೨೯
ಮೇಲೆ ಗುಡೇಟು ಅಂತ ಆತಂಕದ ಕಾರಣವು ಸಿಗಬಹುದು, ಎಂದುಕೊಂಡೆ. ನೇರವಾಗಿ ಪ್ರಶ್ನಿಸಿದೆ. 'ಯಾವುದಾದರೂ ಸೈತಾನನ ಕಾಟದಿಂದ ಹೀಗಾಗುತ್ತಿರಬಹುದೇ ? ಒಂದೆರಡು ವರ್ಷಗಳಿಂದ ಹೀಗಾಗುತ್ತಿದೆ ಎಂದಿರಿ. ಒಂದೆರಡು ವರ್ಷಗಳ ಹಿಂದೆ ಎಲ್ಲಿಗಾದರೂ ಹೋಗಿದ್ದಾಗ ಸೈತಾನ್ ಮೆಟ್ಟಿಕೊಂಡಿರಬಹುದೇ ? ಹೀಗೆ ಏಕೆ ಕೇಳ್ತಿನಿ ಅಂದರೆ, ನಿಮ್ಮ ಗಂಟಲಿನಲ್ಲಿ ಯಾವ ದೋಷವೂ ಇಲ್ಲ. ನರನಾಡಿ ಮಾಂಸಖಂಡ ಎಲ್ಲವೂ ಲಕ್ಷಣವಾಗಿವೆ. ಅದಕ್ಕೆ' ಎಂದು. ಆಕೆಯ ಅನಿರೀಕ್ಷಿತ ಉತ್ತರವು ನನಗೂ ಅಚ್ಚರಿಯನ್ನುಂಟುಮಾಡಿತು.
'ಇವರಿಗೆ ಎಷ್ಟೋ ಹೇಳಿದೆ. ಆ ಮನೆಗೆ ಹೋಗುವುದು ಬೇಡ ಅಂತ. ಆದರೆ ಇವರು ಕೇಳಬೇಕಲ್ಲ ! ಒಳ್ಳೆಯವರಾದ, ತಿಳಿದ ನೆರೆ ಹೊರೆ, ನಮ್ಮವರೆಲ್ಲಾ ಇರುವ ಬಡಾವಣೆ. ಮನೆಯೂ ಅನುಕೂಲವಾಗಿದೆ, ಬಾಡಿಗೆಯೂ ದುಬಾರಿಯಾಗಿಲ್ಲ. ನಲ್ಲಿಯ ನೀರು ನಿಂತರೂ ಬಾವಿಯ ಸೌಕರ್ಯವಿದೆ. ನಮ್ಮ ದುಕಾನಿಗೂ ಹತ್ತಿರವಿದೆ. ಅಲ್ಲಿಗೆ ಹೋಗೋಣ ಎಂದರು. ಅವರು ಹೇಳಿದ್ದೇನೋ ದಿಟ. ಆಗಿದ್ದ ಹಳೆ ಮನೆಯಿಂದ ಮಧ್ಯಾಹ್ನದ ಊಟವನ್ನೂ ದುಕಾನಿಗೆ ಡಬ್ಬಿಯಲ್ಲಿ ಕಳಿಸಬೇಕು. ಹತ್ತಿರ ಮನೆಯಿದ್ದರೆ, ಹೊತ್ತಿಗೆ ಸರಿಯಾಗಿ ಮನೆಗೆ ಬಂದು ಬಿಸಿ ಬಿಸಿಯಾಗಿ ಉಣ್ಣಬಹುದು ಎಂದು ಮನಸ್ಸಿಗೆ ಹೊಳೆಯಿತು. ಆದ್ದರಿಂದ ಹೂ, ಅಂತ ಒಪ್ಪಿ ಹೊಸ ಮನೆಗೆ ಹೋದೆವು. ಅಲ್ಲಿಗೆ ಹೋಗಿ ನೆಲಸಿದ ಒಂದೆರಡು ವಾರಗಳಲ್ಲಿ ಕತ್ತನ್ನು ಯಾರೋ ಹಿಸುಕಿದಂತೆ, ಬಲವಾಗಿ ಅದುಮಿದಂತೆ ಆಗಲು ಶುರುವಾಯಿತು' ಎಂದಾಕೆ ಲಕ್ಷಣವಾಗಿ ಹೇಳಿದಳು. ಆದರೆ ಅತ್ಯಗತ್ಯವಾದ ವಿಷಯವನ್ನು ಮರೆಮಾಚಿದ್ದಳು. ಆದಕಾರಣ ತಿರುಗಿ ಪ್ರಶ್ನಿಸಬೇಕಾಯಿತು. 'ಆಯ್ತಮ್ಮ ! ಆದರೆ ಆ ಮನೆಗೆ ಹೋಗುವುದು ಬೇಡ ಅಂತ ಯಾಕೆ ಹೇಳಿದಿರಿ ?' ಎಂದು ಕೇಳಿದೆ. 'ಸಲ್ಮಾಳ ನಿಕಾಕ್ಕೆ ಹೋಗಿದ್ದಾಗ, ಸಂಬಂಧಿಯೊಬ್ಬರು ಹೇಳಿದ್ದರು. ಆ ಮನೆಯಲ್ಲಿ ಹಿಂದೆ ಎಂದೋ ಮನೆಯಳಿಯ ಬಾವಿಯಲ್ಲಿ ಬಿದ್ದು ತೀರಿಕೊಂಡಿದ್ದ ಅಂತ. ಅವನಿಗೆ ಹೂ ಸೈತಾನ್ ಬಡಿದಿತ್ತು ಅಂತ, ಇನ್ನು ಯಾರೋ ಅಂದರು, ಆತ್ಮಹತ್ಯೆ ಏನಲ್ಲ ಅದು ಹೆಂಡತಿಯೇ, ತನ್ನ ವಿಟನ ಸಹಾಯದಿಂದ ಗಂಡನನ್ನು ಬಾವಿಗೆ ತಳ್ಳಿದ್ದಳು ಅಂತ. ಅವನು ಈಗ ಮನೆಗೆ ಬಂದವರನ್ನು ಸೈತಾನ್ ಆಗಿ ಕಾಡುತ್ತಾನೆ ಎಂದು ನಾನೇನೂ ನಂಬುವುದಿಲ್ಲ. ಆದರೆ ಆ ಮನೆಗೆ ಹೋದಮೇಲೆ ಹೀಗಾಗುತ್ತಿರುವುದನ್ನು ನೋಡಿದರೆ, ಹಾಗೂ ಆಗಿರಬಹುದೋ ಎಂದು ಅನುಮಾನ ಬರುತ್ತದೆ' ಎಂದಳು.