೨೫
ಯಾಕೆ ಇಷ್ಟು ಆತಂಕ ಪಡುತ್ತಿದ್ದಾಳೆ? ಬೆಲೂನ್ ಆಗಿದೆ ಶ್ವಾಸಕೋಶ ಅಂತ ಯಾಕೆ ಅನ್ನುತ್ತಿದ್ದಾಳೆ ? ಇಷ್ಟು ತೀವ್ರವಾದ ಆತಂಕಕ್ಕೆ ಕಾರಣವೇನಿರಬಹುದು? ಎಂದು ಯೋಚಿಸುತ್ತಿದ್ದೆ.
'ಊಟವಾದ ಮೇಲೆ ಏನು ಮಾಡಿದೆ ? ಓದುತ್ತಿದ್ದೆಯಾ ? ಮಲಗಿ ಬಿಟ್ಟೆಯಾ ?' ಎಂದು ಕೇಳಿದೆ. 'ಪೇಪರ್ ಓದುತ್ತಾ ಆರಾಂ ಕುರ್ಚಿಯ ಮೇಲೆ ಮಲಗಿದ್ದೆ. ಸ್ವಲ್ಪ ಝಂಪು ಬಂದಿದ್ದರೂ ಬಂದಿದ್ದಿರಬಹುದು. ಯಾಕೆ ನೀವು ಕೇಳಿದ್ದೀರಿ ಎನ್ನುವುದೂ ಗೊತ್ತಾಯಿತು. ರೊಂಪು ಬಂದಿದ್ದಾಗ ಕೆಟ್ಟ ಕನಸು ಬಿದ್ದಿದ್ದರೂ ಇರಬಹುದು. ಆದರೆ ಈಗ ನೆನಪಿಲ್ಲ ಉಸಿರು ಇಳಿಯದೆ ಶ್ವಾಸಕೋಶಗಳು ಬೆಲೂನಿನಂತೆ ಉಬ್ಬುತ್ತಿವೆ ಎಂದು ಹಠಾತ್ತನೆ ತೋರಿತು. ಆಗ ಎಚ್ಚರವಾಗಿಯೇ ಇದ್ದೆ. ತುಂಬಾ ಭಯವೂ ಆಯಿತು. 'ಅಮ್ಮಾ, ಅಮ್ಮಾ ಎಂದು ಕರೆದೆ' ಎಂದಳು.
'ಅಷ್ಟೇ ಕಣೆ ಶೀಲಾ ! ಯಾವುದೋ ಕೆಟ್ಟ ಕನಸು ಬಿದ್ದರಬೇಕು. ದೆವ್ವದ ಕತೆಯನ್ನೋ ಕಳ್ಳನ ಕತೆಯನ್ನೋ ಯಾರೋ ಹೇಳಿದ್ದಿರಬೇಕು. ಅದು ಕನಸಿನಲ್ಲಿ ಚಿತ್ರವಿಚಿತ್ರವಾಗಿ ರೂಪು ತಾಳಿ ಗಾಬರಿ ಪಡೆಸಿರಬೇಕು. ಈಗ ಟ್ರಾಂಕ್ವಿಲೈಸರ್ ಮಾತ್ರೆಯೊಂದನ್ನು ಕೊಡುತ್ತೇನೆ, ಅದನ್ನು ನುಂಗು, ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೋ, ರಾತ್ರಿ ಅರೆಹೊಟ್ಟೆ ಊಟಮಾಡು' ಎಂದು ಧೈರ್ಯವನ್ನು ಹೇಳಿ ಹಿಂತಿರುಗಿದೆ. ವಿವರಣೆಯು ಸರಿ ಎಂದೇನೂ ನನಗೆ ಅನ್ನಿಸಿರಲಿಲ್ಲ. ಆದರೆ ಬೇರೆ ಯಾವ ಕಾರಣವೂ ತೋಚಿರಲಿಲ್ಲ. ಮತ್ತೇನು ತಾನೆ ಮಾಡಲು ಸಾಧ್ಯ
ಇದಾದ ಮೇಲೆ ಶ್ವಾಸಕೋಶಗಳು ಬೆಲೂನ್ ಉಬ್ಬುವಂತಾಗುವುದು ಆರು ದಿನಗಳಿಗೊಮ್ಮೆ ಮೂರು ದಿನಗಳಿಗೊಮ್ಮೆ ಬರಲಾರಂಭವಾಯಿತು. ನಗುನಗುತ್ತಿದ್ದ ಸ್ವಲ್ಪ ಜುಲುಮಿನ ಶೀಲಾ, ಈಗೀಗ ಮೇಲೆ ಕಪ್ಪೆ ಬಿದ್ದು ಅಂಜಿದವರಂತೆ, ಆತಂಕಮಯವಾಗಿದ್ದಳು.
'ಮನೋವೈದ್ಯರ ಸಲಹೆಯು ಅಗತ್ಯ. ಹೀಗೆಯೇ ಇದನ್ನು ಬಿಡಬಾರದು. ಮುಂದೆ ಇತರ ಮಾನಸಿಕ ಬೇನೆಗಳು ಜತೆ ಬಂದು ತೊಡರಿಕೊಳ್ಳಬಹುದು' ಎಂದು ಆಬ್ರಹಂನಿಗೂ ಅವನ ಹೆಂಡತಿಗೂ ಇನ್ನಿಲ್ಲದ ಹಾಗೆ ಹೇಳಿದೆ. ಹಲವಾರು ನಿದರ್ಶನಗಳನ್ನೂ ಕೊಟ್ಟೆ. ದಂಪತಿಗಳು ಒಪ್ಪಲೇ ಇಲ್ಲ. 'ಬೇಗ ಮದುವೆಯನ್ನು ಮಾಡಿ ಬಿಡ್ತೀನಿ. ಕೈಲೊಂದು ಸೊಂಟದಲ್ಲೊಂದು ಮಗುವಿದ್ದರೆ, ಉಸಿರಿಳಿಯುವುದೂ ಏರುವುದೂ, ಕೋಶಗಳು ಬೆಲೂನ್ ಆಗುವುದೂ ಎಲ್ಲವೂ ಮರೆತು ಹೋಗುತ್ತೆ' ಎಂದವರು ಖಡಾಖಂಡಿತವಾಗಿ ಹೇಳಿಬಿಟ್ಟರು.