾನಿಯ ಈ ಎರಡೂ ಅವಸ್ಥೆಗಳು ಲೌಕಿಕ ವಿಷಯಗಳಿಗೆ ಸಂಬಂಧವನ್ನು ಹೊಂದಿದವು. ತಾನು ಕಂಡುಹಿಡಿದೆ ಎನ್ನುವ ಹೆಮ್ಮೆಯ ಸ್ವಾರ್ಥವನ್ನು ಮರೆತರೆ, ವೈಯಕ್ತಿಕವಾಗಿ ಮತ್ತೆ ಯಾವ ಸ್ವಾರ್ಥ ಉದ್ದೇಶವೂ ಅವನಿಗಿರಬೇಕಾಗಿಲ್ಲ. ಸಮಸ್ಯೆ ಮತ್ತು ಅದರ ಪರಿಹಾರವು ಅವನ ವೈಯಕ್ತಿಕ ಬಾಳಿಗೆ ಅನಗತ್ಯ. ಆದರೂ ಹೆಮ್ಮೆಯು, ತುಸುಮಟ್ಟಿಗಾದರೂ ಇರುವುದರಿಂದ, ಹಾಗೂ ಧಾರಣಧ್ಯಾನಗಳು ಸಂಪೂರ್ಣವಾಗಿರದೆ ಇರುವುದರಿಂದ, ಸಮಾಧಿಯ ಸ್ಥಿತಿಯನ್ನು ಮನಸ್ಸು ಪಡೆಯುವುದಿಲ್ಲ. ಬಹಿರ್ಲೋಕದ ಪ್ರಜ್ಞೆಯನ್ನು ಸಂಪೂರ್ಣವಾಗಿ ತಾತ್ಕಾಲಿಕವಾಗಿಯಾದರೂ ಕಳೆದುಕೊಳ್ಳುವುದಿಲ್ಲ.
ಮಾರಿಯಮ್ಮ ಎಂಬ ದುರ್ಗಾದೇವಿಯ ಒಂದು ರೂಪು ಇದ್ದೇ ಇದೆ.