ಅಲೌಕಿಕವಾದ, ವಿಚಾರಾತೀತವಾದ, ಈ ಅನುಭವವನ್ನು ಹೇಗೆ ವೈಜ್ಞಾನಿಕವಾಗಿ ಇಂದು ಸಮರ್ಥಿಸಲಿ? ಮುಂದೆ ಕಾಲಗತಿಯಲ್ಲಿ, ಚಿರಂಜೀವಿಗಳು ಸಮರ್ಥಿಸುತ್ತಾರೆ ಎನ್ನುವ ದೃಢ ನಂಬಿಕೆಯು ಬೇರೂರಿದೆ, ನನ್ನಲ್ಲಿ.
ಈಶತ್ವ :-ನವ್ಯ ನೂತನ ಸೃಷ್ಟಿಯನ್ನು ಮಾಡುವಂತಹ ಮಹಿಮೆಯನ್ನು ಈಶತ್ವ ಎನ್ನತ್ತಾರೆ.
ಕಾಲಕಾಲಕ್ಕೂ ದೇಶ, ವಿದೇಶಗಳಲ್ಲಿ, ವೈಜ್ಞಾನಿಕ ಸಂಶೋಧನೆಗಳನ್ನು, ಪರೀಕ್ಷಾ ಪ್ರಯೋಗಗಳಿಂದ ವಿಜ್ಞಾನಿಗಳು ನಡೆಸುತ್ತಾರೆ, ತುಂಬ ಶ್ರದ್ಧೆಯಿಂದ ; ಧಾರಣ, ಧ್ಯಾನಗಳಿಂದ ನವ್ಯ ಸಿದ್ಧಾಂತವನ್ನು ಪ್ರಚಾರ ಮಾಡುತ್ತಾರೆ. ಸಹವಿಜ್ಞಾನಿಗಳು 'ಆಹಾ ! ಎಷ್ಟು ಚೆಂದ ! ಎಷ್ಟು ಸುಲಭ ! ಎಷ್ಟು ದಿಟ' ಎಂದು ಅಚ್ಚರಿ ಪಡುತ್ತಾರೆ. ಒಂದೆರಡು ದಶಕಗಳಲ್ಲಿ ಹೋರಿ ವಿಜ್ಞಾನಿಗಳು ಸ್ಫೂರ್ತಿಯಿಂದ ಸಂಶೋಧನೆಗಳನ್ನು ನಡೆಸಿ, ಹಿಂದೆ ಒಪ್ಪಿಕೊಳ್ಳಲಾಗಿದ್ದ ಸಿದ್ಧಾಂತಗಳು ಅಸಮರ್ಥನೀಯ. ತಿರುಳಿಲ್ಲದುದು ; ಎಂದು ಸಿದ್ಧಾಂತವನ್ನು ಮಾಡುತ್ತಾರೆ. ಅವರೂ ಕಾಲ ಗತಿಯಲ್ಲಿ ನಿರ್ನಾಮವಾಗುತ್ತಾರೆ. ಆದರೆ ಆ ಕಾಲದ ಧಾರಣ ಧ್ಯಾನಗಳಿಂದ, ಅವರುಗಳು ಮಾಡಿದ ಸಿದ್ಧಾಂತವು ವೈಜ್ಞಾನಿಕ ದೇಶದಲ್ಲಿ 'ಈಶತ್ವ ವನ್ನು ಪಡೆದಿರುತ್ತದೆ. ನವ್ಯ ನೂತನ ಸೃಷ್ಟಿಯ ಪರಂಪರೆಯೇ ಈಶತ್ವ, ಹಿಂದೆ, ಇಂದು, ಮುಂದು, ಎನ್ನುವುದನ್ನೆಲ್ಲಾ ಒಂದೇ ಎಂಬ ಸಿದ್ಧಾಂತವನ್ನು ಅರಿಯುವುದೇ ಈಶತ್ವ, ಎನ್ನಬಹುದು.
ವಶಿತ್ವ:- ಚರಾಚರ ಪ್ರಪಂಚವನ್ನು ತನ್ನ ಅಧೀನಕ್ಕೆ ವಶಮಾಡಿಕೊಳ್ಳುವುದು. ಯಮ ನಿಯಮಾದಿಗಳಿಂದ, ಮತ್ತು 'ಸಂಯಮ'ದಿಂದ, ಮನಸ್ಸಿನ ಹಿರಿಯಂಶವೊಂದನ್ನು ಅತ್ಯುನ್ನತ ಶಕ್ತಿಯ ಹಂತಕ್ಕೆ ಏರಿಸಿದನು. ಪ್ರಪಂಚವನ್ನು ವಶಮಾಡಿಕೊಂಡ, ಎಂದರೆ ಚಕ್ರಾಧಿಪತಿಯಾದ ಎನ್ನುವ ಲೌಕಿಕ ಅರ್ಥವು ಬರುವುದಿಲ್ಲ. ಪ್ರಪಂಚದಲ್ಲಿರುವ ಯಾವುದೂ ಆತನನ್ನು ಪ್ರಭಾವಿಸಲಾರದು, ಕದಲಿಸಲಾರದು, ಹಾಗಾಗಿ ವಶಿತ್ವವನ್ನು ಪಡೆದಿದ್ದಾನೆ ಎನ್ನಬೇಕು.
ಅಣಿಮಾದಿಯಾದ ಅಷ್ಟ ಸಿದ್ಧಿಗಳನ್ನು ಈ ರೀತಿಯಲ್ಲಿ ಸಮರ್ಥಿಸಬಹುದು. ಆದರೆ ೭೦ ಕಿಲೋಗ್ರಾಂ ದೇಹವು ಒಂದು ಗ್ರಾಮಿಗೆ ಇಳಿಯುತ್ತದೆ ; ಅಥವಾ ಹತ್ತು ಮೈಲಿಗಳಷ್ಟು ಮೂರೂ ದಿಕ್ಕುಗಳಲ್ಲಿ ಹರಡುತ್ತದೆ, ಎಂದು ವಾಕ್ಯಾರ್ಥ ಮಾಡುವುದು, ಪೆಚ್ಚುತನವೆನಿಸುತ್ತದೆ.
ರೂಪ ಲಾವಣ್ಯ ಬಲ ವಜ್ರ ಸಂಹನನತ್ವಾನಿ ಕಾಯ ಸಂಪತ್
ಸಂಯಮದಿಂದ ದೇಹಕ್ಕೆ ರೂಪ, ಲಾವಣ್ಯ, ಬಲ, ದೃಢತೆಗಳು ಲಭಿಸುತ್ತದೆ.