ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೩೯

ನ್ಯಾಯಾಧೀಶನಾಗಬೇಕು ಎನ್ನುವ ಹೆಬ್ಬಯಕೆ ಅವನಿಗೆ. ನನ್ನಂತಹ ಜಾಣನಿಗಲ್ಲದೆ, ಮತ್ತೆ ಯಾರಿಗೆ ತಾನೇ ಆ ಯೋಗ್ಯತೆ ಇದೆ ? ಎಂದೆನ್ನುವ ಆಸೆ ಮತ್ತು ದುರಭಿಮಾನ ಅವನಿಗಿತ್ತು. ತಾನಿದ್ದ ಊರಿನಲ್ಲಿ ಅವನೇ ಹುಲಿಯಾಗಿದ್ದ. ಅಲ್ಲಿ ದೊರಕಿದ ಮನ್ನಣೆಯೇ ಅವನನ್ನು ದಿಳ್ಳಿಯತ್ತ ಬೆರಳುಮಾಡಿ ಅಟ್ಟಿತು. ಆರೆಂಟು ತಿಂಗಳು ಅಲ್ಲಿಗೆ ಹೋಗಿ ಒಂದು ಕೈ ನೋಡಿದ, ಅವಲಕ್ಷಣ ಎನ್ನಿಸಿಕೊಂಡ. ಮರಳಿ ತನ್ನೂರಿಗೆ ವಾಪಸು ಬಂದ. ಅಷ್ಟು ಕಾಲ ಊರು ಬಿಟ್ಟಿದ್ದರೂ, ತಿರುಗಿ ತನ್ನ ಕೆಲಸವನ್ನು ಶುರುಮಾಡಿದಾಗ, ಯಾವ ಕೊರತೆಯೂ ಕಾಣಬರಲಿಲ್ಲ. ಎಂದಿನಂತೆ ಸ್ವಲ್ಪ ಕಾಲದಲ್ಲೇ ಕಚೇರಿಯ ಒಡೋಲಗವು ನಡೆಯಹತ್ತಿತ್ತು.

ಆದರೆ ಆ ದಿಳ್ಳಿಯ ಆಸೆ ಪಾಶವನ್ನು ಬಿಗಿದೆಳೆಯುತ್ತಿತ್ತು. ಪುಟ್ಟ ಊರಿನಲ್ಲಿ ದೊಡ್ಡವನಾಗಿರುವುದಷ್ಟೇ ನನ್ನ ಪಾಲಿನ ಪಂಚಾಮೃತ, ಎಂದು ಅವ ವಾಸ್ತವಿಕ ಪರಿಸ್ಥಿತಿಯನ್ನು ಮನದಾಳದಲ್ಲಿ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಆಸೆ, ವಾಸ್ತವಿಕ ಪರಿಸ್ಥಿತಿ ; ಇವೆರಡರ ಹೋರಾಟದಲ್ಲಿ ಇವ ಖಚಿತ ನಿರ್ಣಯವನ್ನು ಮಾಡಲಾರದೆ, ಆತಂಕದಿಂದ ನರಳುತ್ತಿದ್ದ. ಮನಸ್ಸು ಚಿಟಿಚಿಟಿಗುಡುತ್ತಿತ್ತು.

ಓದಿದ ಲೇಖನಗಳಿಂದ ಹೃದಯಾಘಾತದ ವಿವರಗಳನ್ನು ಅರ್ಧಂಬರ್ಧ ತಿಳಿದು ಕೊಂಡಿದ್ದ. ಎದೆಯಲ್ಲಿ ಚಳಕ ಎಂದಾಗ, ಆತಂಕದಿಂದ ತುಂಬಿಕೊಂಡಿದ್ದ ಮನಸ್ಸು ಅತಿ ಕೆಟ್ಟುದನ್ನೇ ಎತ್ತಿ ತೋರಿಸಿತು. ಹೃದಯಾಘಾತ, ಏರಿದ ಬ್ಲಡ್ ಪ್ರೆಷರ್, ಇವೇ ಸದಾಕಾಲ ಕಾಡುವ ಸದಾಶಿವನ ಧ್ಯಾನವಾಯಿತು. ನಾಡಿಯ ಬಡಿತದಲ್ಲಿ ಸ್ವಲ್ಪ ವ್ಯತ್ಯಾಸವಾದರೂ, ಕುಂಟೆಬಿಲ್ಲೆ ಆಡುತ್ತಿದೆ ನಾಡಿ, ಸರಿಯಾಗಿ ನಡೆಯುತ್ತಿಲ್ಲ ಎಂದು ನಾಡಿಯ ಮೇಲಿನ ಬೆರಳನ್ನು ತೆಗೆಯದೇ ತವಕಪಡಲಾರಂಭಿಸುತ್ತಿದ್ದ. ಅವನು ತವಕಪಟ್ಟಷ್ಟು ನಾಡಿಯು ಏರುಪೇರಾಗುವುದು ಹೆಚ್ಚುತ್ತಿತ್ತು. ಮುಂದೆ ಹೇಗಪ್ಪಾ ಬಾಳುವುದು, ಎನ್ನುವ ಭವಿಷ್ಯದ ಭಯವೂ ಜತೆಜತೆಯಲ್ಲೇ ನೆರಳಿನಂತೆ ಬಂತು ಭೂತದಂತೆ ಹೆದರಿಸುತ್ತಿತ್ತು.

ಇವೆಲ್ಲ ವಿವರಗಳನ್ನೂ ಅವನಿಗೆ ಪುನಃ ಪುನಃ ಮಂದಟ್ಟು ಮಾಡಿಕೊಡಲಾಯಿತು. 'ತೌರಿಗೆಂದು ಒಂದು ವಾರ ಹೆಂಡತಿಯನ್ನು ಕಳಿಸಿಕೊಡು; ಒಬ್ಬನೇ ಇದ್ದರೆ ಧೈರ್ಯವೂ ಬರುತ್ತದೆ' ಎಂದು ಪುಸಲಾಯಿಸಿ ಒಪ್ಪಿಸಿ, ಆಕೆಗೆ ಅಗತ್ಯವಾದ ವಿರಾಮವನ್ನೂ ಕೊಡಿಸಲಾಯಿತು. 'ನಾನಿದ್ದೇನಲ್ಲ ! ನಿನಗೆ ಇನ್ನಾತರ ಭಯ' ಎಂದು ಧೈರ್ಯವನ್ನು ತುಂಬಿದ್ದಾಯಿತು. ಈ ಮಾತಿನ ದ್ವಂದ್ವಾರ್ಥ, ಸದ್ಯ ಅವನಿಗೆ ಹೊಳೆಯಲಿಲ್ಲ. ಒಂದು ವಾರ ಒಬ್ಬನೇ ಇದ್ದ. ತಕ್ಕಮಟ್ಟಿಗೆ ಚೆನ್ನಾಗಿಯೇ ಇದ್ದ.