ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೪೦
ಮನಮಂಥನ

ಅಂತರಂಗವಾಗಿ, ಗುರುಗಳಿಂದ ಅಥವಾ ತಂದೆಯಿಂದ ಗುಪ್ತವಾಗಿ ಕಲಿತುಕೊಂಡ ಮಂತ್ರದ ಜಪ. ಜಪಿಸಲ್ಪಡುವ ಮಂತ್ರಗಳು ಸೂತ್ರಗಳಂತೆ ಪುಟ್ಟದಾಗಿರುತ್ತವೆ. ಸಾಂಕೇತಿಕವಾಗಿಯೂ ಇರುತ್ತವೆ. ಮೇಲಿಂದ ಮೇಲೆ ಪುನಃ ಪುನಃ ಈ ಮಂತ್ರಗಳನ್ನು ಜಪಿಸಿದರೆ, ಆಗ ಮನಃಶಕ್ತಿಯು, ಚಂಚಲತೆಯನ್ನು ಸ್ವಲ್ಪ ಮಟ್ಟಿಗಾದರೂ ಕಳೆದುಕೊಳ್ಳುತ್ತದೆ. ದೃಢವಾಗುತ್ತದೆ. ವ್ಯಾಯಾಮವೆಂದಲ್ಲದಿದ್ದರೂ ಅಂಚೆಪೇದೆಯು ಆರೆಂಟು ಮೈಲಿಗಳು ದಿನಾಲೂ ನಡೆಯಬೇಕು. ಬೇಜಾರಿನಿಂದ ನಡೆದರೂ ಅವನ ಮಾಂಸಖಂಡಗಳು, ತೊಡೆಯ ಮಾಂಸಗಳು, ಬಲಗೊಳ್ಳುತ್ತದೆ. ಅದರಂತೆಯೇ ಮಂತ್ರಗಳನ್ನು ಅರ್ಥವಾಗಲೀ, ಆಗದೇ ಇರಲಿ, ಪುನಃ ಪುನಃ ಜಪಿಸಿದರೆ, ಮನಸ್ಸೆಂಬ ಶಕ್ತಿಯು ಬಲಗೊಳ್ಳುತ್ತದೆ.

ಧಾರಣ, ಧ್ಯಾನ ಇವುಗಳಿಗೆ ಸಮನಿಲ್ಲದಿದ್ದರೂ, ಮಂತ್ರ ಪಠಣವು ಅದೇ ರೀತಿಯ ಫಲವನ್ನು ಅಲ್ಪ ಸ್ವಲ್ಪ ಪ್ರಮಾಣದಲ್ಲಿಯಾದರೂ ಖಂಡಿತವಾಗಿ ನೀಡುತ್ತದೆ.

ಅಂದ ಮೇಲೆ, ಬಾಲ್ಯದಿಂದಲೂ ಮನಸ್ಸಿನಲ್ಲಿ ನೆಲೆಸಿ ಪ್ರತಿಷ್ಠವಾಗಿರುವ, ಇಷ್ಟದೇವತೆಯೆಂಬುದು ಸಿದ್ಧಿಗಳನ್ನು ನೀಡಲೇಬೇಕು. ಏಕೆಂದರೆ ಮನಸ್ಸಿಗೆ ಇಷ್ಟು ದೇವತೆಯೆಂಬುದು ದೃಢವಾದ ಊರೆಗೋಲಾಗಿರುತ್ತದೆ. ಆಗ ಮನಸ್ಸು ತುಂಬು ನಂಬುಗೆಯಿಂದ ಯೋಚಿಸಿ, ನಿರ್ಧರಿಸಿ ಕಾರ್ಯವನ್ನು ಮಾಡಿಸುತ್ತದೆ. ಮನಸ್ಸಿಗೆ ಧೈರ್ಯವು ಲಭಿಸಿರುತ್ತದೆ. ಚಂಚಲತೆಯು ಬಹಳಷ್ಟು ಕಡಿಮೆಯಾಗಿರುತ್ತದೆ, ಮನೆದೇವರು, ಇಷ್ಟದೇವತೆ, ಕುಲದೇವತೆ, ಇತ್ಯಾದಿಗಳಲ್ಲಿ ಎಷ್ಟು ನಂಬಿಕೆಯು ಇರುತ್ತದೆಯೋ, ಅದಕ್ಕೆ ಅನುಗುಣವಾಗಿ, ಆಯಾ ಮಂತ್ರಗಳ ಜಪವು ಮನಸ್ಸನ್ನು ಏಕಾಗ್ರ ಚಿತ್ತತೆಯತ್ತ ನಡೆಸುತ್ತದೆ. ಅದನ್ನನುಸರಿಸಿ ಇಷ್ಟಾರ್ಥಗಳ ಸಿದ್ಧಿಯೂ ಲಭಿಸುತ್ತದೆ.

ತಾಂತ್ರಿಕ ಸಾಧನೆಗಳಲ್ಲಿ ಮಂತ್ರ ಪಠಣ ಮತ್ತು ಜಪಗಳು ಮುಖ್ಯವಾದ ಒಂದು ಅಂಶ. ಬಹಿರಂಗವಾಗಿ ಪೂಜಾ ವಿಧಾನಗಳು, ಇತರರಿಗೆ ಬೀಭತ್ಸವಾಗಿ ಕಾಣಬಹುದು. ಆದರೆ ಮನಸ್ಸು ತುಂಬು ನಂಬುಗೆಯಿಂದ ಧೈರ್ಯವನ್ನು ಹೊಂದಿರುತ್ತದೆ. ಆದಕಾರಣ ಅವರುಗಳಿಗೂ ಇಷ್ಟಾರ್ಥವು ನೆರವೇರುತ್ತದೆ.

ತಪಸ್ಸು :-ತಪಃ ಎಂದರೆ ಕುದಿಯುವುದು, ಪರಿತಪಿಸುವುದು ಎಂದರೆ ತೀವ್ರವಾಗಿ ಹಂಬಲಿಸುವುದು, ತಪಸ್ ಎಂದರೆ, ಲೌಕಿಕವಾದ ಅಥವಾ ಅಲೌಕಿಕವಾದ ಯಾವುದಾದರೂ ಒಂದು ಸಾಧನೆಗೆ, ಮನಸ್ಸು ಕುತ ಕುತ ಕುದಿಯುವುದು. ಅಕ್ಕಿಯನ್ನು ಹಾಗೆಯೇ ತಿನ್ನಲಾಗುವುದಿಲ್ಲ. ಆದರೆ ನೀರಿನಲ್ಲಿ