ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೬

ಮನಮಂಥನ

ಹೃದಯದ ಕಾರ್ಯದ ಅವ್ಯವಸ್ಥೆಗಳು

೧. ಕುಂಟಬಿಲ್ಲೆ ಆಡುವ ನಾಡಿ

ಶ್ವಾಸಕಾರ್ಯದ ಮೇಲೆ ಆತಂಕವು ಯಾವ ಯಾವ ರೀತಿಯಲ್ಲಿ ಅವ್ಯವಸ್ಥೆಯನ್ನುಂಟುಮಾಡುವುದು ಎಂಬುದನ್ನು ತಿಳಿದೆವು. ಶ್ವಾಸಕಾರ್ಯದಷ್ಟೇ, ಹೃದಯದ ಕಾರ್ಯವೂ ದೇಹದ ಜೀವಂತ ಆರೋಗ್ಯಕ್ಕೆ ಅತ್ಯಗತ್ಯ. ಆತಂಕವು ಹೃದಯದ ಕಾರ್ಯದಲ್ಲಿಯೂ ಅವ್ಯವಸ್ಥೆಗಳನ್ನು ಹೂಡುತ್ತದೆ. ಸಾಮಾನ್ಯವಾಗಿ ಕಾಣಬರುವ ಹಲವಾರು ತೆರನ ಹೃದಯದ ಏರುಪೇರು ಕಾರ್ಯವನ್ನು ಪರಿಶೀಲಿಸೋಣ.

ದಷ್ಟ ಪುಷ್ಟ ಬುದ್ಧಿಜೀವಿ, ಅವ. ಸುಮಾರು ನಲವತ್ತರ ಬಲಿತ ಪ್ರಾಯ. ಸಹೋದ್ಯೋಗಿ ಲಾಯರುಗಳಿಂದ ಮನ್ನಣೆಯನ್ನು ಗಳಿಸಿದ್ದವ. ಯಥೇಚ್ಚವಾದ ಸಂಪಾದನೆಯೂ ಇತ್ತು. ಮಿತಿಮೀರಿ ದುಡಿಯುತ್ತಲೂ ಇದ್ದ. 'ದುಡಿಮೆಯಿಂದಲೇ ಬಾಳು ಸಾರ್ಥಕ. ನಿಸ್ಪೃಹತೆಯಿಂದ ಎಷ್ಟು ದುಡಿದರೂ ದೇಹವು ದಣಿಯುವುದೇ ಇಲ್ಲ. ಬೇನೆ ಬೀಳುವುದೂ ಇಲ್ಲ' ಎಂದವ ಹೆಮ್ಮೆಯಿಂದ, ಅವಕಾಶವು ಸಿಕ್ಕಿದಾಗಲೆಲ್ಲ ಡಂಗೂರ ಹೊಡೆಯುತ್ತಿದ್ದ. ಅಂದಮೇಲೆ ಅತ್ಯಂತ ಸ್ವಾಭಿಮಾನಿ ಎಂದು ಹೇಳಬೇಕೆ

ಒಂದು ಸಂಜೆ ಆರರ ಸಮಯದಲ್ಲಿ ತನ್ನ ಕೊಠಡಿಯಲ್ಲಿ ಒಡೋಲಗವನ್ನು ನಡೆಸುತ್ತಿದ್ದ. ಎದೆಯ ಎಡಭಾಗದಲ್ಲಿ ಚಳಕ್ ಅಂತ, ಅರೆ ಕ್ಷಣವೂ ಇರಲಾರದು, ಅನ್ನಿಸಿತಂತೆ. ಮಾಸಿಕ ಡೈಜೆಸ್ಟ್‌ಗಳನ್ನು ಓದುವ ವಿದ್ಯಾವಂತ, ಹೃದಯಾಘಾತದ ವಿವರಗಳು ತಿಳಿಯದೆ? ಬ್ಲಡ್ ಪ್ರೆಷರ್ ಎಂದರೆ ಗೊತ್ತಿಲ್ಲವೇ? ಮಿಂಚಿನಂತೆ ಚಳಕ ಹೊಡೆದುದು ಹೃದಯ ಬೇನೆಯ ಮುನ್ಸೂಚನೆಯೇ ಇರಬೇಕು ಎಂದು ಸಹಜವಾಗಿ ಊಹಿಸಿದ. ಆದಕಾರಣ 'ನನಗೆ ಮೈ ಸ್ವಸ್ಥವಿಲ್ಲ. ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತೇನೆ. ನಾಳೆ ಬೆಳಗ್ಗೆ ನೀವು ಬನ್ನಿ, ನಿಮ್ಮ ಮೊಕದ್ದಮೆಗಳನ್ನು ಚರ್ಚಿಸೋಣ' ಎಂದು ಅಲ್ಲಿದ್ದ ಕಕ್ಷಿಗಾರರಿಗೆ ಹೇಳಿ ಒಡೋಲಗವನ್ನು ಬಂದು ಮಾಡಿ, ಮನೆಗೆ ಹೋಗುವ ಮೊದಲು, ದಢ ದಢ ಡಾಕ್ಟರ ಬಳಿಗೆ ಓಡಿದ. ನಲವತ್ತರ ಮಟ್ಟದ ಧಡಿಯ ಎದೆ ಚಳಕು ಎಂದರೆ ಸ್ವಾಭಾವಿಕವಾಗಿ ಬ್ಲಡ್‌ ಪ್ರೆಷರ್ ಎಷ್ಟಿದೆ ಎನ್ನುವುದನ್ನು ಡಾಕ್ಟರು ನೋಡಲೇಬೇಕು. ಡಾಕ್ಟರು ನೋಡಬಯಸದೆ ಇದ್ದರೂ, ಓದಿದ ರೋಗಿ ಸುಮ್ಮನಿರುತ್ತಾನೆಯೇ? 'ಬ್ಲಡ್ ಪ್ರೆಷರನ್ನು ಡಾಕ್ಟರು ಪರೀಕ್ಷಿಸಿದರು. ಹೃದಯವನ್ನೂ ಬಲು ಎಚ್ಚರಿಕೆಯಿಂದ ಪರೀಕ್ಷಿಸಿದರು. ಬ್ಲಡ್ ಪ್ರೆಷರ್ ಹೆಚ್ಚಾಗಿದೆಯೇ? 'ಎಷ್ಟು ಹೆಚ್ಚಾಗಿದೆ?' ಎಂದು ಆಗ್ರಹಪೂರ್ವಕವಾಗಿ ರೋಗಿಯು ಕೇಳಿದ. 'ನೂರ ಅರವತ್ತು ; ತೊಂಭತ್ತು.