ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೪

ಮನಮಂಥನ

ಭಂಡಾರವು ಹೆಚ್ಚಿದಂತೆಲ್ಲ, ಅದರ ಸ್ಮರಣ ಕೋಶವು ಹಿರಿದಾದಂತೆಲ್ಲ ಕಾರ್ಟೆಕ್ಸ್ ಕೂಡ ಹೊರವಾಗಿ ಬೆಳೆಯುತ್ತದೆ. ಬೆಳೆಯುವಾಗಲೂ ಕೂಡ ಮೆದುಳಿನ ಬುಡದೊಂದಿಗೆ ನಿಕಟ ಸಂಪರ್ಕವನ್ನು ಬಲಪಡಿಸಿಕೊಂಡಿರುತ್ತದೆ. ಮೆದುಳಿನ ಬುಡದಲ್ಲಿ ಶ್ವಾಸಕಾರ್ಯವನ್ನು ನಿಯಂತ್ರಿಸುವ ಮುಖ್ಯ ಕೇಂದ್ರಗಳಿರುವುವು. ಮೆದುಳಿನ ಕಾರ್ಟೆಕ್ಸ್ ಭಾಗವು ವೃದ್ಧಿಯಾದಂತೆಲ್ಲ, ಆತಂಕವು ಉಂಟಾಗಬಹುದಾದ ಸನ್ನಿವೇಶಗಳು ಸಂಭವಿಸಲೇಬೇಕು. ಅದೇ ಬಾಳು. ಹಾಗೆ ಆತಂಕವು ಮೂಡಿದಾಗ ಶ್ವಾಸಕಾರ್ಯದ ಕೇಂದ್ರಗಳು ಆತಂಕಕ್ಕೆ ಅನುಗುಣವಾಗಿ ತಲ್ಲಣಿಸುತ್ತವೆ. ಅಂದರೆ ಶ್ವಾಸಕೋಶದ ಕಾರ್ಯಗಳು ಏರುಪೇರಾದಂತೆ, ತಾಪತ್ರಯಪಡುತ್ತಿರುವಂತೆ ಮನಸ್ಸಿಗೆ ಭಾಸವಾಗುತ್ತದೆ. ಶ್ವಾಸಕೋಶದ ಕೇಂದ್ರಗಳು ತಲ್ಲಣಿಸುವ ಬದಲು ಕೆರಳಿದರೆ, ಆಗ ಶ್ವಾಸಕಾರ್ಯವು ದಿಟವಾಗಲೂ ಏರುಪೇರಾಗುತ್ತದೆ. ಶ್ವಾಸಕೇಂದ್ರಗಳು ತಲ್ಲಣಿಸುವಾಗ, ದೀರ್ಘವಾಗಿ ನಿಟ್ಟುಸಿರು ಬಿಡುವುದು, ಭಯಂಕರವಾಗಿ ಆಕಳಿಸುವುದು, ಬೇಗ ಬೇಗ ಉಸಿರನ್ನು ಮೇಲೆ ಮೇಲೆ ಎಳೆದುಕೊಳ್ಳುವುದು, ಇವೆಲ್ಲವೂ ನಡೆಯುತ್ತವೆ. ಇವೆಲ್ಲವೂ ಆತಂಕದ ಸಾಮಾನ್ಯ ಚಿಹ್ನೆಗಳು. ಎಲ್ಲರೂ ಕಂಡಿರುವ ವಿಷಯ. ಆದರೆ ಆತಂಕವು ಅತಿಯಾದರೆ, ಆಗ ಉಸಿರಾಟದ ತುಸು ಏರುಪೇರುಗಳು ಗಮನಕ್ಕೆ ಬರುತ್ತವೆ. ಅಲ್ಲದೆ ಭೂತಕನ್ನಡಿಯಲ್ಲಿ ನೋಡಿದಂತೆ, ಬೃಹತ್ ಪ್ರಮಾಣದಲ್ಲಿದ್ದಂತೆ ಭಾಸವಾಗುತ್ತವೆ. ಭೂತಕನ್ನಡಿಯಲ್ಲಿ ಕಂಡಂತೆಯೇ ಹೊರತು ದಿಟವಾಗಲೂ ಬೃಹತ್‌ ಪ್ರಮಾಣದ್ದೇನೂ ಅಲ್ಲವೇ ಅಲ್ಲ. ಭೂತ ಕನ್ನಡಿಯ ಬೃಹತ್ ಏರುಪೇರು, ಅಯ್ಯೋ! ಉಸಿರು ನಿಂತು ಹೋಗುವುದಲ್ಲ, ಶ್ವಾಸಕೋಶವು ಬೆಲೂನ್ ಆಯಿತಲ್ಲ, ಪ್ರಾಣವಾಯುವು ಹಾರಿಹೋಗಿ ಬಿಡುತ್ತಲ್ಲ' ಎಂಬ ದೊಡ್ಡದಾದ ಭಯಪೂರಿತವಾದ ಆತಂಕವಾಗುತ್ತದೆ. ಅತಿಯಾಗಿ ಕಳವಳಪಡಿಸಿ ಕಾಡುತ್ತದೆ. ಭಾರೀ ಪ್ರಮಾಣದ ಈ ಆತಂಕದ ಮುಂದೆ, ಮನಸ್ಸಿನಲ್ಲಿ ಮೂಡಿದ್ದ ಬಾಳಿನಿಂದುಂಟಾದ ಮೊದಲ ಆತಂಕವು ಅಲ್ಪವಾಗುತ್ತದೆ. ಗಮನಕ್ಕೆ ಬರುವುದೇ ಇಲ್ಲ. ಶ್ವಾಸಕಾರ್ಯದ ಪ್ರಾಣರಂಗನ ಆತಂಕದ ಮುಂದೆ ಬಾಳಸಿಂಗನ ಚಿಲ್ಲರೆ ಆತಂಕಗಳು ಹೇಗೆ ತಾನೆ ಮೆರೆಯಲು ಸಾಧ್ಯ ! ದೊಡ್ಡಗೌಡ ದೊಣ್ಣೆ ಹಿಡಿದು ಹೆದರಿಸುತ್ತಿರುವಾಗ, ಚಿಕ್ಕೇಗೌಡನ ಕೀಟಳೆಯನ್ನು ಯಾರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ?

ಮಾಡಲು ಯಾವ ಕೆಲಸವೂ ಇರದಿದ್ದಾಗ, ಅಥವಾ ಕಾರಣಾಂತರದಿಂದ ಕೆಲಸ ಮಾಡಲು ಬೇಸರ ತುಂಬಿದಾಗ, ದೇಹದ ಎಲ್ಲ ಕಾರ್ಯಗಳೂ ಮಂದಗತಿಯಲ್ಲಿ ನಡೆಯುತ್ತವೆ. ಉಸಿರಾಡುವುದೂ ಹಗುರವಾಗಿ ಮಂದಗತಿಯಲ್ಲಿ