ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೬

ಮನಮಂಥನ

“ಶೀಲಾಳ ಆತಂಕವು ಅತ್ಯುಗ್ರವಾಗಿದೆ. ತೀವ್ರ ತಳಮಳದ ಹಂತಕ್ಕೆ ಏರಿದೆ. ಹೀಗೆಯೇ ಬಿಟ್ಟರೆ 'ಡಿಪ್ರೆಷನ್' ತಗುಲಿಕೊಳ್ಳಬಹುದು. ಈ ಸ್ಥಿತಿಯಲ್ಲಿ ಮದುವೆಯನ್ನು ಮಾಡಿದರೆ ಇವೆಲ್ಲಾ ಅತ್ಯುಲ್ಬಣವಾಗಲೂ ಬಹುದು. ತುಂಬಾ ಹುಷಾರಾಗಿರಬೇಕು" ಎಂದು ಹೇಳಿದೆ. ಯಾಕೆ ಇವರು ಅಲಕ್ಷ್ಯ ಮಾಡುತ್ತಿದ್ದಾರೆ ಎಂದು ಕಸಿವಿಸಿಯೂ ಆಯಿತು. ಕರ್ತವ್ಯವನ್ನು ನಾನು ಮಾಡಿದ್ದಾಯಿತು, ಮಿಕ್ಕಿದ್ದು ಅವರವರ ಪೂರ್ವಜನ್ಮದ ಕರ್ಮ ಎಂದು ವೇದಾಂತವನ್ನಂದುಕೊಂಡೆ.

ಇದಾದ ಒಂದೆರಡು ವರ್ಷಗಳು, ಶೀಲಾ ಈ ರೀತಿ ನರಳುತ್ತಲೇ ಇದ್ದಳು. ಇದೆಲ್ಲಾ ಸೈಕೋಜನಿಕ್ ಅಂತ ನನಗೂ ಅನ್ನಿಸುತ್ತೆ ; ಆದರೆ ಗಾಣಿಗಿತ್ತಿ ಅಯ್ಯೋ ಎಂದ ಹಾಗೆ, ಹಾಗನ್ನಿಸುವುದರಿಂದ ಯಾವ ಗುಣವೂ ಆಗಿಲ್ಲ ; ಎಂದು ಅನ್ನುತ್ತಿದ್ದಳು. ಮನೋವೈದ್ಯರನ್ನು ಕಾಣಲು ಅವಳಿಗೂ ಇಷ್ಟವಿರಲಿಲ್ಲ.

ಶ್ರೀಮಂತನಾದರೂ ಆಬ್ರಹಂನಿಗೆ ಅನುಕೂಲವಾದ ಅಳಿಯನನ್ನು ಷಿಕಾರಿ ಮಾಡಲು ಎರಡು ವರ್ಷಗಳು ಹಿಡಿಯಿತು. ವೈಭವದ ಮದುವೆಯನ್ನು ಅದ್ದೂರಿಯಿಂದ ಮಾಡಿದರು. ವಿವಾಹದ ಸಂಭ್ರಮಗಳಲ್ಲಿ ಶೀಲಾ ಅನಾಸಕ್ತಿಯನ್ನೇನೂ ತೋರಿಸಲಿಲ್ಲ. ಆದರೆ ಅತ್ತೆಯ ಮನೆಗೆ ಹೋದಮೇಲೆ, ಬಸಿರು ಬಾಣಂತನಗಳು ಆಗುವಾಗ ಮನಃಪಲ್ಲಟವು ಆಗುತ್ತೇನೋ ಎಂದು ಶಂಕಿಸುತ್ತಲೇ ಇದ್ದೆ.

ಅತ್ತೆಯ ಮನೆಗೆ ಹೋಗಿ ಕೆಲವು ತಿಂಗಳುಗಳು ಸಂಸಾರವನ್ನು ನಡೆಸಿದಳು. ಕೆಲವು ದಿನಗಳು ತೌರಿನ ವಾಸಕ್ಕೆಂದು ಬಂದಿದ್ದಾಗ, ಅತ್ತೆಯ ಮನೆಯಲ್ಲಿ ಶ್ವಾಸಕೋಶಗಳು ಬೆಲೂನ್ ಆಗುವ ಘಟನೆಗಳು ಒಂದೆರಡು ಬಾರಿ, ಬಹಳ ಹಗೂರಾಗಿ, ಆಗಿತ್ತು. ಆಮೇಲಾಮೇಲೆ ಕಡಿಮೆಯಾಗುತ್ತ ಬಂತು. ಈಗ ಎರಡು ಮೂರು ತಿಂಗಳುಗಳಿಂದ ಹಾಗೆ ನರಳಿಯೇ ಇಲ್ಲ' ಎಂದು ಹೇಳಿದಳು. ಕೈಲೊಂದು ಮಗುವಿದೆ. ಸೊಂಟದಲ್ಲೊಂದು ಮಗು ಇದೆ. ನೆಮ್ಮದಿಯಾಗಿಯೇ ಇದಾಳೆ, ಶೀಲಾ.

ಅಂದರೆ ಆತಂಕದಿಂದಾದ ನರಳುವಿಕೆಯು, ಕೆಲವೊಮ್ಮೆ ತನ್ನಷ್ಟಕ್ಕೆ ತಾನೇ ಸರಿಹೋಗುವುದೂ ಉಂಟು. ಆದರೆ ಇದು ವಿರಳವಾಗಿ ಆಗುತ್ತದೆ. ಈ ಆಸೆಯನ್ನು ಇಟ್ಟುಕೊಂಡು ಮಾಡಬೇಕಾದ ಮನೋಚಿಕಿತ್ಸೆಯನ್ನು ಸಕಾಲದಲ್ಲಿ ಮಾಡಿಸದೇ ಇದ್ದರೆ, ಮುಂದೆ ಬೇರೂರಿದ ಇತರ ಮಾನಸಿಕ ಬೇನೆಗಳು ಕಾಣಿಸಿಕೊಳ್ಳುತ್ತವೆ. ಆಗ ಚಿಕಿತ್ಸೆಯೂ ಸುಲಭವಾಗಿರುವುದಿಲ್ಲ. ಆದಕಾರಣ ಮುಂಜಾಗ್ರತೆಯಾಗಿ ಎಚ್ಚರವಹಿಸುವುದು ಜಾಣತನ