೩೭
ಅದೇನೂ ಹೆಚ್ಚಾಗಿಲ್ಲ. ನಿಮ್ಮ ವಯಸ್ಸು, ನಿಮ್ಮ ಕಾತರ ಇವುಗಳಿಗೆ ಸರಿಯಾಗಿದೆ. ಹೃದಯವು ಫಸ್ಟ್ ಕ್ಲಾಸ್ ಆಗಿದೆ' ಎಂದರು ಡಾಕ್ಟರು. ಇನ್ನೂ ಏನನ್ನೋ ಹೇಳಬೇಕು, ಅವರು, ಆದರೆ ಮಧ್ಯದಲ್ಲಿಯೇ ಬಾಯಿ ಹಾಕಿ, 'ನನ್ನ ವಯಸ್ಸಿಗೆ ನೂರು ಮತ್ತು ನಲವತ್ತು ಪ್ರೆಷರ್ ಇರಬೇಕಲ್ಲವೇ ? ಇಪ್ಪತ್ತರಷ್ಟು ಹೆಚ್ಚಾಗಿದೆಯಲ್ಲವೇ' ಎಂದು ರೋಗಿಯು ಕೇಳಿದ. 'ಹಾಗೇನಲ್ಲ, ಕೋಪವು ಉಕ್ಕಿದಾಗ ಬ್ಲಡ್ ಪ್ರೆಷರ್ ಏರಿರುತ್ತೆ. ಶಾಂತವಾದಾಗ ಇಳಿಯುತ್ತೆ. ೩೦-೪೦ ಮಿಲಿಮೀಟರುಗಳಷ್ಟು ಏರುಪೇರಾಗುತ್ತದೆ. ಉದ್ವೇಗವು ತೋರಿದರೂ ಹಾಗೆಯೇ ಆಗುತ್ತೆ. ಆತಂಕದಿಂದಲೂ ಹೀಗಾಗುತ್ತೆ. ನಿಮ್ಮ ಎದೆಯ ಕ್ಷಣಾಂಶದ ಚಳಕು, ಹೃದಯದ ಅವ್ಯವಸ್ಥೆಯಿಂದಾಗಲೀ, ಬ್ಲಡ್ ಪ್ರೆಷರಿನ ಈ ಮಟ್ಟದಿಂದಾಗಲೀ, ಖಂಡಿತವಾಗಿ ಆದುದಲ್ಲ.' ಎಂದು ಗಿಣಿಗೆ ಹೇಳಿದ ಹಾಗೆ ಡಾಕ್ಟರು ಹೇಳಿದರು. “ಈ ಮಾತ್ರೆಗಳನ್ನು ತೆಗೆದುಕೊಳ್ಳಿ ಸುಖನಿದ್ರೆ ಬರುತ್ತದೆ. ಬೆಳಿಗ್ಗೆ ಹೊತ್ತಿಗೆ ಆರಾಮವಾಗಿರ್ತಿರಿ' ಎಂದು ಎರಡು ಮಾತ್ರೆಗಳನ್ನು ಕೊಟ್ಟು ಕಳಿಸಿದರು.
ಗಿಣಿಗೆ ಹೇಳಿದ ಹಾಗೆ ಡಾಕ್ಟರು ಹೇಳಿದರು. ಮರುನುಡಿಯಲು ಮಾತ್ರ ಕಲಿಯುವ ಗಿಣಿಗೆ ಎಷ್ಟು ಅರ್ಥವಾಗುತ್ತೋ ಅಷ್ಟೇ ರೋಗಿಯ ಮನಸ್ಸಿಗೂ ನಾಟಿದ್ದು. ಮನೆಗೆ ಮಾತ್ರೆಗಳನ್ನು ಹಿಡಿದುಕೊಂಡು ಹಿಂತಿರುಗಿದ. ಅಷ್ಟು ಬೇಗ ಸಂಜೆಯ ವೇಳೆಯಲ್ಲಿ ಗಂಡ ಮನೆಗೆ ಬಂದಿದ್ದನ್ನು ಹೆಂಡತಿಯು ಕಂಡಿರಲೇ ಇಲ್ಲ. ಗಂಡನಿಗೆ ಏನಾಗಿರಬಹುದು ? ಯಾಕೆ ಬೇಗ ಬಂದರು ? ಎಂದು ಆಕೆಗೂ ಕಾತರವಾಯಿತು. 'ಯಾಕಂದ್ರೆ ಇಷ್ಟು ಸುಸ್ತಾಗಿದ್ದೀರಿ ? ಏನಾಯ್ತು ಅಂದ್ರೆ ?' ಎಂದು ಬಡಬಡ ಕೇಳಿದಳು. 'ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸುವಷ್ಟು ಬೇನೆ ಬಡಿದಿದೆಯೆ ?' ಎಂದುಕೊಂಡ, ರೋಗಿ. ನಿಟ್ಟುಸಿರುಬಿಟ್ಟ, 'ಯಾಕೋ ಸ್ವಲ್ಪ ಸುಸ್ತಾಗಿತ್ತು, ಅದಕ್ಕೆ ಬೇಗ ಬಂದೆ' ಎಂದು ಕಿರುದನಿಯಲ್ಲಿ ಹೇಳಿ ತನ್ನ ಕೊಠಡಿಗೆ ಹೋದ. ಬಟ್ಟೆ ಕಳಚಿ, ಹಾಸಿಗೆ ಹಿಡಿದ. 'ಸ್ವಲ್ಪ ಹೊತ್ತು ಮಲಗಿರುತ್ತೇನೆ, ಆಮೇಲೆ ಎದ್ದು ಬಂದು ಊಟ ಮಾಡುತ್ತೇನೆ' ಎಂದ. ಒಂದರ್ಧ ಗಂಟೆಯಾದ ಮೇಲೆ ಎದ್ದ. ಆ ರಾತ್ರಿ ಹಾಲನ್ನವನ್ನು ಮಾತ್ರ ಉಂಡ. 'ಇದೇನೂ ಅಂದ್ರೆ ? ಬಟಾಣಿಕಾಳು ಉಸುಲಿ ಮಾಡಿದ್ದೇನೆ, ಈರುಳ್ಳಿ ಹುಳಿ ಮಾಡಿದ್ದೇನೆ, ಬಾಳಕ ಕರೆದಿಟ್ಟಿದ್ದೇನೆ. ಎಲ್ಲಾ ಬಿಟ್ಟು ಹಾಲು, ಅನ್ನ ! ಏನಾಗಿದೆ ಅಂದ್ರೆ ?' ಎಂದು ಆಕೆ ಅಳುಕ್ಕೆ ಶುರು ಮಾಡಿದಳು. 'ಏನೂ ಆಗಿಲ್ಲ ಕಣೇ ! ಸುಮ್ಮಸುಮ್ಮನೆ ನೀನ್ಯಾಕೆ ಆಳ್ವ ? ಈಗಲೇನೇ ? ಎದೆಯಲ್ಲಿ ಏನೋ ಚಳಕ ಅಂದಿತು. ಡಾಕ್ಟರ್ ಹತ್ತಿರ ಹೋಗಿದ್ದೆ. ಏನೂ ಇಲ್ಲ. ಚೆನ್ನಾಗಿದ್ದಿ ಅಂದರು. ಸ್ವಲ್ಪ ಬ್ಲಡ್ ಪ್ರೆಷರ್ ಏರಿತ್ತು.