ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೩೯

ರಾಸಾಯನಿಕವಾಗಿ ತಯಾರಿಸಿದ ಸಿದೌಷಧಿಗಳು. ಶೀತ, ಉಷ್ಣ ಅಥವಾ ಕಾವು, ಥಂಡಿ ಇತ್ಯಾದಿ ಭೌತ ಪ್ರಕಾರಗಳನ್ನು ಬಳಸುವುದು. ಲೇಹ, ಚೂರ್ಣ ಗುಗ್ಗುಳ ಇತ್ಯಾದಿ ಮಿಶ್ರ ಔಷಧಿಗಳು ಕಾಯಕಲ್ಪವನ್ನು ಮಾಡುವ ಔಷಧಿಗಳು.

ಇಂತಹವುಗಳಲ್ಲಿ ಹಲವು 'ಸಿದ್ಧಿ'ಯನ್ನು ನೀಡುತ್ತದೆ. ಸೋಮರಸವೆಂಬ ವೇದದ ಕಾಲದಿಂದ ಪ್ರಸಿದ್ಧವಾಗಿರುವ ಔಷಧಿಯು, ಹಿಮಾಲಯದಲ್ಲಿ ಕೆಲವು ಗಿಡಗಳ ಎಲೆಗಳ ಮೇಲೆ ಬೆಳೆಯುವ ಬೂಷ್ಟು ಎಂದು, ವೈಜ್ಞಾನಿಕವಾಗಿ ಇಂದು ಅನುಮಾನಿಸಲ್ಪಟ್ಟಿದೆ. ಮೆಕ್ಸಿಕೋ ದೇಶದಲ್ಲಿ ಪುರಾತನ ಕಾಲದಿಂದಲೂ ಪಿಯೋಟಲ್ ಎಂಬ ಮೂಲಿಕೆಯನ್ನು ಪವಿತ್ರ ಕಾರ್ಯವೆಂದು ಸೇವಿಸುತ್ತಿದ್ದರು. ಮೆಸ್ಕೂಲಿನ್ ಎಂಬ ಔಷಧಾಂಶವು Peoytl ನಲ್ಲಿದೆ. ಭ್ರಮಾಕಾರಕ ಔಷಧಿ ಇದು. ಸೇವಿಸಿದ ನಂತರ ಮನಸ್ಸು ಈ ಲೋಕವನ್ನು ಮರೆತು, ಅತಿ ಸುಂದರವಾದ, ಅತಿ ಸುಖವೀವ ಇನ್ನಾವುದೋ ಭ್ರಮಾಲೋಕದಲ್ಲಿ ವಿಹರಿಸುತ್ತದೆ. ಆ ಸ್ಥಿತಿಯಲ್ಲಿ ಭ್ರಮಾಲೋಕವೇ ಸತ್ಯವಾದುದು, ಮಿಕ್ಕ ಬಾಳು ಮಿಥ್ಯ ಎಂದನಿಸುತ್ತದೆ. ಅಮಲು ಇಳಿದ ಮೇಲೆ, ಅತಿ ಸುಂದರ ಸುಖದ ಸ್ಮರಣೆಯು ಸ್ವಲ್ಪ ಉಳಿದಿರುತ್ತದೆ. ತಿರುಗಿ ಆ ಅನುಭವವನ್ನು ಪಡೆಯುವ ಎಂಬ ಹಂಬಲವಿರುತ್ತದೆ. ಅಮಲು ಕೈವಲ್ಯವನ್ನು ದೊರಕಿಸಿತು ಎನ್ನುವ ಭ್ರಮೆಯು ಇರುತ್ತದೆ.

ಸುಮಾರು ೨೩೦೦ ವರ್ಷಗಳ ಹಿಂದೆ, Hallucinogens ಎಂಬ ಹೆಸರು ಇರಲಿಲ್ಲ. ಆದರೂ ಔಷಧಿಗಳಿಂದ 'ಸಿದ್ಧಿ'ಯನ್ನು ಅಂದರೆ ಅಲೌಕಿಕ ಅನುಭವಗಳನ್ನು ಹೊಂದಬಹುದು ಎಂದು ಮಹರ್ಷಿಗಳು ಹೇಳಿದ್ದಾರೆ. ಅಂದರೆ ಆ ಕಾಲದಲ್ಲಿ ಇಂತಹ ಔಷಧಿಗಳ ಜ್ಞಾನವು ಇದ್ದಿರಲೇಬೇಕು. ಸೋಮ ಎಂಬುದನ್ನು ಬಿಟ್ಟರೆ ಈ ತೆರನ ಔಷಧಿಗಳು ಯಾವುವು ಇದ್ದುವು? ಗಾಂಜಾ, ಅಫೀಮು, ಹುದುಗುನೊರೆಗೂಡಿದ ದ್ರಾಕ್ಷಾರಸ, ಇತ್ಯಾದಿಗಳು ಇದ್ದುವು.

(ಇ) ಮಂತ್ರಗಳು :-ಬಾಲ್ಯದಿಂದಲೂ ಮನೆಯಲ್ಲಿ, ಕಲಿಕೆಯಿಂದ, ಹಾಗೂ ಮನನದಿಂದ, ಪ್ರತಿಯೊಬ್ಬ ವ್ಯಕ್ತಿಯೂ ಮನೆದೇವರು, ಕುಲದೇವತೆ ಎನ್ನುವ ಕಲ್ಪನೆಯನ್ನು ರೂಢಿಸಿಕೊಂಡಿರುತ್ತಾನೆ. ವಿಚಾರಪರ ಮನಸ್ಸಿಗೆ ಇದು ಒಪ್ಪದೆ ಇರಬಹುದು. ಆದರೆ ರೂಢಿಗತವಾದ ಈ ಕಲ್ಪನೆಯು ಸ್ಥಿರವಾಗಿರುತ್ತದೆ.

ಮನೆದೇವರು, ಇಷ್ಟದೇವತೆ, ಎಂದಮೇಲೆ ಅದನ್ನು ಆರಾಧಿಸಲು ಎರಡು ಮಾರ್ಗಗಳಿರುತ್ತವೆ. ಬಹಿರಂಗವಾಗಿ, ಕುಲದವರು ರೂಢಿಸಿಕೊಂಡು ಬಂದ ಪೂಜಾವಿಧಾನ, ಅಭಿಷೇಕ, ಅರ್ಚನೆ, ಬಲಿ, ನೈವೇದ್ಯ ಇತ್ಯಾದಿಗಳು,