೩೧
ಕೇಳಿಲ್ಲ. ತನ್ನ ತೌರಿನ ಶ್ರೀಮಂತಿಕೆಯನ್ನು ನನ್ನೆದುರು ಬಡಾಯಿಸಿಲ್ಲ. ಆಕೆಯ ವಿಷಯದಲ್ಲಿ ಕೃತಜ್ಞತೆಯೂ ಇದೆ' ಎಂದು ಹೃದಯಬಿಚ್ಚಿ ಮಾತನಾಡಿದ, ಹೆಂಡತಿಯ ಆರೋಗ್ಯದ ಪರ ಅವನಿಗೂ ತುಂಬಾ ಆಸಕ್ತಿ ಇದೆ ಎನ್ನುವುದು ಖಚಿತವಾಯಿತು.
“ನಿನ್ನ ಜಾಣತನ, ವಿಚಾರಪರತೆ, ವ್ಯವಹಾರ ಕುಶಲತೆ, ಎಲ್ಲವೂ ಒತ್ತಟ್ಟಿಗಿರಲಿ. ನಿನ್ನ ಹೆಂಡತಿ ಹೀಗೆ ನರಳಬಾರದು ಅಲ್ಲವೇ ? ಬೇಗ ಗುಣವಾಗಬೇಕು ಅಲ್ಲವೇ ? ಈಗ ನಾನು ಹೇಳಿದ ಹಾಗೆ ಕೇಳು. ಡಾಕ್ಟರಿಗೂ ಮೂಢ ನಂಬಿಕೆಯೇ ಅಂತ ನಗಬೇಡ.
ಆ ಮನೆಯನ್ನು ಆದಷ್ಟು ಬೇಗ ಖಾಲಿ ಮಾಡು. ಬೇರೆ ಮನೆಗೆ ಹೋಗು. ಸೈತಾನನನ್ನು ಹೊಡೆದಟ್ಟುವ ಫಕೀರರಾರಾದರೂಇದ್ದರೆ ಅವರನ್ನು ಕರೆಸಿ ಪೂಜೆ ಹಾಕಿಸು. ಇದೆಂತಹಾ ಮೂಢತನ ಎಂದು ಅಲ್ಲಗಳೆಯಬೇಡ. ನಿನ್ನ ನನ್ನ ವಿದ್ಯೆಯ ಕಲಿಯುವಿಕೆಯಾಗಲೀ, ಪ್ರಪಂಚದ ಅರಿವಾಗಲೀ ನಿನ್ನ ಹೆಂಡತಿಗೆ ಇಲ್ಲ. ಅವಳು ನೇರವಾಗಿ ಒಪ್ಪದಿದ್ದರೂ, ಆಳ ಮನಸ್ಸಿನಲ್ಲಿ ಈ ಭಯವು ಬಲವಾಗಿದೆ. ಆ ಭಯವನ್ನು ನಿವಾರಿಸಿದರೆ, ಅರ್ಧದಷ್ಟಾದರೂ ನರಳುವಿಕೆಯಿಂದ ಶಮನವಾಗುತ್ತದೆ' ಎಂದು ಹೇಳಿದೆ. ಅವನೂ ಒಪ್ಪಿದ. ತಿಂಗಳೊಂದರಲ್ಲಿ ಬೇರೆ ಮನೆಗೆ ಹೋದೆ ಎಂದು ಹೇಳಿದ.
ಬೇರೆ ಮನೆಗೆ ಹೋದ ಮೇಲೂ ಕತ್ತು ಅದುಮುವ ಪ್ರಸಂಗಗಳು ಸಂಪೂರ್ಣವಾಗಿ ನಿಲ್ಲಲಿಲ್ಲ. ಆದರೆ ವಾರಕ್ಕೆರಡು ಮೂರು ಬಾರಿ ಆಗುತ್ತಿದ್ದುದು, ಈಗ ಎರಡು ಮೂರು ತಿಂಗಳುಗಳಿಗೊಮ್ಮೆ, ಅಲ್ಲದೆ ಆವೇಶಗಳ ತೀವ್ರತೆಯೂ ಗಮನೀಯವಾಗಿ ಕಡಿಮೆಯಾಗಿದೆ.
ಆತಂಕಪಡುವ ಸ್ವಭಾವವನ್ನು ಆಕೆ ಹುಟ್ಟಿನಿಂದಲೂ ಹೊಂದಿದ್ದಳು. ಕಲಿಕೆ ಯಾಗಲೀ, ಪ್ರಪಂಚದ ನಾಗರಿಕ ಸಂಪರ್ಕವಾಗಲಿ ಇಲ್ಲದುದರಿಂದ, ಮೂಢನಂಬಿಕೆಗಳು ದೃಢವಾಗುತ್ತಿದ್ದುವು. ಅಂತಹ ಸೈತಾನ್ ನಂಬಿಕೆಯು ಎಂದೋ ಮನಸ್ಸಿನಲ್ಲಿ ನೆಟ್ಟಿತ್ತು. ಅವಕಾಶ ದೊರೆತಾಗ ಚಿಗುರಿ, ಬೆಳೆಯಲಾರಂಭಿಸಿತು. ತೀವ್ರ ತಳಮಳದ ಹಂತಕ್ಕೆ, ಆಕೆಯ ಆತಂಕವು ಏರಬೇಕಾದರೆ, ಅವ್ಯಕ್ತವಾದ ಕಾರಣಗಳು ಇನ್ನೂ ಹಲವಾರು ಇರಲೇಬೇಕು. ಅವೆಲ್ಲವೂ ತಮ್ಮಷ್ಟಕ್ಕೆ ತಾವೇ, ಕಾಲಾನುಕೂಲವಾದಾಗ ಶಮನಗೊಳ್ಳುತ್ತವೆ. ದೊಡ್ಡದಾಗಿ ಕಾಡುವ, ಭಯ ಹುಟ್ಟಿಸುವ ಸೈತಾನನನ್ನು ಉಚ್ಚಾಟನೆ ಮಾಡಿದರೆ ಮಿಕ್ಕ ಚಿಕಿತ್ಸೆಯು ಸುಲಭ ಸಾಧ್ಯ.