ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೩೨
ಮನಮಂಥನ

ವಶಪಡಿಸಿಕೊಳ್ಳುವುದು.

ಪಂಚಭೂತಗಳಿಂದ ಬ್ರಹ್ಮಾಂಡವು ರಚಿತವಾಗಿದೆ. ಪಂಚಭೂತಗಳಿಂದಲೇ ನಮ್ಮ ದೇಹವೂ ರಚಿತವಾಗಿದೆ. ಮೂಲಭೂತಗಳಾದ ಇವುಗಳ ಮೇಲೆ 'ಸಂಯಮ'ವನ್ನು ಮಾಡಿದರೆ, ಅವುಗಳ ರಚನೆಯನ್ನು ವ್ಯತ್ಯಾಸ ಮಾಡಬಹುದು, ಮೇಲೆ ಹೇಳಿದ ಎಂಟು ತೆರನಾಗಿ, ಇದು ಋಷಿಗಳಂದುದು.

ಪಂಚಭೂತಗಳಿಂದ ಪ್ರಪಂಚವು, ಅಥವಾ ನಾವು ಸೃಷ್ಟಿಸಲ್ಪಟ್ಟಿರುವುದು, ಎನ್ನುವುದು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಇಂದು ಸಾಧ್ಯವಿಲ್ಲ. ಅಂದಮೇಲೆ ಅಷ್ಟ ಸಿದ್ಧಿಗಳೂ ಅರ್ಥವಾಗುವುದಿಲ್ಲ.

ಆದರೂ ಹೀಗನ್ನಿಸುತ್ತದೆ :-ಸಂಯಮವನ್ನು ಸಾಧಿಸಿದ ಮನಸ್ಸು ಅಥವಾ ಚಿತ್ತವು, ಮನಸ್ಸೆಂಬ ಶಕ್ತಿಯನ್ನು ಅತ್ಯಮೋಘವಾಗಿ ಅಪರಿಮಿತವಾಗಿ ಹೊರಹೊಮ್ಮಿಸುತ್ತದೆ. ಅಣುವನ್ನು ಸಿಡಿಸಿದರೆ ಅದ್ಭುತವಾದ ಶಕ್ತಿಯು ಉತ್ಪನ್ನವಾಗುವಂತೆ. ಅಂತಹ ಶಕ್ತಿ ಬಣದ ಮೇಲೆ ಹತೋಟಿಯನ್ನು ಮನಸ್ಸಿನದೇ ಆದ, ಆದರೂ ಆ ಸ್ಥಿತಿಯಲ್ಲಿ ಹೊರತಾಗಿರುವ, ಹಿರಿಯ ಅಂಶವು ಹೊಂದಿರಲು ಸಾಧ್ಯ. ಅಂತಹ ಹತೋಟಿಯಿಂದ, ಅಲೌಕಿಕವಾದ ಅತ್ಯದ್ಭುತ ಶಕ್ತಿಯಿಂದ, ದೇಹವನ್ನು ಹೇಗೆಂದರೆ ಹಾಗೆ ಕುಣಿಸಬಹುದು. ಅಣಿಮ, ಮಹಿಮ, ಗರಿಮ, ಲಘಿಮ, ಪ್ರಾಪ್ತಿ ಈ ಐದೂ ದೇಹಕ್ಕೆ ಪ್ರಾಯಶಃ ಅನ್ವಯಿಸುತ್ತದೆ. ಮಿಕ್ಕ ಮೂರೂ ಮನಸ್ಸಿನ ಆ ಸ್ಥಿತಿಯಲ್ಲಿ ಪಡೆದ ಹತೋಟಿಗೆ ಒಳಪಡುತ್ತವೆ. ಹೀಗೆ ವಿಶ್ಲೇಷಿಸಿದರೆ, ಅಣಿಮಾದಿ ಸಿದ್ಧಿಗಳನ್ನು ಅರ್ಥಮಾಡಿಕೊಳ್ಳಬಹುದು. ವೈಜ್ಞಾನಿಕವಾಗಿ ಒಪ್ಪಲೂಬಹುದು.

ಸಾಮಾನ್ಯ ಜೀವನದಲ್ಲಿ ಪ್ರತ್ಯಕ್ಷವಾಗಿ ಕಾಣುವ ಕೆಲವು ನಿದರ್ಶನಗಳನ್ನು ವಿಶ್ಲೇಷಿಸುವ.

ಅಣಿಮ : ಮನಸ್ಸು ಅತ್ಯಂತ ಖುಷಿಯಿಂದಿರುವಾಗ, ತೌರಿಗೆ ಮೊದಲಬಾರಿ ಹೋಗುವ ಹೆಣ್ಣು ಮಗಳಂತೆ, ದೇಹವು ಹೂ ಹಗುರವಾದಂತಿರುತ್ತದೆ. ನಡಿಗೆಯು ಝಿಗಿ ಝಿಗಿ ಎಂಬಂತಿರುತ್ತದೆ. ಆಗ ಈ ಜನ್ಮದಲ್ಲಿನ ವ್ಯಕ್ತಿಯು, ಹುಟ್ಟು ತೌರಿಗೆ ಹೋಗುವಂತೆಯೇ ಸಂಭ್ರಮ ಪಡಬೇಕು, ಹಗುರ ನಡಿಗೆಯಿಂದ ಝಗಿ ಝಗಿ ನಡೆಯಬೇಕು. ದೇಹದಿಂದ ಸಂಬಂಧವನ್ನು ಇಂತಹ ಪರಿಸ್ಥಿತಿಯಲ್ಲಿರುವ ಮನಸ್ಸು ಹೂ ಹಗುರಾಗಿ ನಡೆಸುತ್ತದೆ ಎನ್ನಲು ಅಡ್ಡಿಯಿಲ್ಲ.

ಮಹಿಮ :-ಅಣಿಮ ಸಿದ್ಧಿಯನ್ನು ಸಾಧಿಸಿದ ಅಪಾರ ಶಕ್ತಿಯು ಮಹಿಮವನ್ನು